ಆತನು ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ 35 ಬಾರಿ ವಿಶ್ವ ದಾಖಲೆ ಬರೆದಿದ್ದನು!

ಯುಕ್ರೇನ್ ದೇಶದ ಮಹೋನ್ನತ ಕ್ರೀಡಾಪಟು ಸರ್ಗೆ ಬೂಬ್ಕಾ ಒಬ್ಬ ಅದ್ಭುತವಾದ ಪೋಲ್ ವಾಲ್ಟರ್. ಹಾಗಂದರೆ ಒಂದು ಗಟ್ಟಿಯಾದ ಮತ್ತು ಉದ್ದವಾದ ಕೋಲನ್ನು ಹಿಡಿದುಕೊಂಡು ದೂರದಿಂದ ಓಡುತ್ತಾ ಬಂದು ಅದನ್ನು ನೆಲಕ್ಕೆ ಊರಿ ಮೇಲಕ್ಕೆ ಹಾರುವುದು! ಅದು ಸುಲಭದ ಇವೆಂಟ್ ಅಲ್ಲವೇ ಅಲ್ಲ. 80ಕೆಜಿ ತೂಕದ ದೇಹವನ್ನು ಭೂಮಿಯ ಗುರುತ್ವಾಕರ್ಷಣ ಶಕ್ತಿಗೆ ವಿರುದ್ಧವಾಗಿ ಮೇಲಕ್ಕೆತ್ತಿ 6 ಮೀಟರ್ ಎತ್ತರಕ್ಕೆ ಹಾರುವುದು ಬಹಳ ದೊಡ್ಡ ಸವಾಲು! ಅದಕ್ಕೆ ಅದ್ಭುತವಾದ ದೇಹದ ಸಮತೋಲನ, ಮಸಲ್ ಪವರ್ ಮತ್ತು ಸಂಕಲ್ಪಶಕ್ತಿ ಬೇಕು. ಅಂತಹ ಸವಾಲುಗಳನ್ನು ಎದುರಿಸಿ ವಿಶ್ವವಿಜೇತನಾದವನು ಇದೇ ಬೂಬ್ಕಾ.

ಸರ್ಗೆ ಬೂಬ್ಕಾ ಒಟ್ಟು 35 ಬಾರಿ ವಿಶ್ವದಾಖಲೆಗಳನ್ನು ಮುರಿದಿದ್ದನು!
ಎಂಬತ್ತರ ದಶಕದಲ್ಲಿ ಅವನಿಗೆ ಸ್ಪರ್ಧಿಗಳೇ ಇರಲಿಲ್ಲ. ಇಂಡೋರ್ ಮತ್ತು ಔಟ್ ಡೋರ್ ಎರಡೂ ವಿಭಾಗಗಳಲ್ಲಿ ಅವನಿಗೆ ಒಟ್ಟು 27 ಪದಕಗಳು ದೊರೆತಿದ್ದವು. ಅದರಲ್ಲಿ 23 ಚಿನ್ನದ ಪದಕ, 2 ಬೆಳ್ಳಿಯ ಪದಕ ಮತ್ತು 2 ಕಂಚಿನ ಪದಕಗಳು. ಅದರಲ್ಲಿ 1988ರಲ್ಲಿ ಆತ ಗೆದ್ದ ಒಲಿಂಪಿಕ್ ಚಿನ್ನದ ಪದಕವೂ ಇತ್ತು. ಆಶ್ಚರ್ಯ ಎಂದರೆ ಆತ ಆ ಅವಧಿಯಲ್ಲಿ 35 ಬಾರಿ ವಿಶ್ವದಾಖಲೆ ಮುರಿದು ಹೊಸ ದಾಖಲೆಗಳನ್ನು ಕ್ರಿಯೇಟ್ ಮಾಡಿದ್ದನು. ಅವನು ಅಷ್ಟು ಬಾರಿ ಮುರಿದದ್ದು ಅವನದ್ದೇ ದಾಖಲೆಗಳನ್ನು. ಪ್ರತೀ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅವನು ಅವನದ್ದೇ ದಾಖಲೆಯನ್ನು ಅಳಿಸಿಹಾಕಿ ಹೊಸ ದಾಖಲೆಯನ್ನು ಕ್ರಿಯೇಟ್ ಮಾಡುತ್ತಿದ್ದನು.

