ಮಿಷನ್ ಏಡ್ಸ್ ಸುರಕ್ಷಾ ಮೊಬಿಲೈಸೇಶನ್ ಅಭಿಯಾನ ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಎಡಿಸಿ ಗದ್ಯಾಳ್ ಸೂಚನೆ
ಉಡುಪಿ : ಹೆಚ್.ಐ.ವಿ. ಸೋಂಕಿನ ಬಗ್ಗೆ ಅರಿವು ಮೂಡಿಸುವುದು ಹಾಗೂ ಹೆಚ್.ಐ.ವಿ. ಸೋಂಕಿತರನ್ನು ಗುರುತಿಸಿ, ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಸರಕಾರ ಮಿಷನ್ ಏಡ್ಸ್ ಸುರಕ್ಷಾ ಮೊಬಿಲೈಸೇಶನ್ ಅಭಿಯಾನ ಆರಂಭಿಸಿದ್ದು, ಅಭಿಯಾನವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಫಸ್ಟ್ 95 ಸಮಿತಿ ಹಾಗೂ ಜಿಲ್ಲಾ ಜಂಟಿ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತದಲ್ಲಿ ಹೆಚ್.ಐ.ವಿ. ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಮೊಬಿಲೈಸೇಶನ್ ಫಾರ್ ಏಡ್ಸ್ ಸುರಕ್ಷಾ (ಎಂ.ಎ.ಎಸ್) ಕಾರ್ಯಕ್ರಮವನ್ನು ಜಾರಿಗೆ ತರಲಾಗಿದ್ದು, 2027ರ ಡಿಸೆಂಬರ್ 1ರ ವಿಶ್ವ ಏಡ್ಸ್ ದಿನದೊಳಗೆ ಜಿಲ್ಲೆಯಲ್ಲಿ ಹೆಚ್.ಐ.ವಿ. ಸಾಂಕ್ರಾಮಿಕವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಗುರಿ ಹೊಂದಲಾಗಿದೆ. ಈ ಕಾರ್ಯಕ್ರಮವು 95-95-99 ಗುರಿಗಳನ್ನು ಪರಿಣಾಮಕಾರಿಯಾಗಿ ಸಾಧಿಸುವತ್ತ ಕೇಂದ್ರಿಕರಿಸಿದ್ದು, ಅಭಿಯಾನವು 2026 ಡಿಸೆಂಬರ್ವರೆಗೆ ಚಾಲ್ತಿಯಲ್ಲಿರಲಿದ್ದು ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಂತೆ ಅಬೀದ್ ತಿಳಿಸಿದರು.
ಜಿಲ್ಲೆಯಲ್ಲಿ 5,790 ಹೆಚ್.ಐ.ವಿ. ಸೋಂಕಿತರು ಜೀವನ ನಡೆಸುತ್ತಿದ್ದಾರೆ ಎಂದು ಅಂದಾಜಿಸಲಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 4691 ಜನರು ಮಾತ್ರ ತಮ್ಮ ಹೆಚ್.ಐ.ವಿ. ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 1141 ಜನರಿಗೆ ಹೆಚ್.ಐ.ವಿ ಸೋಂಕು ಇದ್ದರೂ ಅವರು ತಮ್ಮ ಹೆಚ್.ಐ.ವಿ ಸ್ಥಿತಿಯನ್ನು ಇನ್ನೂ ತಿಳಿದುಕೊಂಡಿಲ್ಲ. ಅವರನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕಾಗಿರುತ್ತದೆ. ಇವರನ್ನು ಪತ್ತೆ ಹಚ್ಚಲು ಸರಕಾರ ನಾನಾ ಉಪಕ್ರಮಗಳನ್ನು ಕೈಗೊಂಡಿದೆ. ಜನಸಾಮಾನ್ಯರಲ್ಲಿ ಈ ಕಾರ್ಯಕ್ರಮದ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಅವರು ಸ್ವಯಂ ಪ್ರೇರಿತರಾಗಿ ಹೆಚ್.ಐ.ವಿ. ಪರೀಕ್ಷೆಗೆ ಸಂಬಂಧಿಸಿದ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಅಲ್ಲಿ ನೀಡುವ ಪ್ರಶ್ನೆಗಳಿಗೆ ಉತ್ತರಿಸಿ, ಸಂಶಯ ಬಂದಲ್ಲಿ ಹೆಚ್.ಐ.ವಿ. ಪರೀಕ್ಷೆಗಳನ್ನು ಮಾಡಿಸಿಕೊಳ್ಳುವಂತೆ ಉತ್ತೇಜನ ಮಾಡಬೇಕೆಂದರು.

ಯುವ ಸಮುದಾಯವು ಹೆಚ್ಚಿರುವ ಶಾಲಾ-ಕಾಲೇಜುಗಳಲ್ಲಿ ಏಡ್ಸ್ ರೋಗದ ನಿಯಂತ್ರಣ, ಹರಡುವಿಕೆ, ಗುರುತಿಸುವಿಕೆ ಹಾಗೂ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದ ಅವರು, ಸಂಘ-ಸಂಸ್ಥೆಗಳು, ಯುವಕ ಸಂಘಗಳು ಹಾಗೂ ಎನ್.ಜಿ.ಓ ಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮುಂದಾಗಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಏಡ್ಸ್ ರೋಗ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಜಿಲ್ಲಾ ಸರ್ಜನ್ ಡಾ. ಹೆಚ್.ಅಶೋಕ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.




























































