ನವಿ ಮುಂಬೈ : ಉಡುಪಿಯ ಅಷ್ಟಮಠಗಳಲ್ಲಿ ಒಂದಾಗಿರುವ ಪುತ್ತಿಗೆ ಮಠದ ಶ್ರೀ ಸುಗುಣೆಂದ್ರ ಶ್ರೀಪಾದರ 53ನೇ ಹಾಗೂ ಮುಂಬೈಯಲ್ಲಿ 8ನೇ ಚಾತುರ್ಮಾಸ್ಯ ವೃತ ಆಚರಣೆಯು ನವಿ ಮುಂಬೈ ಪುತ್ತಿಗೆ ಮಠದಲ್ಲಿ ನಡೆಯಲಿದ್ದು, ಇದರ ಅಮಂತ್ರಣ ಪತ್ರಿಕೆಯನ್ನು ಚಾತುರ್ಮಾಸ್ಯ ಆಚರಣೆ ಸಮಿತಿ ಮುಂಬೈ ಅಧ್ಯಕ್ಷ ಅಜೆಕಾರ್ ಶಿವರಾಮ ಶೆಟ್ಟಿ ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಅವರು, ಪೂಜ್ಯ ಶ್ರೀಪಾದರ ಚಾತುರ್ಮಾಸ್ಯದ ಪುಣ್ಯ ಕಾರ್ಯವನ್ನು ಉತ್ಸವ ರೀತಿಯಲ್ಲಿ ಆಚರಿಸೋಣ. ಗುರುಭಕ್ತರಾದ ನಾವೆಲ್ಲರೂ ಶ್ರದ್ಧೆಯಿಂದ ಈ ನಿಟ್ಟಿನಲ್ಲಿ ತೊಡಗಿಸಿಕೊಳ್ಳೋಣ ಎಂದರು. ಶ್ರೀಪಾದರ ಧರ್ಮ ಜಾಗೃತಿಯ ಕಾರ್ಯ ಮತ್ತು ಭಗವದ್ಗೀತೆಯ ಪಠಣ ಕಾರ್ಯವನ್ನು ಭಕ್ತರಿಗೆ ತಲುಪಿಸುವ ಕಾರ್ಯವನ್ನೂ ಒಟ್ಟಾಗಿ ಮಾಡಬೇಕಿದೆ ಎಂದು ಶಿವರಾಮ ಶೆಟ್ಟಿ ಹೇಳಿದರು.
ಶ್ರೀಪಾದರ ಚಾತುರ್ಮಾಸ್ಯ ಪ್ರಯುಕ್ತ ಆ. 11ರಂದು ನವಿ ಮುಂಬೈಯಲ್ಲಿ ಪುರಪ್ರವೇಶ ಜರುಗಲಿದೆ. ಆ. 12ರಿಂದ ಸ್ವಾಮೀಜಿ ಚಾತುರ್ಮಾಸ್ಯ ವೃತ ಕೈಗೊಳ್ಳಲಿದ್ದಾರೆ.
ಸಮಿತಿ ಗೌರವಾಧ್ಯಕ್ಷ ಎನ್. ಆರ್. ರಾವ್, ಸಂಚಾಲಕ ಸುಧೀರ್ ಹೆಗ್ಡೆ, ಗುರುಪ್ರಸಾದ್ ಭಟ್ ಘನ್ಸೋಲಿ, ನಾಗೇಂದ್ರ ಭಟ್, ಸಂತೋಷ್ ಸಿ. ಶೆಟ್ಟಿ, ಕುಲಾಲ ಸಂಘದ ಮುಂಬೈ ಅಧ್ಯಕ್ಷ ರಘು ಮೂಲ್ಯ ಮೊದಲಾದವರು ಈ ಸಂದರ್ಭದಲ್ಲಿದ್ದರು.
ಸಿಎ ಸುಧೀರ್ ಶೆಟ್ಟಿ ಸ್ವಾಗತಿಸಿ, ಪತ್ರಕರ್ತ ದಿನೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.











