ಕುದುರೆಮುಖ ವನ್ಯಜೀವಿ ವಲಯದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ವಿರೋಧ – ಅಧಿಕಾರಿಗಳಿಂದ ಸ್ಪಷ್ಟನೆ

ಹೆಬ್ರಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವನ್ಯಜೀವಿ ವಲಯಗಳಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟಿಲ್ಲ ಹಾಗೂ ಕೊಡುವುದಿಲ್ಲ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪರಿಸರ ಜಾಗೃತಿ ಹಾಗೂ ಪ್ರಕೃತಿ ಅನುಭವದ ಹೆಸರಿನಲ್ಲಿ ಖಾಸಗಿ ಸಂಸ್ಥೆಯೊಂದು ಆ. 1 ರಂದು ಹೆಬ್ರಿ ತಾಲೂಕಿನ ಕಬ್ಬಿನಾಲೆ ಬಳಿ ಮಳೆ ನಡಿಗೆ ಹಸರಿನ ‘ರೇನಥಾನ್’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ.
ಈ ಸಂಬಂಧ ಬಹಳ ಪ್ರಚಾರ ನಡೆಸಿದ್ದು, ನೂರಾರು ಮಂದಿ ಭಾಗವಹಿಸುವ ಸಾಧ್ಯತೆ ಇದೆ. ಇದಕ್ಕೆ ಅಧಿಕ ಮೊತ್ತದ ಶುಲ್ಕವನ್ನೂ ಸಂಗ್ರಹಿಸಿರುವ ಬಗ್ಗೆ ಆರೋಪವಿದ್ದು, ಇಂಥ ಚಟುವಟಿಕೆಗಳಿಂದ ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕ ಸ್ಥಳೀಯರು ಹಾಗೂ ಪರಿಸರಾಸಕ್ತರಿಂದ ವ್ಯಕ್ತವಾಗಿದೆ.
ಕಬ್ಬಿನಾಲೆ ಕುದುರೆಮುಖ ವನ್ಯಜೀವಿ ವಿಭಾಗದ ಸೋಮೇಶ್ವರ ವನ್ಯಜೀವಿ ಧಾಮ ವ್ಯಾಪ್ತಿಯ ಪರಿಸರ ಸೂಕ್ಷ್ಮ ಪ್ರದೇಶ, ಇಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಸಲು ಅವಕಾಶವಿಲ್ಲ. ಜತೆಗೆ ಒಂದು ವೇಳೆ ಕಾರ್ಯಕ್ರಮ ನಡೆಸುವುದಿದ್ದರೂ ವನ್ಯಜೀವಿ ವಿಭಾಗ ಹಾಗೂ ಪರಿಸರ ಸೂಕ್ಷ್ಮ ಪ್ರದೇಶ ಮೇಲ್ವಿಚಾರಣ ಸಮಿತಿ ಅನುಮತಿ ಕಡ್ಡಾಯ. ಆದರೆ ಆಯೋಜಕರು ಅಧಿಕೃತ ಅನುಮತಿ ಪಡೆದಿಲ್ಲ ಎನ್ನಲಾಗಿದೆ.

ಪರಿಸರದ ಮೇಲೆ ಒತ್ತಡ
ದಟ್ಟ ಮಳೆಕಾಡು, ಜಲಪಾತ, ಹೊಳೆಗಳು ಹಾಗೂ ಅಪರೂಪದ ಜೀವವೈವಿಧ್ಯ ಹೊಂದಿರುವ ಕಬ್ಬಿನಾಲೆಯಲ್ಲಿ ಇಂತಹ ಕಾರ್ಯಕ್ರಮಗಳಿಂದ ಪ್ಲಾಸ್ಟಿಕ್ ತ್ಯಾಜ್ಯ, ವಾಹನಗಳ ಗದ್ದಲ, ವನ್ಯಜೀವಿಗಳಿಗೆ ತೊಂದರೆ, ಪರಿಸರ ಮಾಲಿನ್ಯ ಹೆಚ್ಚುವ ಅಪಾಯವಿದೆ ಎಂಬುದು ಪರಿಸರಾಸಕ್ತರ ವಿವರಣೆ. ಈ ಮಧ್ಯೆ ಪರಿಸರ ಕಾರ್ಯಕರ್ತ ನಾಗರಾಜ ಕೂವೆ ಎಂಬವರು ಖಾಸಗಿ ಕಾರ್ಯಕ್ರಮದ ಕುರಿತು ಜಿಲ್ಲೆಯಾದ್ಯಂತ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಗ್ರಾ. ಪಂ.ಗೆ ದೂರು ಸಲ್ಲಿಸಿದ್ದು, ಖಾಸಗಿ ಸಂಸ್ಥೆಯೊಂದು ಸಾವಿರಾರು ರೂ. ಶುಲ್ಕದೊಂದಿಗೆ ಮಳೆ ನಡಿಗೆ ಹೆಸರಿನ ಕಾರ್ಯಕ್ರಮ ಹಮ್ಮಿ ಕೊಳ್ಳುತ್ತಿದೆ. ಪಶ್ಚಿಮಘಟ್ಟ ಪರಿಸರದಲ್ಲಿ ಇಂಥ ಕಾರ್ಯಕ್ರಮಗಳು ಸಲ್ಲದು. ಅಲ್ಲದೇ ಇದಕ್ಕೆ ಯಾವುದೇ ಪೂರ್ವಾನುಮತಿ ಪಡೆದಿಲ್ಲ ಎಂದು ದೂರಿದ್ದಾರೆ.

ದುಡ್ಡು ಮಾಡುವ ದಂಧೆ
ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಪ್ರಚಾರ ನಡೆಸಿದ್ದು, ರಾಜ್ಯದ ವಿವಿಧ ಭಾಗಗಳಿಂದ ನೂರಾರು ಜನರನ್ನು ಸೆಳೆಯಲು ಪ್ರಯತ್ನಿಸಲಾಗಿದೆ. ಇದರಿಂದ ವಾರಾಂತ್ಯದಲ್ಲಿ ಕಬ್ಬಿನಾಲೆ ಪ್ರದೇಶದಲ್ಲಿ ಹೆಚ್ಚಿನ ಜನಸಂದಣಿ ಉಂಟಾಗುವ ಸಾಧ್ಯತೆ ಇದೆ. ಸಾಮಾಜಿಕ ಜಾಲತಾಣಗಳ ಮಂದಿ ಇದಕ್ಕೆ ಹಣ ಪಡೆದು ಪ್ರಚಾರ ಮಾಡಿದ್ದಾರೆ. ಒಟ್ಟಾರೆ ಎಲ್ಲರೂ ಸೇರಿ ದುಡ್ಡು ಮಾಡುವ ದಂಧೆಗೆ ಪಶ್ಚಿಮಘಟ್ಟ ಬಲಿಕೊಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ಷೇಪಿಸಿದ್ದಾರೆ.























error: Content is protected !!
Scroll to Top