ಅಪ್ಪುವಿಗೊಂದು ಪ್ರೇಮಪತ್ರ

ಇವತ್ತು ನಿನ್ನ 51ನೆಯ ಹುಟ್ಟುಹಬ್ಬ. ನಾಡಿನಾದ್ಯಂತ ಅಪ್ಪು ಉತ್ಸವದ ಸಂಭ್ರಮ. ಇದು ನಿನ್ನ ಪ್ರೀತಿಗೆ ಜನರು ಮಾಡುವ ಉತ್ಸವ. ಈ ಐದು ವರ್ಷಗಳಲ್ಲಿ ನೀನು ನಮ್ಮೊಂದಿಗೆ ಇಲ್ಲ ಎಂದು ನಮಗೆ ಎಂದಿಗೂ ಅನ್ನಿಸಿದ್ದು ಇಲ್ಲ. ಪ್ರತೀ ಕ್ಷಣ ಕಣ್ಣು ಮುಚ್ಚಿದರೆ ಕಣ್ಣ ಮುಂದೆ ಬರುವುದು ನಿನ್ನದೇ ಬಿಂಬ. ನಿನ್ನ ಬದುಕು, ನಿನ್ನ ಸಿನೆಮಾಗಳು, ನಿನ್ನ ಕನ್ನಡದ ಪ್ರೀತಿ, ನಿನ್ನ ಮಾನವೀಯ ಸ್ಪಂದನೆಯ ಗುಣ, ನೀನು ಮಾಡಿದ ಚಾರಿಟಿ ಕಾರ್ಯಗಳು ಎಲ್ಲದರಲ್ಲಿಯೂ ಅಪ್ಪು ನಿನಗೆ ನೀನೇ ಸಾಟಿ!

ಅಪ್ಪು ಅಜರಾಮರ.
ಕನ್ನಡದ ವರನಟ ಡಾಕ್ಟರ್ ರಾಜಕುಮಾರ್ ಅವರ ಕೊನೆಯ ಮಗನಾಗಿ ಈ ಜಗತ್ತಿಗೆ ಬಂದಾಗ ನೀನು ಕನ್ನಡದ ಮಹಾನಟನಾಗಿ ಬೆಳೆಯುವ ಭವಿಷ್ಯವನ್ನು ಅಪ್ಪ ಬರೆದಾಗಿತ್ತು. ಪ್ರೇಮದ ಕಾಣಿಕೆ ಸಿನೆಮಾದಲ್ಲಿ ಮೊದಲು ಕ್ಯಾಮೆರಾ ಎದುರಿಸಿದಾಗ ನಿನಗೆ ಒಂದೇ ವರ್ಷ ವಯಸ್ಸು! ಎರಡು ನಕ್ಷತ್ರ, ಭಾಗ್ಯವಂತ, ತಾಯಿಗೆ ತಕ್ಕ ಮಗ, ಬೆಟ್ಟದ ಹೂವು ಮೊದಲಾದ ಸಿನೆಮಾದಲ್ಲಿ ಬಾಲನಟನಾಗಿ ನಿನ್ನ ಅಭಿನಯವನ್ನು ನೋಡಿದವರಿಗೆ ನೀನು ಹುಟ್ಟಿದ್ದೇ ಅಭಿನಯ ಮಾಡಲು ಎಂದು ಕನ್ವಿನ್ಸ್ ಆಗಿತ್ತು! ಸನಾದಿ ಅಪ್ಪಣ್ಣ ಸಿನೆಮಾದಲ್ಲಿ ತೀವ್ರ ಜ್ವರ ಬಂದು ಮಲಗಿದ ಮಗುವಾಗಿ ತಾತಾ ಪೀಪಿ…ಎಂದು ಆರ್ದ್ರ ಧ್ವನಿಯಲ್ಲಿ ಅಲವತ್ತುಕೊಂಡ ಸಂಭಾಷಣೆ ಮರೆಯೋದು ಹೇಗೆ? ಸಣ್ಣ ಹುಡುಗನಾದರೂ ಒಂದು ಸ್ಟೆಪ್ ಆಚೀಚೆ ಮಾಡದೆ ಕಾಣದಂತೆ ಮಾಯವಾದನು ಹಾಡಿಗೆ ನೀನು ಮಾಡಿದ ನೃತ್ಯವನ್ನು ಮರೆಯಲು ಸಾಧ್ಯವೇ ಇಲ್ಲ! ಬೆಟ್ಟದ ಹೂವು ಸಿನೆಮಾದಲ್ಲಿ ಅತ್ಯುತ್ತಮ ಬಾಲನಟ ರಾಷ್ಟ್ರೀಯ ಪ್ರಶಸ್ತಿ ಪಡೆದಾಗ ಕನ್ನಡಿಗರು ನಿನ್ನನ್ನು ತಮ್ಮ ಮನೆಮಗನಾಗಿ ಸ್ವೀಕಾರ ಮಾಡಿದ್ದು ಅದು ಅದ್ಭುತವೇ ಹೌದು!

