ಒಂದೊಂದು ಹನಿ ನೀರಿಗೆ ಬಾಯಾರಿದೆ ಭೂಮಿ!

ಪ್ರತಿಯೊಬ್ಬನ ಅವಶ್ಯಕ ವಸ್ತುಗಳಲ್ಲಿ ನೀರಿಗೆ ಮೊದಲ ಸ್ಥಾನ. ನೀರಿಲ್ಲದೆ ಮನುಷ್ಯನ ಯಾವ ಚಟುವಟಿಕೆ ಕೂಡ ನಡೆಯುವುದಿಲ್ಲ. ನೀರು ಕುಡಿಯದೆ ಮನುಷ್ಯ ಹೆಚ್ಚು ದಿನ ಬದುಕಲು ಸಾಧ್ಯವೇ ಇಲ್ಲ. ಆದ್ದರಿಂದ ಈ ವಿಶ್ವ ಜಲದಿನವು (ಮಾ. 22) ತುಂಬಾ ಪ್ರಾಮುಖ್ಯತೆ ಪಡೆಯುತ್ತದೆ. 1993ರಿಂದ ವಿಶ್ವಸಂಸ್ಥೆಯು ಈ ದಿನವನ್ನು ಜಾಗತಿಕವಾಗಿ ಆಚರಿಸಿಕೊಂಡು ಬಂದಿದೆ. 2030ರ ವೇಳೆಗೆ ಜಗತ್ತಿನ ಪ್ರತಿಯೊಬ್ಬನಿಗೂ ಅಗತ್ಯವಾದ ಕುಡಿಯುವ ನೀರು ಒದಗಿಸುವುದು ವಿಶ್ವಸಂಸ್ಥೆಯ ಪ್ರಮುಖ ಗುರಿಗಳಲ್ಲಿ (SDG) ಒಂದು. ಆದರೆ ಈ ಗುರಿಗಳನ್ನು ತಲುಪಲು ನಾವು ಸಾಕಷ್ಟು ದುರ್ಗಮವಾದ ದಾರಿಯನ್ನು ಕ್ರಮಿಸಬೇಕಾಗಿದೆ ಎಂದು ವಿಶ್ವಸಂಸ್ಥೆಯು ಅಭಿಪ್ರಾಯಪಟ್ಟಿದೆ.

