ಎಚ್1ಬಿ ವೀಸಾ ಪಡೆದವರಿಗೆ ಈ ನಿಯಮ ಅನ್ವಯ
ವಾಷಿಂಗ್ಟನ್: ಅಮೆರಿಕದಲ್ಲಿ ದೀರ್ಘಕಾಲದಿಂದ ವಾಸಿಸುತ್ತಿರುವ ಎಚ್1-ಬಿ ವೀಸಾ ಹೊಂದಿರುವ ಭಾರತೀಯ ವೃತ್ತಿಪರರು ಮತ್ತು ಲಕ್ಷಾಂತರ ವಲಸಿಗರಿಗೆ ಗ್ರೀನ್ ಕಾರ್ಡ್ (ಖಾಯಂ ನಿವಾಸಿ ಅರ್ಹತೆ) ಸಿಗುವ ನಿರೀಕ್ಷೆ ಚಿಗುರಿದೆ.
ಅಮೆರಿಕದಲ್ಲಿ 15 ವರ್ಷಗಳಿಗಿಂತಲೂ ಹೆಚ್ಚು ಕಾಲ ವಾಸಿಸಿದರೂ, ಗ್ರೀನ್ ಕಾರ್ಡ್ ಪಡೆಯಲು ಭಾರತೀಯರು ಸೇರಿ ಹಲವರು ಕಾತುರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರೀನ್ ಕಾರ್ಡ್ ನೀಡುವುದಕ್ಕೆ ಸಂಬಂಧಿಸಿದ 1972ರ ಹಳೆಯ ನಿಯಮವನ್ನು ತೆಗೆದುಹಾಕಿ, ಕೇವಲ 7 ವರ್ಷಗಳ ವಾಸದ ನಿಯಮವನ್ನು ತರುವ ಮಸೂದೆಯನ್ನು ಡೆಮಾಕ್ರಟಿಕ್ ಪಕ್ಷದ ಸೆನೆಟರ್ ಅಲೆಕ್ಸ್ ಪಡಿಲ್ಲಾ ಮರುಪ್ರಸ್ತಾಪಿಸಿದ್ದಾರೆ.
ಸದ್ಯ 1972ರ ವಲಸೆ ಕಾನೂನಿಗೆ ತಿದ್ದುಪಡಿ ತರುವ ಈ ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರವಾದರಷ್ಟೇ 7 ವರ್ಷ ಕಾಲ ಅಮೆರಿಕದಲ್ಲಿ ಸತತವಾಗಿ ನೆಲೆಸಿದ್ದ ಹಾಗೂ ಯಾವುದೇ ಅಪರಾಧ ಹಿನ್ನೆಲೆಯಿಲ್ಲದ ಭಾರತೀಯರು ಮತ್ತು ಇತರ ವಲಸಿಗರು ನೇರವಾಗಿ ಗ್ರೀನ್ ಕಾರ್ಡ್‌ಗೆ ಅರ್ಹರಾಗುತ್ತಾರೆ. ಇಲ್ಲವಾದಲ್ಲಿ 1972ರ ನಿಯಮಗಳೇ ಮುಂದುವರಿಯಲಿವೆ.
ಅಮೆರಿಕದಲ್ಲಿ ಎಚ್1-ಬಿ ವೀಸಾ ಹೊಂದಿರುವವರಲ್ಲಿ ಭಾರತೀಯರು ಅತಿ ದೊಡ್ಡ ಗುಂಪಾಗಿದ್ದಾರೆ. ಉದ್ಯೋಗ ಆಧಾರಿತ ಕೋಟಾದಡಿ ಗ್ರೀನ್ ಕಾರ್ಡ್ ಪಡೆಯಲು ಹಲವು ವರ್ಷಗಳಿಂದ ಕಾಯುತ್ತಿದ್ದಾರೆ.











