ಉಡುಪಿಯ ಹಲವೆಡೆ ಉಪಲೋಕಾಯುಕ್ತರ ನೇತೃತ್ವದಲ್ಲಿ ದಾಳಿ

ಉಡುಪಿ : ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಫೆ. 27ರಂದು ಉಡುಪಿಯಲ್ಲಿನ ವಿವಿಧ ಸರಕಾರಿ ಇಲಾಖೆಗಳಿಗಳಿಗೆ ದಾಳಿ ನಡೆಸಿದರು. ತಾಲೂಕು ಕಚೇರಿಗೆ ದಿಡೀರ್‌ ದಾಳಿ ಮಾಡಿ ಅಧಿಕಾರಿಗಳ ಬೆವರಿಳಿಸಿದರು. ಜೀನ್ಸ್ ಪ್ಯಾಂಟ್ ಧರಿಸಿ ಬಂದ ಸರಕಾರಿ ನೌಕರರಿಗೆ ತರಾಟೆಗೆತ್ತಿಕೊಂಡರು.
ಚಿಟ್ ಫಂಡ್ ದಾಖಲೆ ಹಿಡಿದುಕೊಂಡು ಬಂದಿದ್ದ ಸರಕಾರಿ ನೌಕರನ ಚಳಿ ಬಿಡಿಸಿದರು. ತನ್ನ ವೈಯಕ್ತಿಕ ಬ್ಯಾಗ್ ನಲ್ಲಿ ಸರಕಾರಿ ದಾಖಲೆ ಇಟ್ಟುಕೊಂಡಿದ್ದ ನೌಕರನನ್ನು ಅಮಾನತು ಮಾಡುವಂತೆಯೂ ಸೂಚಿಸಿದ ಉಪಲೋಕಾಯುಕ್ತರು ಆತನ ವಿರುದ್ಧ ಪ್ರಕರಣ ದಾಖಲಿಸುವಂತೆ ಉಡುಪಿ ನಗರ ಪೊಲೀಸರಿಗೆ ತಿಳಿಸಿದರು.

ಇದಕ್ಕೂ ಮುನ್ನ ಬೆಳ್ಳಂ ಬೆಳಗ್ಗೆ ಮಲ್ಪೆ ಬಂದರು ಪ್ರದೇಶಕ್ಕೂ ಭೇಟಿ ನೀಡಿದರು. ಈ ವೇಳೆ ಮಲಿನ ನೀರು ಸಮುದ್ರ ಸೇರುತ್ತಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಉಡುಪಿ ಸರಕಾರಿ ಬಸ್ ನಿಲ್ದಾಣದಲ್ಲಿನ ಅವ್ಯವಸ್ಥೆ ಬಗ್ಗೆಯೂ ಕಿಡಿಕಾರಿದರು. ತಿಂಡಿಯ ದರ ನಮೂದಿಸದ ಹೋಟೆಲ್ ಮಾಲಕನನ್ನೂ ಉಪಲೋಕಾಯುಕ್ತರು ತರಾಟೆಗೆತ್ತಿಕೊಂಡರು.

ದಾಳಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಉಪಲೋಕಾಯುಕ್ತರು, ನಿಟ್ಟೂರಿನ ಶುದ್ಧೀಕರಣ ಘಟಕ ಸಂಪೂರ್ಣ ಹಾಳಾಗಿದೆ. ಕೊಳಕು ನೀರಿನ ಶುದ್ಧೀಕರಣ ಕಾರ್ಯ ಆಗುತ್ತಿಲ್ಲ. ಅಸಮರ್ಪಕ ನಿರ್ವಹಣೆಗೆ, ಬಂದರಿನ ಕೊಳಚೆ ಬಗ್ಗೆ ಸುಮೋಟೋ ಪ್ರಕರಣ ದಾಖಲಿಸಲಾಗುವುದು. ಸಮುದ್ರಕ್ಕೆ ಕೊಳಕು ನೀರು ಬಿಟ್ಟು ರಾಜ್ಯಕ್ಕೆಲ್ಲ ಮೀನು ಹಂಚುತ್ತಿದ್ದಾರೆ. ಕೆಮಿಕಲ್ಸ್ ಎಲ್ಲ ನೀರಿಗೆ ಸೇರಿ ಮೀನುಗಾರಿಕೆ ಕುಸಿತವಾಗಿದೆ ಎಂದರು.

ತಾಲೂಕು ಕಚೇರಿಯಲ್ಲಿ ತುಂಬಾ ಕೇಸುಗಳು ಪೆಂಡಿಂಗ್ ಇದೆ. ಸಬ್ ರಿಜಿಸ್ಟರ್ ಕಚೇರಿಯಲ್ಲಿ ಸರಕಾರಿ ದಾಖಲೆಗಳು ಖಾಸಗಿಯಾಗಿ ಬ್ಯಾಗಿನಲ್ಲಿ ಇರಿಸಿಕೊಳ್ಳಲಾಗಿದೆ. ಮಾಜಿ ಸೈನಿಕರೊಬ್ಬರ ಭೂಮಿ ಏಳು ವರ್ಷ ಆದರೂ ಸರ್ವೇ ಮಾಡಿಲ್ಲ. ಅಟೆಂಡೆನ್ಸ್ ರಿಜಿಸ್ಟರ್ ಸಮರ್ಪಕವಾಗಿಲ್ಲ. ಸರಕಾರಿ ನೌಕರ ಚಿಟ್ ಫಂಡ್ ದಾಖಲೆ ಇಟ್ಟುಕೊಂಡಿದ್ದಾರೆ. ಸರಕಾರಿ ನೌಕರರಿಗೆ ಡ್ರೆಸ್ ಕೋಡ್ ಇದೆ. ಅದರ ಪಾಲನೆಯಿಲ್ಲ. ಸಬ್ ರಿಜಿಸ್ಟರ್ ಕಚೇರಿಯ ಇಬ್ಬರು ಸಿಬ್ಬಂದಿ ಮೇಲೆ ಕೇಸ್ ರಿಜಿಸ್ಟರ್ ಮಾಡುತ್ತವೆ ಎಂದರು.

ಡಿಸಿ ಕಚೇರಿಯಲ್ಲಿ ಮೀಟಿಂಗ್ ಮಾಡಿದಾಗ ಇಲ್ಲಿಯ ಜನ ಬಹಳ ಬುದ್ಧಿವಂತರು ಎಂದಿದ್ದರು. ಇಲ್ಲಿ ಅಧಿಕಾರಿಗಳು ವಿದ್ಯಾವಂತರಿದ್ದಾರೆ, ಆದರೆ ಮೋಸಗಾರರಿದ್ದಾರೆ ಎಂದ ಉಪಲೋಕಾಯುಕ್ತರು ಏನೇ ಕೇಳಿದರೂ ಇಲ್ಲಿನ ಅಧಿಕಾರಿಗಳು ಬಾಯಿ ಮುಚ್ಚಿ ಕೂತಿರುತ್ತಾರೆ. ಮೌನವೇ ಉತ್ತರ ಎಂಬಂತೆ ಇರುತ್ತಾರೆ. ನಮ್ಮನ್ನೇ ಯಾಮಾರಿಸುತ್ತಾರೆ ಎಂದರು.









































































































error: Content is protected !!
Scroll to Top