ಕ್ರಿಮಿನಲ್ ಪ್ರಕರಣ – ಆರೋಪಿಯ ಸಾಂವಿಧಾನಿಕ ಹಕ್ಕುಗಳು

ಅಪರಾಧ ಶಾಸ್ತ್ರ ತತ್ವದ ಪ್ರಕಾರ ಯಾವುದೇ ಒಬ್ಬ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಆರೋಪವನ್ನು ಹೊರಿಸಿದ ಮಾತ್ರಕ್ಕೆ ಆತನನ್ನು ಅಪರಾಧಿ ಎಂದು ಪರಿಗಣಿಸುವಂತಿಲ್ಲ. ಕ್ರಿಮಿನಲ್ ಆರೋಪವನ್ನು ಎದುರಿಸುವ ವ್ಯಕ್ತಿಯ ಮೇಲಿನ ಆರೋಪವನ್ನು ಕಾನೂನಿನ ನಿಯಮಾನುಸಾರವಾಗಿ ಸಂಬಂಧಪಟ್ಟ ನ್ಯಾಯಾಲಯವು ತನಿಖೆ ನಡೆಸಿ ಆತನ ಮೇಲಿನ ಆರೋಪವು ರುಜುವಾತು ಆಗಿ ನ್ಯಾಯಾಲಯವು ಆತನನ್ನು ಅಪರಾಧಿ ಎಂದು ನಿರ್ಧರಿಸುವ ತನಕ ಆತನನ್ನು ತಪ್ಪಿತಸ್ಥ ಎಂದು ನಿರ್ಧರಿಸುವಂತಿಲ್ಲ.
ಈ ಕಾರಣದಿಂದ ಯಾವುದೇ ಒಂದು ಕ್ರಿಮಿನಲ್ ಅಪರಾಧದ ಆಪಾದನೆಯ ಆಧಾರದಲ್ಲಿ ಅಥವಾ ಇನ್ನಾವುದೇ ಕಾರಣಕ್ಕೆ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ ಸಂದರ್ಭದಲ್ಲಿ ಅಪರಾಧದ ಸ್ವರೂಪವು ಜಾಮೀನು (ಬೈಲೇಬಲ್) ದೊರೆಯುವಂತದ್ದು ಆದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023ರ ಸೆಕ್ಷನ್ 478ರ ಪ್ರಕಾರ ಆರೋಪಿಯು ಬಯಸಿದಲ್ಲಿ ಪೊಲೀಸರು ಆರೋಪಿಯಿಂದ ಸೂಕ್ತ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು ಆತನನ್ನು ಪೊಲೀಸ್ ಠಾಣೆಯಲ್ಲಿಯೇ ಬಿಡುಗಡೆ ಮಾಡಬಹುದಾಗಿದೆ. ಇಂತಹ ಅಪರಾಧದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ವ್ಯಕ್ತಿಯು ಜಾಮೀನಿನ ಮೇಲೆ ಬಿಡುಗಡೆ ಹೊಂದಿಾ ಅನಂತರ ತನ್ನ ಮೇಲಿನ ಅಪರಾಧದ ವಿರುದ್ಧ ಕಾನೂನಾತ್ಮಕವಾಗಿ ಹೋರಾಟವನ್ನು ನಡೆಸುವ ಸಾಂವಿಧಾನಿಕ ಹಕ್ಕನ್ನು ಹೊಂದಿರುತ್ತಾನೆ. ಜಾಮೀನೀಯ (ಬೈಲೇಬಲ್) ಅಪರಾಧದಲ್ಲಿ ಪೊಲೀಸರು ಸಕಾರಣದಿಂದ ಆರೋಪಿಯನ್ನು ಠಾಣೆಯಲ್ಲಿ ಬಿಡುಗಡೆ ಮಾಡದೇ ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಸಂದರ್ಭದಲ್ಲಿ ನ್ಯಾಯಾಧೀಶರು