ಅಪ್ಪುವಿನಿಂದ ಜೇಮ್ಸವರೆಗೆ….
ಅಪ್ಪ ರಾಜಕುಮಾರ್ ಅವರಿಂದ ಪ್ರತಿಭೆ, ನಟನೆ ಮತ್ತು ಸಜ್ಜನಿಕೆಗಳನ್ನು ಕಿತ್ತುಕೊಂಡು ಬಂದ ಹಾಗೆ ಅಪ್ಪು ನೀನು ಬಹಳ ಬೇಗ ಕನ್ನಡದ ಸ್ಟಾರ್ ನಟನಾಗಿ ಬೆಳೆದದ್ದು ಅದು ನಮ್ಮ ಅದೃಷ್ಟ. ನಿನ್ನ ಎಲ್ಲಾ ಸಿನೆಮಾಗಳನ್ನು ಹಲವು ಬಾರಿ ನೋಡಿ ನಿನ್ನ ಸ್ಟಾರ್ ಅಭಿಮಾನಿಯಾದವನು ನಾನು. ಯಾವ ಪಾತ್ರವಾದರೂ ಅದರ ಒಳಗೆ ಪರಕಾಯ ಪ್ರವೇಶ ಮಾಡಿ ಅದನ್ನು ರಜತ ಪರದೆಯ ಮೇಲೆ ಡಿಪಿಕ್ಟ್ ಮಾಡುವ ನಿನ್ನ ಅಪಾರ ಸಾಮರ್ಥ್ಯದ ಬಗ್ಗೆ ಇಡೀ ಕರ್ನಾಟಕ ಬೆರಗಾಗಿತ್ತು. ನಿನ್ನ ಡಾನ್ಸಿಂಗ್ ಸ್ಕಿಲ್, ನಿನ್ನ ಭಾವನಾತ್ಮಕವಾಗಿ ಕನೆಕ್ಟ್ ಆಗುವ ರೀತಿ, ಸಂಭಾಷಣೆ ಹೇಳುವ ರೀತಿ, ಫೈಟಿಂಗ್ ತಾಕತ್ತು……ಇವೆಲ್ಲವೂ ಅದ್ಭುತ ಅಪ್ಪು! ನಿನ್ನ ಸಿನೆಮಾಗಳ ಸಕ್ಸಸ್ ರೇಟ್ ಅದು ನಿಜಕ್ಕೂ ಗ್ರೇಟ್. ಪ್ರತೀ ಸಿನೆಮಾದಲ್ಲಿ ಅಪ್ಪನ ಪ್ರಭಾವಳಿಯನ್ನು ಹೆಗಲ ಮೇಲೆ ಹೊತ್ತುಕೊಂಡು, ಒಂದಿಷ್ಟೂ ಅನುಕರಣೆ ಮಾಡದೆ ಕರ್ನಾಟಕವನ್ನು ಗೆದ್ದವನು ನೀನು.

