ಮಕ್ಕಳ ರಕ್ಷಣಾ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ : ಶಶಿಧರ್ ಕೋಸಂಬೆ

ಉಡುಪಿ : ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ರಕ್ಷಣೆಗೆ ಸರಕಾರ ಜಾರಿಗೆ ತಂದಿರುವ ಹಕ್ಕುಗಳು, ನಿಯಮಗಳು ಹಾಗೂ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದರೊಂದಿಗೆ ಮಕ್ಕಳ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಕರೆ ನೀಡಿದರು.

ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಆರ್. ಟಿ. ಇ. ಕಾಯ್ದೆ 2009, ಪೋಕ್ಸೋ ಕಾಯ್ದೆ 2012, ಬಾಲ್ಯ ವಿವಾಹ ಕಾಯ್ದೆ 2006 ಹಾಗೂ ಬಾಲನ್ಯಾಯ ಕಾಯ್ದೆ 2015 ರ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧಕ್ಷತೆ ವಹಿಸಿ ಮಾತನಾಡಿದರು.

30 ದಿನದೊಳಗಡೆ ಲಭ್ಯವಾಗುವಂತೆ ಮಾಡಿ
ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗೆ 1,59,731 ಮಕ್ಕಳಿದ್ದಾರೆ. ಪ್ರತಿ ಮಗುವಿನ ಆಧಾರ್ ಸೀಡಿಂಗ್ ಆಗಿರಬೇಕು. ಅದರ ಜೊತೆಗೆ ಆಧಾರ್ ಮಾಪಿಂಗ್ ಸಹ ಆಗಿರಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಅವರು ಸಮಸ್ಯೆ ಎದುರಿಸಬೇಕಾಗುವುದು. ಪ್ರತಿ ಮಗುವೂ ಆಧಾರ್‌ಕಾರ್ಡ್ ಹೊಂದುವಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ ಎಂದ ಅವರು, ಮೂವತ್ತು ದಿನಗಳ ಒಳಗೆ ಜಿಲ್ಲೆಯ ಎಲ್ಲಾ ಮಕ್ಕಳಿಗೂ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಸರಕಾರಕ್ಕೆ ವರದಿ ನೀಡಲಾಗುವುದು ಎಂದರು.

ಸರಕಾರಿ ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ನೋಂದಣಿಯಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಪಥ್ಯಾಹಾರವನ್ನು ಉಚಿತವಾಗಿ ನೀಡಬೇಕು. ಪಥ್ಯಾಹಾರದಲ್ಲಿ ಅನ್ನ, ಸಾಂಬಾರ್, ಚಪಾತಿ, ಮೊಟ್ಟೆ, ಬಾಳೆಹಣ್ಣು ನೀಡಬೇಕು. ಆದರೆ, ಕೆಲವೊಂದು ಪಥ್ಯಾಹಾರಗಳು ನೀಡುತ್ತಿರುವುದು ಕಂಡು ಬಂದಿದ್ದು ಈ ಬಗ್ಗೆ ಜಿಲ್ಲಾಧಿಕಾರಿ ಪರಿಶೀಲಿಸಬೇಕು. ಇದರೊಂದಿಗೆ ಅಲ್ಲಿನ ವೈದ್ಯರು ನಿಯಮಾನುಸಾರ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆಯೂ ಪರಿಶೀಲಿಸಬೇಕು ಎಂದರು.

ಜಿಲ್ಲೆಯಲ್ಲಿ 76ಕ್ಕೂ ಹೆಚ್ಚು ಸ್ಕ್ಯಾನಿಂಗ್ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿಯೊಂದು ಸ್ಕ್ಯಾನಿಂಗ್ ಸೆಂಟರ್‌ಗಳು ಸರಕಾರದ ಪಿ.ಸಿ.ಪಿ.ಎನ್.ಡಿ.ಟಿ ನಿಯಮನುಸಾರ ಕಾರ್ಯನಿರ್ವಹಿಸಬೇಕು. ಎರಡು ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿದಾಗ ಕೆಲವು ನಿಯಮಗಳನ್ನು ಪಾಲಿಸದೇ, ಕೆಲವು ದಾಖಲೆಗಳನ್ನು ಸಹ ನಿರ್ವಹಿಸದೇ ಇರುವುದು ಕಂಡುಬಂದಿದೆ. ಜಿಲ್ಲೆಯ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ನಿರಂತರವಾಗಿ ಆಗ್ಗಿಂದಾಗೆ ಭೇಟಿ ನೀಡಿ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿರುವ ಬಗ್ಗೆ ಎರಡು ವಾರದಲ್ಲಿ ಅಭಿಯಾನದ ರೀತಿ ಪರಿಶೀಲಿಸಿ ಆಯೋಗಕ್ಕೆ ವರದಿ ನೀಡಬೇಕು ಎಂದರು.

