ಬಿಜೆಪಿಯ ಪ್ರತಿಭಟನೆಗೆ ಬೆದರಿ ವಿದ್ಯುತ್‌ ಮರು ಸಂಪರ್ಕ – ರವೀಂದ್ರ ಮೊಯ್ಲಿ

ಕಾಂಗ್ರೆಸ್‌ ನಾಯಕನ ದ್ವಂದ್ವ ಹೇಳಿಕೆ ನಗೆಪಾಟಲಿಗೀಡಾಗಿದೆ

ಕಾರ್ಕಳ : ಎಣ್ಣೆಹೊಳೆ ಏತ ನೀರಾವರಿ ಯೋಜನೆಯು ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಹಾಗೂ ಸುನಿಲ್ ಕುಮಾರ್ ಅವರು ಇಂಧನ ಸಚಿವರಾಗಿದ್ದ ಸಂದರ್ಭದಲ್ಲಿ ಅನುಷ್ಠಾನಗೊಂಡ ಯೋಜನೆ. ಮರ್ಣೆ, ಹಿರ್ಗಾನ, ಕುಕ್ಕುಂದೂರು, ಕಡ್ತಲ ಗ್ರಾಮದ ರೈತರ ಬೇಸಾಯ ಮತ್ತು ತೋಟಗಳಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಜಾರಿಗೊಳಿಸಿದ ಬಹುಪಯೋಗಿ ನೀರಿನ ಯೋಜನೆಯಾಗಿದ್ದು ಇದೀಗ ಕಾಂಗ್ರೆಸ್‌ ಈ ವಿಚಾರದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರಕಾರ ಇದೀಗ ಎಣ್ಣೆಹೊಳೆ ಘಟಕದ ವಿದ್ಯುತ್‌ ಬಿಲ್‌ ಪಾವತಿ ಮಾಡದೇ ವಿದ್ಯುತ್ ಸಂಪರ್ಕ ಕಡಿತಗೊಳ್ಳುವಂತಾಗಿದೆ. ಮೆಸ್ಕಾಂ ಇಲಾಖೆ 7/02/2026 ರಂದು ಪತ್ರ ಸಂಖ್ಯೆ ಸ.ಕ.ನಿ.ಇಂ.(ವಿ)/ಸಲೆ ಅ/ಹೆಬ್ರಿ/25-26-4345-48 ರಂತೆ ಜನವರಿ 2026 ರ ಅಂತ್ಯದ ವರೆಗಿನ ಬಾಕಿ ರೂ. 1,87,92,170/ ತಕ್ಷಣ ಪಾವತಿಸುವಂತೆ ತಪ್ಪಿದಲ್ಲಿ ವಿದ್ಯುತ್ ಕಡಿತದ ನೋಟಿಸ್‌ ನೀಡಿದ್ದು ಆ ನಂತರವೂ ಸರಕಾರ ವಿದ್ಯುತ್ ಬಿಲ್ ಪಾವತಿಸದ ಕಾರಣ ಮೂರು ದಿನಗಳ ಹಿಂದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಲಭ್ಯ ಮಾಹಿತಿಯ ಪ್ರಕಾರ ಫೆಬ್ರವರಿ ತಿಂಗಳ ಅಂತ್ಯಕ್ಕೆ ಬಾಕಿ 2,090,5000/ ಮೊತ್ತವಾಗಿದೆ. ಇದು ಸರಕಾರ ದಿವಾಳಿತನದತ್ತ ಸಾಗುವ ಸೂಚನೆಯೇ ? ಎಂದು ಮೊಯ್ಲಿ ಪ್ರಶ್ನಿಸಿದರು.

ಪ್ರತಿಭಟನೆಗೆ ಬೆದರಿ ಸಂಪರ್ಕ
ಬಿಜೆಪಿ ಪ್ರತಿಭಟನೆಯ ಕರೆಗೆ ಬೆದರಿ ನಡು ಬಗ್ಗಿಸಿ ಎಣ್ಣೆಹೊಳೆ ಏತ ನೀರಾವರಿ ಯೋಜನೆಗೆ ವಿದ್ಯುತ್‌ ಮರುಸಂಪರ್ಕ ನೀಡಲಾಗಿದ್ದರೂ ಕಾಂಗ್ರೆಸ್ ನಾಯಕ
ಉದಯ ಶೆಟ್ಟಿ ಅವರು ಎಣ್ಣೆಹೊಳೆ ಏತ ನೀರಾವರಿ ಯೋಜನೆಗೆ ವಿದ್ಯುತ್ ಮರುಸಂಪರ್ಕ ನೀಡುವಲ್ಲಿ ಯಶಸ್ವಿಯಾಗಿದ್ದೇನೆ ಎಂಬ ಹೇಳಿಕೆ ಹಾಸ್ಯಾಸ್ಪದ ಮತ್ತು ಅಪ್ರಬುದ್ದ. ಒಂದೊಮ್ಮೆ ಉಪಮುಖ್ಯಮಂತ್ರಿಯವರನ್ನೂ ಸೇರಿಸಿ ವಿವಿಧ ಇಲಾಖಾ ಸಚಿವರಿಗೆ ಕರೆ ಮಾಡಿ ಮರು ಸಂಪರ್ಕ ಮಾಡಿಸಿದೆ ಎಂದೆನ್ನುವ ಇವರು ಮರುಕ್ಷಣ ತಾಂತ್ರಿಕ ದೋಷದಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು ಎಂಬ ದ್ವಂದ್ವ ಹೇಳಿಕೆ ನೀಡುತ್ತಾರೆ. ಇದು ಜನರ ಮುಂದೆ ನಗೆಪಾಟಲಿಗೀಡಾಗಿದೆ. ತಾಂತ್ರಿಕ ದೋಷ ಸರಿಪಡಿಸಲು ಇಲಾಖೆಯ ಇಂಜಿನೀಯರ್ ಕರೆಯಬೇಕೇ ವಿನಃ ಮಂತ್ರಿಗಳಿಗೆ ಕರೆ ಮಾಡುವ ಅವಶ್ಯಕತೆ ಏನಿದೆ ? ಇದು ಸಾಮಾನ್ಯ ಜ್ಞಾನ. ಕಾರ್ಕಳ ನೂರು ಪ್ರತಿಶತ ಸಾಕ್ಷರತೆ ಹೊಂದಿದ ತಾಲೂಕು ಇಲ್ಲಿನ ಜನತೆ ವಿದ್ಯಾವಂತರು ಹಾಗೂ ಪ್ರಬುದ್ಧರಿದ್ದಾರೆ. ಇನ್ನಾದರೂ ಇಂತಹ ಅಪ್ರಬುದ್ದ, ಬಾಲಿಶತನ ಹೇಳಿಕೆ ನೀಡುವುದನ್ನು ಬಿಟ್ಟು ವಾಸ್ತವ ಚಿತ್ರಣ ಜನತೆಯ ಮುಂದಿಡುವ ಪ್ರಯತ್ನ ಮಾಡಲಿ ಎಂದು ರವೀಂದ್ರ ಮೊಯ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









































































































error: Content is protected !!
Scroll to Top