ನಿನ್ನಲ್ಲಿ ಅಭಿಮಾನಿಗಳು ದೇವರನ್ನೇ ಕಂಡರು!
ಸಿನೆಮಾ ಎನ್ನುವುದು ಕೇವಲ ಮನರಂಜನೆಯ ಮಾಧ್ಯಮವಲ್ಲ, ಅದು ಸಮಾಜದ ಪ್ರತಿಬಿಂಬ ಎಂದು ನಂಬಿಕೊಂಡು, ಸಿನೆಮಾದ ಒಂದು ದೃಶ್ಯದ ಮೂಲಕ ಕೂಡ ತಪ್ಪು ಸಂದೇಶ ಸಮಾಜಕ್ಕೆ ಹೋಗಬಾರದು ಎಂದು ಗಟ್ಟಿಯಾಗಿ ನಂಬಿದವನು ನೀನು! ಅಪ್ಪು, ಆಕಾಶ್, ಅಭಿ, ಪೃಥ್ವಿ, ಮಿಲನ, ಪವರ್, ಯಾರೆ ಕೂಗಾಡಲಿ, ರಾಮ್, ಹುಡುಗರು, ಯುವರತ್ನ, ರಾಜಕುಮಾರ, ಅಂಜನಿಪುತ್ರ, ವಂಶಿ, ಜಾಕಿ…… ಇದ್ಯಾವುದೂ ಮರೆತು ಹೋಗುವ ಸಿನೆಮಾಗಳು ಅಲ್ಲವೇ ಅಲ್ಲ! ಅದರಲ್ಲಿ ರಾಜಕುಮಾರ, ಅದು ನಿನ್ನದೇ ಬದುಕಿನ ಪ್ರತಿಬಿಂಬ ಎನ್ನುವ ಹಾಗೆ ಮೂಡಿಬಂದಿತ್ತು! ನಿನ್ನ ಅವಧಿಯಲ್ಲಿ ಕನ್ನಡದ ಅತ್ಯಂತ ಹೆಚ್ಚು ಸಂಭಾವನೆ ಪಡೆದ ನಟ ನೀನೆಂಬುದು ನಿನ್ನ ಖದರು! ನಿನ್ನ ಅಪ್ಪ ಅಭಿಮಾನಿಗಳಲ್ಲಿ ದೇವರನ್ನು ಕಂಡರೆ ನಿನ್ನ ಕೋಟಿ ಕೋಟಿ ಅಭಿಮಾನಿಗಳು ನಿನ್ನಲ್ಲಿ ದೇವರನ್ನೇ ಕಂಡರು! ನಿನ್ನಷ್ಟು ಅದ್ಭುತವಾಗಿ ಹೆಜ್ಜೆ ಹಾಕುವ ಮತ್ತು ಫೈಟ್ ಮಾಡುವ ಇನ್ನೊಬ್ಬ ನಟ ಕನ್ನಡದಲ್ಲಿ ಇಲ್ಲ ಅನ್ನುವುದು ನನ್ನ ನಂಬಿಕೆ. ಅಭಿನಯಕ್ಕಾಗಿ ಒಂದು ರಾಷ್ಟ್ರಪ್ರಶಸ್ತಿ, ನಾಲ್ಕು ರಾಜ್ಯಪ್ರಶಸ್ತಿ, ಆರು ಫಿಲಂ ಫೇರ್, ಐದು ಸೈಮಾ ಪ್ರಶಸ್ತಿಗಳನ್ನು ಪಡೆದ ಮೇರುನಟ ನೀನು!

ಕನ್ನಡದ ಕೋಟ್ಯಾಧಿಪತಿ, ಅದು ನಿನ್ನದೇ ಸಿಗ್ನೇಚರ್
ನಿನ್ನ ಸಿನೆಮಾಗಳ ಮೂಲಕ ಕನ್ನಡಿಗರಿಗೆ ನಿನ್ನ ದೈತ್ಯ ಪ್ರತಿಭೆಯ ಪರಿಚಯವಾದರೆ ಕನ್ನಡದ ಕೋಟ್ಯಾಧಿಪತಿ ಎಂಬ ಜನಪ್ರಿಯ ಟಿವಿ ಕಾರ್ಯಕ್ರಮದ ಮೂಲಕ ನಿನ್ನ ಸೌಜನ್ಯ, ಎಲ್ಲರನ್ನೂ ಗೌರವಿಸುವ ನಿನ್ನ ಶ್ರೇಷ್ಠತೆ, ನಾನು ಏನೂ ಅಲ್ಲ ಎನ್ನುವ ನಿನ್ನ ವಿನಯವಂತಿಕೆ, ನಿನ್ನ Down to Earth ಸ್ವಭಾವ ಎಲ್ಲವೂ ಮನೆಮಾತಾದವು. ಆ ಅದ್ಭುತ ಶೋ ಹಲವು ವರ್ಷಗಳ ಕಾಲ ಕನ್ನಡದ ನಂಬರ್ ಒನ್ ರಿಯಾಲಿಟಿ ಶೋ ಆಗಿದ್ದರೆ ಅದಕ್ಕೆ ಕಾರಣ ಅಪ್ಪು ಮತ್ತು ಅಪ್ಪು ಎಂದರೆ ಅದು ಅತಿಶಯೋಕ್ತಿಯಲ್ಲ! ವರನಟನ ಉತ್ತರಾಧಿಕಾರಿಯಾಗಿ ಜನರು ಆಗಲೇ ನಿನ್ನನ್ನು ನೋಡಲು ಆರಂಭಿಸಿದ್ದರು. ಎಷ್ಟು ದೊಡ್ಡ ಸ್ಟಾರ್ ನಟನಾದರೂ ಅಹಂಕಾರ ನಿನ್ನ ಹತ್ತಿರಕ್ಕೂ ಬರಲಿಲ್ಲ ಅನ್ನೋದು ನನಗೆ ವಿಸ್ಮಯ!

ಅಪ್ಪು ಅಂದರೆ ಚಾರಿಟಿ ಮತ್ತು ಫಿಲಾಂತ್ರೋಫಿ
ನೀನು ಪ್ರಚಾರವೇ ಇಲ್ಲದೆ ಮಾಡಿದ ಸಾವಿರಾರು ಚಾರಿಟಿಗಳು, ಲೆಕ್ಕ ಇಲ್ಲದಷ್ಟು ಸೇವಾ ಚಟುವಟಿಕೆಗಳು ನೀನು ಅಗಲಿದ ನಂತರ ಬೆಳಕಿಗೆ ಬಂದವು ಅನ್ನುವುದು ನನ್ನ ನೋವು. ನಿನ್ನ ಪ್ರಚಾರ ಬಯಸದ ಗುಣ ಅದು ನಿಜವಾಗಿಯೂ ಅದ್ಭುತ. ನಿನ್ನ ಸಂಪಾದನೆಯ ಬಹುದೊಡ್ಡ ಭಾಗವು ಚಾರಿಟಿ ಸಂಸ್ಥೆಗಳಿಗೆ ವಿನಿಯೋಗ ಆಗಿದೆ ಎನ್ನುವಾಗ ರೋಮಾಂಚನ ಆಗುತ್ತದೆ. 45 ಬಡಮಕ್ಕಳ ಶಾಲೆ, 26 ಅನಾಥ ಮಕ್ಕಳ ಆಶ್ರಮ, 16 ವೃದ್ಧಾಶ್ರಮ, 19 ಗೋಶಾಲೆಗಳು ನಿನ್ನಿಂದ ಉಪಕೃತವಾಗಿವೆ ಎನ್ನುವುದೇ ಒಂದು ಅದ್ಭುತ ಸಂಗತಿ. ನೀನು ಹಾಡಿದ ಅಷ್ಟೂ ಹಾಡುಗಳ ಸಂಭಾವನೆಯು ಮೈಸೂರಿನ ಶಕ್ತಿಧಾಮ ಸಂಸ್ಥೆಯ ಖಾತೆಗೆ ಹೋಗುತ್ತಿತ್ತು ಹೌದಲ್ಲ? 1800 ಬಡಮಕ್ಕಳ ವಿಧ್ಯಾಭ್ಯಾಸದ ಪೂರ್ಣ ಖರ್ಚು ಭರಿಸುವ ನಿನ್ನ ಔದಾರ್ಯತೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ! ಹಾಗೆಯೇ ನಂದಿನಿ ಹಾಲು, ಮೈಸೂರು ಲ್ಯಾಂಪ್ಸ್, RTE ಮೊದಲಾದ ಕರ್ನಾಟಕ ಸರಕಾರದ ವಿಧಾಯಕ ಯೋಜನೆಗಳಿಗೆ ಒಂದು ರೂಪಾಯಿ ಕೂಡ ಸಂಭಾವನೆ ಪಡೆಯದೆ ರಾಯಭಾರಿಯಾಗಿ ಮೂಡಿಬಂದವನು ನೀನು!

