ಕಾರ್ಕಳ : ವಿಶ್ವ ಹೆಪಟೈಟಿಸ್ ದಿನಾಚರಣೆಯ ಅಂಗವಾಗಿ ಕಾರ್ಕಳ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಕಾರ್ಕಳ ಹಾಗೂ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಸಹಯೋಗದಲ್ಲಿ ಯಕೃತ್ ಆರೋಗ್ಯ ಮತ್ತು ಹೆಪಟೈಟಿಸ್ ತಡೆಗಟ್ಟುವಿಕೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಪ್ರಾಧ್ಯಾಪಕ ಡಾ. ಶಿರನ್ ಶೆಟ್ಟಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಯಕೃತಿನ ಆರೋಗ್ಯದ ಮಹತ್ವ, ಹೆಪಟೈಟಿಸ್ ತಡೆಗಟ್ಟುವಲ್ಲಿ ಲಸಿಕೆಗಳ ಪಾತ್ರ, ಸಮತೋಲನ ಆಹಾರ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿಯ ಅಗತ್ಯತೆ ಬಗ್ಗೆ ವಿವರಿಸಿದರು. ಯಕೃತ್ ಸಂಬಂಧಿತ ಕಾಯಿಲೆಗಳ ಶೀಘ್ರ ಪತ್ತೆ ಮತ್ತು ಚಿಕಿತ್ಸೆಯ ಮಹತ್ವವನ್ನೂ ತಿಳಿಸಿದರು.
ರೋಟರಿ ಕ್ಲಬ್ ಕಾರ್ಕಳ ಅಧ್ಯಕ್ಷ ವಿಜಯೇಂದ್ರ ಕುಮಾರ್, ಮಾತನಾಡಿ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಸಮಾಜದ ಆರೋಗ್ಯ ವೃದ್ಧಿಗೆ ಅತಿ ಅಗತ್ಯ ಎಂದರು. ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಸಂಜಯ್ ಕುಮಾರ್ ಮಾತನಾಡಿ, ಆಗಸ್ಟ್ 3 ರಿಂದ 5ರವರೆಗೆ ವಿಶೇಷ ಯಕೃತ್ ಆರೋಗ್ಯ ತಪಾಸಣಾ ಪ್ಯಾಕೇಜ್ ಲಭ್ಯವಿರಲಿದೆ ಎಂದರು.
ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷ ಮಂಜುನಾಥ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.











