ನವದೆಹಲಿ: ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ಶಿಫಾರಸಿನಂತೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ದಿನಂಪ್ರತಿ 3,500 ಕ್ಯೂಸೆಕ್‌ನಂತೆ ನೀರು ಹರಿಸಬೇಕು ಎಂದು CWRC ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು CWMA ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ ಪ್ರಾಧಿಕಾರವು CWRC ನೀಡಿದ್ದ ಆದೇಶವನ್ನು ಎತ್ತಿಹಿಡಿದಿದ್ದು ನೀರು ಬಿಡುವಂತೆ ರಾಜ್ಯಕ್ಕೆ ಸೂಚಿಸಿದೆ.
ದೆಹಲಿಯಲ್ಲಿ ಎಸ್.ಕೆ. ಹಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ಮಧ್ಯಾಹ್ನ CWMA ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಕರ್ನಾಟಕದ ಪರವಾಗಿ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಖುದ್ದಾಗಿ ಭಾಗವಹಿಸಿ ರಾಜ್ಯದ ಜಲಾಶಯಗಳ ನೀರಿನ ಅಭಾವದ ಪರಿಸ್ಥಿತಿಯನ್ನು ವಿವರಿಸಿದರು. ತಮಿಳುನಾಡು ಸರ್ಕಾರದ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.