6.24 ಮೀಟರ್ ಎತ್ತರಕ್ಕೆ ಹಾರಿದ ವಿಶ್ವದಾಖಲೆಯು ಅವನದ್ದೇ ಹೆಸರಲ್ಲಿ ಇತ್ತು. ಅವನ ದಾಖಲೆಗಳು ಹಲವು ದಶಕಗಳ ನಂತರವೂ ಅಭಾಧಿತವಾಗಿಯೇ ಉಳಿದವು.

ನೀವು ಯಾರೊಂದಿಗೂ ಕಾಂಪೀಟ್ ಮಾಡಬೇಡಿ ಎಂದಾತ ಹೇಳಿದ್ದೇಕೆ?
ಸರ್ಗೆ ಬೂಬ್ಕಾ ನಿವೃತ್ತಿ ಆಗುವಾಗ ಹೇಳಿದ ಒಂದು ಮಾತು ನನಗೆ ತುಂಬಾ ಕನೆಕ್ಟ್ ಆಯಿತು. ಆತ ಹೇಳಿದ್ದೇನೆಂದರೆ – ನೀವು ಯಾರ ಜೊತೆಗೂ ಸ್ಪರ್ಧೆ ಮಾಡುವುದು ಬೇಡ. ಸ್ಪರ್ಧೆ ಮಾಡುತ್ತೀರಿ ಅಂತಾದರೆ ನಿಮ್ಮ ಹಿಂದಿನ ಸಾಧನೆಯ ಜೊತೆಗೆ ಸ್ಪರ್ಧೆ ಮಾಡಿ! ಹಿಂದಿನ ಈವೆಂಟನಲ್ಲಿ ನೀವು 6.23 ಮೀಟರ್ ಎತ್ತರಕ್ಕೆ ಹಾರಿ ಈ ಬಾರಿ 6.24 ಮೀಟರ್ ಹಾರಿದರೆ ಅದು ನಿಮ್ಮ ಸಕ್ಸಸ್. ನೀವೊಬ್ಬ ಅನನ್ಯ ವ್ಯಕ್ತಿ. ಯಾರ ಜೊತೆಗೂ ನೀವು ಕಾಂಪೀಟ್ ಮಾಡುತ್ತಾ ಹೋದರೆ ನೀವು ನಿಮ್ಮ ಅನನ್ಯತೆಯನ್ನು ಕಳೆದುಕೊಳ್ಳುತ್ತೀರಿ. ಆದ್ದರಿಂದ ನಿಮ್ಮ ಸ್ಪರ್ಧೆಯು ನಿಮ್ಮ ಹಿಂದಿನ ಸಾಧನೆಗಳ ಜೊತೆ ಇರಲಿ ಹೊರತು ಯಾರ ಜೊತೆಗೂ ಅಲ್ಲ.

ಈ ಮಾತು ನಮಗೂ ಅನ್ವಯ ಆಗ್ತದೆ ಅಲ್ವಾ?
ಎಷ್ಟೋ ಬಾರಿ ನಮ್ಮ ಯಶಸ್ಸುಗಳಿಗೆ ಬೆಂಚ್ ಮಾರ್ಕ್ ಆಗಿ ಬೇರೆ ಯಾರದೋ ಯಶಸ್ಸನ್ನು ತಾಳೆ ಹಾಕುತ್ತೇವೆ. ಉದಾಹರಣೆಗೆ…
೧) ನಮ್ಮ ಅಣ್ಣ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಬಂದಿದ್ದ. ನಾನು ಅವನನ್ನು ಮೀರಿಸಬೇಕು.

೨) ನನ್ನ ಪಕ್ಕದ ಮನೆಯವರು ತಮ್ಮ ಮನೆಗೆ 30 ಲಕ್ಷದ ಕಾರು ತಂದಿದ್ದಾರೆ. ನಾವು ಅದಕ್ಕಿಂತ ಹೆಚ್ಚು ಬೆಲೆಯ ಕಾರು ತರಬೇಕು.

೩) ನನ್ನ ಕಸಿನ್ ತಿಂಗಳಿಗೆ ಅವನ ಅಪ್ಪನಿಂದ ಹತ್ತು ಸಾವಿರ ರೂಪಾಯಿ ಪಾಕೆಟ್ ಮನಿ ಪಡೆಯುತ್ತಾನೆ. ನಾನು ಅದಕ್ಕಿಂತ ಹೆಚ್ಚು ಪಡೆಯಬೇಕು.

