ಮಂಗಳೂರು : ಗಂಡನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಆತನ ಹೆಂಡತಿಗೆ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ಪಿ.ಜಿ. ಸಂದೇಶ್ ವಿರುದ್ಧ ಕೇಳಿಬಂದಿದೆ. ಸದ್ಯ ಈ ಪ್ರಕರಣದಿಂದ ರಾಜ್ಯ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತಾಗಿದೆ. ಇನ್ಸ್ಪೆಕ್ಟರ್ ಕಿರುಕುಳದ ಬಗ್ಗೆ ಸಂತ್ರಸ್ತ ಮಹಿಳೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ, ಗೃಹ ಸಚಿವರು, ಪೊಲೀಸ್ ಮಹಾನಿರ್ದೇಶಕರು, ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.
ಪ್ರಕರಣವೊಂದರಲ್ಲಿ ಗಂಡನನ್ನು ಬಂಧಿಸಲಾಗಿತ್ತು. ಅವರನ್ನು ಬಿಡುಗಡೆಗೊಳಿಸಬೇಕಾದರೆ ಲೈಂಗಿಕವಾಗಿ ಸಹಕರಿಸಬೇಕು ಎಂದು ಇನ್ಸ್ಪೆಕ್ಟರ್ ತಿಳಿಸಿದ್ದರು. ಜತೆಗೆ 25 ಲಕ್ಷ ರೂ. ಹಣ ನೀಡುವಂತೆಯೂ ಬೇಡಿಕೆ ಇಟ್ಟಿದ್ದರು. ಗಂಡನ ವಿರುದ್ಧ ರೌಡಿ ಶೀಟ್ ತೆರೆಯುವುದಾಗಿಯೂ ಬೆದರಿಸಿದ್ದರು ಎಂದು ಒಬ್ಬ ಮಹಿಳೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.
ರಾತ್ರಿ ವೇಳೆ ಕಾಂಪೌಂಡ್ ಹಾರಿ ಮನೆಗೆ ನುಗ್ಗುವುದು, ಕೈ ಹಿಡಿದು ಡ್ಯಾನ್ಸ್ ಮಾಡುವುದು ಮೊದಲಾದವುಗಳನ್ನು ಮಾಡುತ್ತಿದ್ದರು. ಬೆಳ್ತಂಗಡಿ ಠಾಣೆಯಲ್ಲಿ ಇರುವಾಗಲೂ ಅದೇ ರೀತಿ ವರ್ತಿಸುತ್ತಿದ್ದರು. ಠಾಣೆಗೆ ಪಾಸ್ ಪೋರ್ಟ್ ವೆರಿಫಿಕೇಶನ್ ಹಾಗೂ ಇತರ ಕೆಲಸಗಳಿಗೆ ಬರುವ ಹೆಣ್ಣು ಮಕ್ಕಳಿಗೂ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದರು. ಸಂತ್ರಸ್ತರು ಈ ಬಗ್ಗೆ ದೂರು ನೀಡಲು ಹಿಂಜರಿದಿದ್ದಾರೆ ಎಂದೂ ದೂರಿನಲ್ಲಿ ವಿವರಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಆಗಿಲ್ಲ. ಹೀಗಿರುವಾಗ ಮಂಗಳೂರು ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ನಡೆಯವುದು ಅನುಮಾನ. ವಿಶೇಷ ತನಿಖಾ ತಂಡ ರಚಿಸಿ ಅಥವಾ ಸಿಐಡಿ ಮೂಲಕ ತನಿಖೆಗೆ ಆದೇಶಿಸಬೇಕು. ಜತೆಗೆ ಕರ್ತವ್ಯದಿಂದ ದೂರವಿರಿಸಬೇಕು ಎಂದೂ ಆಗ್ರಹಿಸಿದ್ದಾರೆ.
ಇನ್ಸ್ಪೆಕ್ಟರ್ ವಿರುದ್ಧ ಬಂದ ದೂರುಗಳ ಆಧಾರದಲ್ಲಿ ಇಲಾಖಾ ತನಿಖೆ ಆರಂಭವಾಗಿದೆ. ಉತ್ತರ ಎಸಿಪಿ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದ್ದು ಇದರ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಮಿಥುನ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ರೆಡ್ಡಿ ಅವರಿಗೆ ರಾಜ್ಯ ಮಹಿಳಾ ಆಯೋಗ ಪತ್ರ ಬರೆದಿದೆ. ಮಹಿಳೆಯರ ರಕ್ಷಣೆಗೆ ನಿಲ್ಲಬೇಕಿದ್ದ ಸರಕಾರಿ ಅಧಿಕಾರಿಯ ದುರ್ವತೆನೆ ಹಾಗೂ ಕರ್ತವ್ಯ ಲೋಪವನ್ನು ರಾಜ್ಯ ಮಹಿಳಾ ಆಯೋಗ ಗಮನಿಸಿದ್ದು, ಇದೊಂದು ಗಂಭೀರ ಪ್ರಕರಣವೆಂದು ಪರಿಗಣಿಸಿದೆ. ಆದ್ದರಿಂದ ಪ್ರಕರಣದ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಶಿಸ್ತು ಕ್ರಮ ಕೈಗೊಂಡು ವರದಿ ನೀಡುವಂತೆ ಪತ್ರದಲ್ಲಿ ತಿಳಿಸಿದೆ.






























