‘ಪ್ರಕೃತಿ ಬನವಾಸಿ’ ಬರೆದ ನಿನ್ನ ಬದುಕಿನ ಪುಸ್ತಕ ಅಪ್ಪು ಇಂತಹ ನೂರಾರು ಉಲ್ಲೇಖಗಳಿಂದ ಅಭಿಮಾನಿಗಳ ಹೃದಯವನ್ನು ತಟ್ಟಿತು. ನಿನ್ನ ಬಗ್ಗೆ ಬರೆಯುವಾಗ ಪ್ರತೀ ಬಾರಿ ಗಂಟಲು ಕಟ್ಟುತ್ತದೆ, ಕಣ್ಣೀರು ಕೆನ್ನೆಯಲ್ಲಿ ಇಳಿಯುತ್ತದೆ, ಹೃದಯ ಭಾರವಾಗುತ್ತದೆ. 30,00,000 ಮಂದಿ ಭಾಗವಹಿಸಿ ಕಣ್ಣೀರು ಸುರಿಸಿದ ನಿನ್ನ ಅಂತಿಮಯಾತ್ರೆಯು ಒಂದು ಬಹುದೊಡ್ಡ ದಾಖಲೆ! ಜನರು ನಿನ್ನ ಮೇಲೆ ಇಟ್ಟ ಪ್ರೀತಿಗೆ ಒಂದು ದೊಡ್ಡ ಸಲಾಂ. ಹಾಗೆಯೇ ಮರಣದ ನಂತರ ನಿನ್ನ ನೇತ್ರದಾನದ ಸಂಕಲ್ಪ ಪೂರ್ತಿಯಾದದ್ದು, ಅದರಿಂದ ಸ್ಫೂರ್ತಿ ಪಡೆದು ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ 28 ಘಂಟೆಯಲ್ಲಿ 65,000 ಮಂದಿ ನೇತ್ರದಾನದ ಸಂಕಲ್ಪಕ್ಕೆ ಸಹಿ ಮಾಡಿದ್ದು ಎಲ್ಲವೂ ದಾಖಲೆ!

ಕರ್ನಾಟಕ ರತ್ನ ನೀನಲ್ಲದೆ ಇನ್ಯಾರು ಪುನೀತ್? ಅಪ್ಪು ಅಜರಾಮರ ಎನ್ನುವುದೇ ಇಂದಿನ ಭರತವಾಕ್ಯ!































































































error: Content is protected !!
Scroll to Top