ಕಾವೇರಿತು ಕಾವೇರಿ ಕಿಚ್ಚು : ಕರ್ನಾಟಕ ಬಂದ್‌ ಬಗ್ಗೆ ದಿನಾಂಕ ಘೋಷಣೆ – ವಾಟಾಳ್‌ ನಾಗರಾಜ್‌

ತಮಿಳುನಾಡಿಗೆ ಪ್ರತಿನಿತ್ಯ 3500 ಕ್ಯುಸೆಕ್ ಕಾವೇರಿ ನೀರು ಹರಿಸುವ ಆದೇಶದ ವಿರುದ್ಧ ಬೆಂಗಳೂರು, ಮಂಡ್ಯದಲ್ಲಿ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸಭೆ ಕರೆದಿದ್ದು, ಚರ್ಚೆಯ ನಂತರ ಕರ್ನಾಟಕ ಬಂದ್ ದಿನಾಂಕ ನಿರ್ಧರಿಸುವುದಾಗಿ ಘೋಷಿಸಿದ್ದಾರೆ.

ಬೆಂಗಳೂರು : ಕೆಆರ್‌ಎಸ್ ಜಲಾಶಯದಿಂದ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿನಿತ್ಯ 3500 ಕ್ಯುಸೆಕ್ ನೀರು ಹರಿಸಲು ಕಾವೇರಿ ನಿರ್ವಹಣಾ ಮಂಡಳಿ ಆದೇಶ ಮಾಡಿರುವ ವಿರುದ್ಧ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಬೆಂಗಳೂರು, ಮಂಡ್ಯ ಸೇರಿದಂತೆ ವಿವಿಧೆಡೆ ಬುಧವಾರ ಪ್ರತಿಭಟನೆ ನಡೆಯುತ್ತಿವೆ. ಮೈಸೂರು ಬ್ಯಾಂಕ್‌ ಸರ್ಕಲ್‌ ಬಳಿ ಪ್ರತಿಭಟನೆ ವೇಳೆ ಮಾತನಾಡಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ನಾಡಿದ್ದು ಬೆಳಗ್ಗೆ 11 ಗಂಟೆಗೆ ವುಡ್ ಲ್ಯಾಂಡ್ ಹೋಟೆಲ್‌ನಲ್ಲಿ ಸಭೆ ನಡೆಸಲಾಗುವುದು. ಅಲ್ಲಿ ಕರ್ನಾಟಕ ಬಂದ್‌ ಕುರಿತು ತೀರ್ಮಾನಿಸಿ ದಿನಾಂಕ ನಿಗದಿಗೊಳಿಸಲಾಗುವುದು ಎಂದರು.

ಕರವೇ ನಾರಾಯಣ ಗೌಡರು ಮಾತನಾಡಿ, ಸರ್ಕಾರ ಯಾವುದೇ ಕಾರಣಕ್ಕೂ ಈ ಆದೇಶವನ್ನು ಒಪ್ಪಿಕೊಳ್ಳಬಾರದು. ಕಾವೇರಿ ಅನ್ನೋದು ಕನ್ನಡಿಗರ ಭಾವನೆ, ಅದರ ಜೊತೆ ಹುಡುಗಾಟ ಆಡಬಾರದು. ತಮಿಳುನಾಡಿನ ರಾಜಕೀಯ ನಾಯಕರು ಕೇಂದ್ರದ ಜೊತೆ ಲಾಬಿ ಮಾಡಿದ್ದಾರೆ. ಆದರೆ, ಈ ತೀರ್ಪನ್ನು ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಒಪ್ಪಿಕೊಳ್ಳಬಾರದು ಎಂದರು.
ಪ್ರತಿಭಟನೆ ನಡೆಸುತ್ತಿದ್ದ ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್ ಮತ್ತು ಸಾರಾ ಗೋವಿಂದ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.























error: Content is protected !!
Scroll to Top