ಕಾರ್ಕಳ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ನಟ ಪ್ರಕಾಶ್ ರೈ ಅವರಿಗೆ ಜೀವ ಬೆದರಿಕೆ ಹಾಕಿರುವ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ಪೊಲೀಸ್ ಇಲಾಖೆ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಆಗ್ರಹಿಸಿದ್ದಾರೆ.
ಉಡುಪಿಯಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಶಾಸಕರು ಬಳಸಿದ ಭಾಷೆ ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಬೀದಿ ರೌಡಿಯಂತೆ ವರ್ತಿಸಿದ್ದಾರೆ. ಸಂವಿಧಾನ ಬದ್ಧ ಹುದ್ದೆಯಲ್ಲಿರುವ ನಾಯಕರ ವಿರುದ್ಧ ಇಂತಹ ಹಿಂಸಾತ್ಮಕ ಹೇಳಿಕೆ ನೀಡುವುದು ಶಾಸಕರ ಮನಸ್ಥಿತಿಯನ್ನು ತೋರಿಸುತ್ತದೆ. ಸಾರ್ವಜನಿಕ ವೇದಿಕೆಗಳಲ್ಲಿ ನೀಡುವ ಇಂತಹ ಪ್ರಚೋದನಕಾರಿ ಹೇಳಿಕೆಗಳು ಜಿಲ್ಲೆಯ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರಲಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸುಶಿಕ್ಷಿತರ ಜಿಲ್ಲೆಯಾದ ಉಡುಪಿಗೆ ಶಾಸಕರ ನಡೆ ಕಪ್ಪು ಚುಕ್ಕೆಯಾಗಿದೆ. ಸದಾ ಉದ್ರಿಕ್ತ ವಾತಾವರಣ ನಿರ್ಮಿಸುವ ಈ ರೀತಿಯ ರಾಜಕಾರಣವನ್ನು ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದ್ದಾರೆ.
ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ಕಠಿಣ ಕ್ರಮಕ್ಕೆ ಶುಭದ ರಾವ್ ಆಗ್ರಹ