ಕಾರಣಗಳು
-ಭೂಮಿಯ ಮೇಲೆ ಸಿಗುವ ನೀರಿನಲ್ಲಿ 3% ಮಾತ್ರ ಸಿಹಿ ನೀರಾಗಿದ್ದು ಕುಡಿಯಲು ಯೋಗ್ಯವಾಗಿದೆ!
-ಜಗತ್ತಿನಾದ್ಯಂತ 25% ಜನರಿಗೆ ಇನ್ನೂ ಕುಡಿಯುವ ಶುದ್ಧ ನೀರು ದೊರೆಯುತ್ತಿಲ್ಲ!
-ಜಗತ್ತಿನಾದ್ಯಂತ ವಾರ್ಷಿಕ ಅಂದಾಜು 14,00,000 ಮಂದಿ ಅಶುದ್ಧ ನೀರಿನ ಕಾರಣಕ್ಕೆ ಸಾವನ್ನು ಅಪ್ಪುತ್ತಾರೆ!
-ಜಗತ್ತಿನಾದ್ಯಂತ 50% ಮಂದಿಗೆ ಇನ್ನೂ ನೈರ್ಮಲ್ಯದ ರೆಸ್ಟ್ ರೂಮುಗಳು ದೊರೆತಿಲ್ಲ!
-2050ರ ಹೊತ್ತಿಗೆ ಜಗತ್ತಿನ ನೀರಿನ ಆವಶ್ಯಕತೆ 55% ಏರುತ್ತದೆ!
-ಪ್ರತಿಯೊಬ್ಬ ವ್ಯಕ್ತಿಯೂ ದಿನಕ್ಕೆ 45 ಲೀಟರ್ ನೀರನ್ನು ವ್ಯರ್ಥ ಮಾಡುತ್ತಾನೆ. ಇದನ್ನು ಉಳಿಸಿಕೊಳ್ಳಲು ಸಾಧ್ಯವಾದರೆ ಜಲಕ್ರಾಂತಿಯೇ ಆಗುತ್ತದೆ.
-ನೈರ್ಮಲ್ಯದ ಕೊರತೆಯಿಂದ ಪ್ರತೀ ವರ್ಷ ಸಾವನ್ನು ಅಪ್ಪುವವರ ಸಂಖ್ಯೆ ಜಗತ್ತಿನಲ್ಲಿ 8.2 ಲಕ್ಷ!
-ಜಗತ್ತಿನ 30%ಕ್ಕಿಂತ ಅಧಿಕ ಮಂದಿ ಅನಿವಾರ್ಯವಾಗಿ ಕಲುಷಿತ ನೀರನ್ನು ಕುಡಿಯುತ್ತಾರೆ. ಅದರಲ್ಲಿ ಆಫ್ರಿಕಾದ ಬಡ ರಾಷ್ಟ್ರಗಳ ಸಂಖ್ಯೆ ಜಾಸ್ತಿ ಇದೆ!
-ಸಾಕಷ್ಟು ಮಳೆ ಆಗುವ ಪ್ರದೇಶಗಳಲ್ಲೂ ಭೂಮಿಗೆ ಬಿದ್ದ 50% ಮಳೆ ನೀರು ಹರಿದು ಹೋಗಿ ಸಮುದ್ರವನ್ನು ಸೇರುತ್ತಿರುವ ಕಾರಣ ತೀವ್ರ ನೀರಿನ ಬರಗಾಲ ಎದುರಿಸುತ್ತವೆ. ಮಳೆ ನೀರು ಇಂಗಿಸುವ ಸರಳ ವಿಜ್ಞಾನವು ಜನಪ್ರಿಯತೆ ಪಡೆದಿಲ್ಲ ಅನ್ನುವುದು ದುರಂತ!
-ಜಗತ್ತಿನ ಅರ್ಧಾಂಶಕ್ಕಿಂತ ಹೆಚ್ಚು ನದಿಗಳು ಮಾನವನ ಕೃತ್ಯಗಳಿಂದ ಕಲುಷಿತವಾಗಿವೆ. ಅದರಲ್ಲಿಯೂ ಹೆಚ್ಚಿನ ಕಲುಷಿತ ನದಿಗಳು ಭಾರತದಲ್ಲಿಯೇ ಇವೆ. ಜಗತ್ತಿನ -ಅಪಾಯಕಾರಿ ಮಟ್ಟದ ಮಲಿನತೆಯ ನದಿಗಳಲ್ಲಿ ಗಂಗಾ ಮತ್ತು ಯಮುನಾ ಇವೆ!
-ಕಾನ್ಪುರದಲ್ಲಿ ಗಂಗಾ ನದಿಯ ದಡದಲ್ಲಿ ಬೀಡು ಬಿಟ್ಟಿರುವ ಚರ್ಮದ ಕಾರ್ಖಾನೆಗಳ ತ್ಯಾಜ್ಯ ನೀರು ನೇರವಾಗಿ ಗಂಗಾ ನದಿಯ ಗರ್ಭವನ್ನು ಸೇರುತ್ತಿರುವ ಕಾರಣ -ಆ ನೀರು ಕುಡಿಯಲು ಸರ್ವಥಾ ಯೋಗ್ಯವಲ್ಲ ಎಂದು ಆರೋಗ್ಯ ಸಂಸ್ಥೆಗಳು ಅಭಿಪ್ರಾಯ ಪಟ್ಟಿವೆ! ಭಾರತದ ಹೆಚ್ಚಿನ ನದಿಗಳ ಆರೋಗ್ಯವೂ ಹಾಗೆಯೇ ಇದೆ!
-ಉಷ್ಣವಿದ್ಯುತ್ ಸ್ಥಾವರಗಳು ಮತ್ತು ಅಪಾಯಕಾರಿ ಕಾರ್ಖಾನೆಗಳ ಚಿಮಣಿಗಳಿಂದ ಹೊರಬರುತ್ತಿರುವ ಕಾರ್ಬನ್ ಯುಕ್ತವಾದ ಹೊಗೆಯ ಕಾರಣದಿಂದ ಆಮ್ಲದ -ಮಳೆಯ ಪ್ರಮಾಣ ಹೆಚ್ಚಾಗುತ್ತಿದ್ದು ಕೃಷಿ ನಾಶವಾಗುತ್ತದೆ ಹಾಗೂ ಅಂತರ್ಜಲದ ಮಾಲಿನ್ಯತೆ ಉಂಟಾಗುತ್ತಿದೆ.

ಭರತವಾಕ್ಯ – ನೀರು ಪ್ರಕೃತಿಯ ಅಪೂರ್ವ ಕೊಡುಗೆಯಾಗಿದ್ದು ಅದನ್ನು ಪ್ರಯೋಗಾಲಯದಲ್ಲಿ ದೊಡ್ಡ ಮಟ್ಟದಲ್ಲಿ ಉತ್ಪಾದನೆ ಮಾಡಲು ಸಾಧ್ಯವಾಗಿಲ್ಲ. ಸಮುದ್ರದ ನೀರನ್ನು ಭಟ್ಟಿ ಇಳಿಸಿ ಶುದ್ಧವಾದ ಕುಡಿಯುವ ನೀರು ಪಡೆಯುವ ತಂತ್ರಜ್ಞಾನ ಕೆಲವು ದೇಶದಲ್ಲಿ ಯಶಸ್ವೀ ಆಗಿದ್ದು ಅದು ತುಂಬಾ ದುಬಾರಿ ಎಂದು ಅಭಿಪ್ರಾಯವು ವ್ಯಕ್ತವಾಗಿದೆ. ಆದ್ದರಿಂದ ಒಂದೊಂದು ಹನಿ ನೀರನ್ನು ಉಳಿಸುವ, ಜಾಗ್ರತೆಯಿಂದ ಬಳಸುವ ಬಗ್ಗೆ ನಾವೆಲ್ಲರೂ ಯೋಚಿಸಬೇಕಾಗಿದೆ. ಅಲ್ಲವೇ?





























































































error: Content is protected !!
Scroll to Top