ಮಕ್ಕಳ ಸ್ನೇಹಿ ಗ್ರಾ.ಪಂ. ಅಭಿಯಾನ
ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಮತ್ತಿತರ ಸೌಲಭ್ಯಗಳನ್ನು ಕೊಡಲು ಅನುಕೂಲವಾಗುವಂತೆ ಪ್ರತಿಯೊಂದು ಗ್ರಾಮ ಪಂಚಾಯತ್ ಗಳಲ್ಲಿ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನ ನಡೆಸುವುದರೊಂದಿಗೆ ಏಕ ಪೋಷಕರು, ಅನಾಥರು, ಶಾಲೆಯಿಂದ ಹೊರಗುಳಿದವರು, ಲಸಿಕಾ ವಂಚಿತ ಮಕ್ಕಳು ಸೇರಿದಂತೆ ಮತ್ತಿತರರ ಮಾಹಿತಿಗಳನ್ನು ನಿಖರವಾಗಿ ಇಟ್ಟುಕೊಳ್ಳಬೇಕು. ಅವರಿಗೆ ಅನುಕೂಲ ಮಾಡಿಕೊಡಬೇಕು. ಇದರ ಜೊತೆಯಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಪಡೆ, ಶಿಕ್ಷಣ ಕಾವಲು ಸಮಿತಿ ಪಡೆ, ಮಕ್ಕಳ ವಿಶೇಷ ಗ್ರಾಮಸಭೆ, ನಿಯಮನುಸಾರ ಸಕಾಲದಲ್ಲಿ ನಡೆಸಬೇಕು. ಈ ಬಗ್ಗೆ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ಗಮನ ಹರಿಸಬೇಕು ಎಂದರು.

ಸಿಸಿಟಿವಿ ಕಡ್ಡಾಯ
ಜಿಲ್ಲೆಯಲ್ಲಿರುವ ಎಲ್ಲಾ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಸಿ.ಸಿ.ಟಿ.ವಿ. ಅಳವಡಿಸಬೇಕು. ಆರೋಗ್ಯ ಇಲಾಖೆ ವತಿಯಿಂದ ನಿರಂತರವಾಗಿ ವಿದ್ಯಾರ್ಥಿಗಳ ತಪಾಸಣೆ ಕೈಗೊಳ್ಳಬೇಕು. ನಿಲಯಾರ್ಥಿಗಳಿಗೆ ಮಾದಕ ವ್ಯಸನ, ಸೈಬರ್ ಕ್ರೈಂ ಸೇರಿದಂತೆ ಮತ್ತಿತರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂದರು.

ಮಕ್ಕಳ ಸ್ನೇಹಿ ಸಾರಿಗೆ ವ್ಯವಸ್ಥೆ ರೂಪಿಸುವಲ್ಲಿ ನಿಗಮದ ಅಧಿಕಾರಿಗಳು ಕ್ರಮವಹಿಸಬೇಕು. ಬಸ್ ನಿಲ್ದಾಣಗಳಲ್ಲಿ ಮಹಿಳಾ ಮತ್ತು ಶಿಶು ಪಾಲನ ಕೇಂದ್ರ ವ್ಯವವಸ್ಥಿತ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಸಾರಿಗೆ ನಿಗಮದ ನಿಲ್ದಾಣಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ ಅಳವಡಿಸಿರುವ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು.
ಜಿಲ್ಲೆಯಲ್ಲಿ 1481 ವಿಶೇಷ ಚೇತನ ಮಕ್ಕಳಿದ್ದು, ಇದರಲ್ಲಿ 575 ಮಕ್ಕಳಿಗೆ ಯು.ಡಿ.ಐ.ಡಿ ಕಾರ್ಡ್ ವಿತರಣೆಗೆ ಬಾಕಿ ಇದೆ. ಯು.ಡಿ.ಐ.ಡಿ ಕಾರ್ಡ್ ಹೊಂದಿಲ್ಲದೆ ಇದ್ದಲ್ಲಿ ಸರಕಾರದ ಸೌಲಭ್ಯಗಳಿಂದ ಮಕ್ಕಳು ವಂಚಿತರಾಗುವುದರಿಂದ ಬಾಕಿ ಉಳಿದ ಎಲ್ಲಾ ವಿಶೇಷ ಮಕ್ಕಳಿಗೂ ಒಂದು ತಿಂಗಳ ಒಳಗಾಗಿ ಯು.ಡಿ.ಐ.ಡಿ ಕಾರ್ಡ್ ವಿತರಣೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ಅಂಗವಿಕಲ ಕಲ್ಯಾಣಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್. ಎಸ್. ಕಾದ್ರೊಳ್ಳಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

































































































error: Content is protected !!
Scroll to Top