ಸಹಾ ಆತನನ್ನು ವೈಯಕ್ತಿಕ ಮುಚ್ಚಳಿಕೆ ಅಥವಾ ಜಾಮೀನುದಾರರ ಮುಚ್ಚಳಿಕೆ ಪಡೆದು ಆತನನ್ನು ನ್ಯಾಯಾಲಯದಲ್ಲಿ ಬಿಡುಗಡೆ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನ್ಯಾಯಾಧೀಶರು ಆರೋಪಿ ಮುಂದಕ್ಕೆ ಪೊಲೀಸರ ಸಮಕ್ಷಮ ಹಾಜರಾಗಬೇಕೆಂಬ ಷರತ್ತನ್ನು ವಿಧಿಸಲು ಅವಕಾಶವಿರುವುದಿಲ್ಲ. ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ತಮ್ಮ ವಶ ಪಡೆದ ನಂತರ ಆತನಿಗೆ ಹಿಂಸೆ, ಕಿರುಕುಳ ನೀಡಿದಲ್ಲಿ ಅಥವಾ ಒಂದು ವೇಳೆ ತಮ್ಮ ಕರ್ತವ್ಯ ಮತ್ತು ಅಧಿಕಾರ ವ್ಯಾಪ್ತಿಯನ್ನು ಮೀರಿ ಯಾವುದೇ ಪೊಲೀಸ್‌ ಅಧಿಕಾರಿ ಆರೋಪಿಯ ವಿರುದ್ಧ ಹಲ್ಲೆ ನಡೆಸಿದಲ್ಲಿ ಅಥವಾ ಆತನಿಗೆ ಅನಾವಶ್ಯಕವಾಗಿ ಮಾನಸಿಕ ಅಥವಾ ದೈಹಿಕ ಹಿಂಸೆ ಅಥವಾ ಕಿರುಕುಳ ನೀಡಿದ ಸಂದರ್ಭದಲ್ಲಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರವನ್ನು ನೊಂದ ವ್ಯಕ್ತಿಯು ಅಂದರೆ ಆರೋಪಿಯು ಹೊಂದಿರುತ್ತಾನೆ. ‌
ಯಾವುದೇ ವ್ಯಕ್ತಿಯನ್ನು ಬಂಧಿಸುವ ಮುಂಚಿತವಾಗಿ ಆತನ ವಿರುದ್ಧ ಪೊಲೀಸರು ಠಾಣೆಯಲ್ಲಿ ಆತನ ವಿರುದ್ಧ ಪ್ರಥಮ ವರ್ತಮಾನ ಅಂದರೆ ದೂರನ್ನು ದಾಖಲಿಸಿಕೊಳ್ಳಬೇಕಾಗುತ್ತದೆ. ಮೇಲೆ ಹೇಳಿದಂತೆ ಯಾವುದೇ ಸಕಾರಣದಿಂದ ಆರೋಪಿಯನ್ನು ಪೊಲೀಸ್ ಠಾಣೆಯಲ್ಲಿ ಬಿಡುಗಡೆಗೊಳಿಸುವುದು‌ ಅಸಾಧ್ಯವಾದಲ್ಲಿ 24 ಗಂಟೆಯ ಒಳಗಾಗಿ ಬಂಧನದ ವಿಷಯವನ್ನು ಆತನ ರಕ್ತ ಸಂಬಂಧಿಕರಿಗೆ ತಿಳಿಸಿ ಅನಂತರ ಪ್ರಥಮ ವರ್ತಮಾನ ವರದಿಯೊಂದಿಗೆ ಆತನನ್ನು ಸಂಬಂಧಪಟ್ಟ ನ್ಯಾಯಾಧೀಶರ ಸಮಕ್ಷಮ ಹಾಜರುಪಡಿಸಬೇಕಾಗಿರುತ್ತದೆ. ಈ ಸಂದರ್ಭದಲ್ಲಿ ತಾನು ಪೊಲೀಸರ ಸುಪರ್ದಿಯಲ್ಲಿರುವಾಗ ಅನಾವಶ್ಯಕವಾಗಿ ಹಲ್ಲೆ ನಡೆಸಿದ ಅಥವಾ ಹಿಂಸಾಚಾರ ನೀಡಿದ ಬಗ್ಗೆ ನ್ಯಾಯಾಧೀಶರಿಗೆ ನೇರವಾಗಿ ತಿಳಿಸಿದಲ್ಲಿ, ನ್ಯಾಯಾಧೀಶರು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ವೈದ್ಯಾಧಿಕಾರಿಯವರ ವರದಿಯನ್ನು ತರಿಸಿಕೊಂಡು ವರದಿ ಆಧಾರದಲ್ಲಿ ಮುಂದಿನ ಕ್ರಮಕೈಗೊಳ್ಳಬೇಕಾಗುತ್ತದೆ. ಮಾತ್ರವಲ್ಲದೇ ಈ ಸಂದರ್ಭದಲ್ಲಿ ಆರೋಪಿಯ ಮೇಲಿನ ಹಲ್ಲೆ ಅಥವಾ ಹಿಂಸೆ ಧೃಡಪಟ್ಟಲ್ಲಿ ತಪ್ಪಿತಸ್ಥ ಪೊಲೀಸ್ ಅಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ಅಧಿಕಾರವನ್ನು ನ್ಯಾಯಾಧೀಶರು ಹೊಂದಿರುತ್ತಾರೆ. ನಾಗರೀಕರ ಸಾಂವಿಧಾನಿಕ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕೆಂಬುದು ಹಾಗೂ ಪೊಲೀಸ್‌ ಬಂಧನದಲ್ಲಿರುವಾಗ ಯಾವುದೇ ಅಪರಾಧಿಯ ದೈಹಿಕ ಹಿಂಸೆಗೆ ಅವಕಾಶ ನೀಡಬಾರದು ಎಂಬುವುದು ಇದರ ಉದ್ದೇಶವಾಗಿರುತ್ತದೆ. ಯಾವುದೇ ಒಬ್ಬ ವ್ಯಕ್ತಿಯನ್ನು ಪೊಲೀಸರು ಅನಧಿಕೃತವಾಗಿ ತಮ್ಮ ವಶ ಅಥವಾ ಬಂಧನದಲ್ಲಿ ಇಟ್ಟುಕೊಂಡಿದ್ದರೆ ಅಂತಹ ವ್ಯಕ್ತಿಯ ಬಂಧನವನ್ನು ಕಾನೂನಿನ ಪ್ರಕಾರ ಅಕ್ರಮ ಬಂಧನವೆಂದು ಪರಿಗಣಿಸಬೇಕಾಗುತ್ತದೆ ಮತ್ತು ಈ ರೀತಿಯಾಗಿ ವ್ಯಕ್ತಿಯನ್ನು ಅನಧಿಕೃತವಾಗಿ ಅಥವಾ ಅಕ್ರಮವಾಗಿ ಬಂಧನದಲ್ಲಿ ಇಟ್ಟುಕೊಂಡ ಪೊಲೀಸ್ ಅಧಿಕಾರಿಯೂ ಶಿಕ್ಷಾರ್ಹ ಅಪರಾಧ ಉಂಟುಮಾಡಿದಂತಾಗುತ್ತದೆ. ಈ ಸಂದರ್ಭದಲ್ಲಿ ಅಂತಹ ಅಕ್ರಮ ಬಂಧನದಲ್ಲಿರುವ ವ್ಯಕ್ತಿಯ ಶೋಧನೆಗೆ ಸಂಬಂಧಪಟ್ಟ ನ್ಯಾಯಾಧೀಶರು ಶೋಧನೆಯ ವಾರಂಟನ್ನು ಹೊರಡಿಸಬಹುದು ಮತ್ತು ಬಂಧಿತ ವ್ಯಕ್ತಿಯು ಸಿಕ್ಕಿದರೆ ಆತನನ್ನು ನ್ಯಾಯಾಧೀಶರು ವಿಚಾರಿಸಿ ಪ್ರಕರಣದ ಸನ್ನಿವೇಶಕ್ಕೆ ಸೂಕ್ತವಾದ ಆದೇಶವನ್ನು ಮಾಡುವ ಮತ್ತು ತಪ್ಪಿತಸ್ಥ ಪೊಲೀಸ್‌ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರವನ್ನು ನ್ಯಾಯಾಧೀಶರು ಹೊಂದಿರುತ್ತಾರೆ.









































































































error: Content is protected !!
Scroll to Top