೪) ನನ್ನ ಎದುರು ಮನೆಯವರು ಮೂರು ಸಾವಿರ ಚದರಡಿ ವಿಸ್ತೀರ್ಣದ ಮನೆ ಕಟ್ಟಿದ್ದಾರೆ. ನಾನು ಅದಕ್ಕಿಂತ ದೊಡ್ಡ ಮನೆ ಕಟ್ಟಬೇಕು.

೫) ನನ್ನ ಕಲೀಗ್ ಕಳೆದ ವೀಕೆಂಡನಲ್ಲಿ ಗೋವಾಕ್ಕೆ ಫ್ಯಾಮಿಲಿ ಟೂರ್ ಮಾಡಿದ್ದ. ನಾನು ಅದರಾಚೆಗೆ ಹೋಗಬೇಕು.

೬) ನನ್ನ ಅಣ್ಣ ಅವನ ಮಗಳಿಗೆ ಧಾಮ್ ಧೂಮ್ ಎಂದು 50 ಲಕ್ಷ ರೂ. ಖರ್ಚು ಮಾಡಿ ಮದುವೆ ಮಾಡಿದ್ದನು. ನಾನು ನನ್ನ ಮಗಳಿಗೆ ಸಾಲ ಮಾಡಿಯಾದರೂ ಅದಕ್ಕಿಂತಲೂ ವೈಭವದ ಮದುವೆ ಮಾಡಬೇಕು!

ಅತೃಪ್ತ ಮಾನಸಿಕ ಸ್ಥಿತಿಗಳು
ಈ ಎಲ್ಲ ಹೇಳಿಕೆಗಳು, ಯೋಚನೆಗಳು ನಮನ್ನು ಯಾವ ಮಾನಸಿಕ ಸ್ಥಿತಿಗೆ ದೂಡುತ್ತವೆ ಎಂದು ಯೋಚನೆ ಮಾಡಿ. ಬೇರೆಯವರ ಜೊತೆಗೆ ಕಾಂಪೀಟ್ ಮಾಡಿ ಅಥವಾ ಹೋಲಿಕೆ ಮಾಡಿ ಬದುಕುವ ಅವಸ್ಥೆಗಳು ನಮ್ಮನ್ನು ಅಸಹನೆ, ಅತೃಪ್ತಿ ಹಾಗೂ ಮತ್ಸರದ ಕಡೆಗೆ ದೂಡುತ್ತವೆ. ಆದ್ದರಿಂದ ಬೂಬ್ಕಾ ಹೇಳಿದ ಮಾತು ಎಷ್ಟು ನಿಜ ಎಂದು ಅರ್ಥ ಮಾಡಿಕೊಂಡರೆ ನಮ್ಮೆಲ್ಲರ ಬದುಕು ಎಷ್ಟೊಂದು ಅರ್ಥಪೂರ್ಣ ಆದೀತು ಅಲ್ಲವೇ?

ಅದೇ ಬೂಬ್ಕಾ ನಿವೃತ್ತಿ ಆಗುವಾಗ ಹೇಳಿದ ಇನ್ನೊಂದು ಮಾತು ಕೂಡ ಅಷ್ಟೇ ಅದ್ಭುತ ಇದೆ. ಅವನು ಹೇಳಿದ್ದು – ನನ್ನ ಅಲ್ಟಿಮೇಟ್ ಎತ್ತರವನ್ನು ನಾನಿನ್ನೂ ಹಾರಿಯೇ ಇಲ್ಲ ಎಂದು! ಅವನ ಸಾಧನೆಯ ತೀವ್ರವಾದ ಹಸಿವು ನಮ್ಮನ್ನು ಗಾಢವಾಗಿ ತಟ್ಟುತ್ತದೆ. ಅವನು ಶತಮಾನದ ಕ್ರೀಡಾಪಟು ಆಗಿ ಪ್ರಶಸ್ತಿಯನ್ನು ಪಡೆದದ್ದು ಸುಮ್ಮನೇ ಅಲ್ಲ.































































































error: Content is protected !!
Scroll to Top