ಉಡುಪಿ : ಜಿಲ್ಲೆಯಲ್ಲಿ 2003ರಲ್ಲಿ ಕಾಣಿಸಿಕೊಂಡ ನಕ್ಸಲ್ ಚಟುವಟಿಕೆ ಸಂಬಂಧ ಈವರೆಗೆ ದಾಖಲಾದ ಒಟ್ಟು 68 ಪ್ರಕರಣಗಳಲ್ಲಿ 39 ಪ್ರಕರಣಗಳು ನ್ಯಾಯಾಂಗ ವಿಚಾರಣೆಯಲ್ಲಿದ್ದು, 28 ಪ್ರಕರಣಗಳು ವಿಲೇವಾರಿಯಾಗಿದೆ. ಇದರಲ್ಲಿ ಒಂದು ಪ್ರಕರಣ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲು ಬಾಕಿ ಇದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಮೂವರು ಆರೋಪಿಗಳ ವಿರುದ್ಧ ಹೆಚ್ಚುವರಿ ದಾಖಲಾತಿ ಸಲ್ಲಿಸಲು ಬಾಕಿ ಇದೆ. ಒಂದು ಪ್ರಕರಣ ಸಿಐಡಿ ತನಿಖೆಯಲ್ಲಿದೆ. ಕಳೆದ 6 ತಿಂಗಳಲ್ಲಿ 39 ಪ್ರಕರಣಗಳಲ್ಲಿ 11 ಜನ ನಕ್ಸಲ್ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಈ 39 ಪ್ರಕರಣಗಳಲ್ಲಿ ಹಾಜರುಪಡಿಸಿದ ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ಆರೋಪಪಟ್ಟಿ (charge frame) ಆಗಿದ್ದು, ನ್ಯಾಯಾಲಯದ ವಿಚಾರಣೆಯಲ್ಲಿದೆ ಎಂದು ಅವರು ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಕಳಸದ ವನಜಾಕ್ಷಿ ಯಾನೆ ಕಲ್ಪನಾ (58) ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿದ್ದು, ಅವರ ವಿರುದ್ಧ 6 ಪ್ರಕರಣಗಳಲ್ಲಿ, ಶೃಂಗೇರಿಯ ಬಿ.ಜಿ. ಕೃಷ್ಣಮೂರ್ತಿ ಯಾನೆ ವಿಜಯ್ ಯಾನೇ ಭಗತ್ (46) ಕೇರಳ ರಾಜ್ಯದ ತ್ರಿಶೂರ್ ಹೈ ಸೆಕ್ಯೂರಿಟಿ ಜೈಲಿನಲ್ಲಿದ್ದು, ಅವರ ವಿರುದ್ಧ 7 ಪ್ರಕರಣಗಳಲ್ಲಿ, ಕಳಸದ ಸಾವಿತ್ರಿ ಯಾನೆ ಉಷಾ ಯಾನೆ ರೆಜಿತಾ (35) ಕೇರಳ ರಾಜ್ಯದ ಮಹಿಳಾ ಕಾರಾಗೃಹದಲ್ಲಿದ್ದು, ಅವರ ಮೇಲೆ 2 ಪ್ರಕರಣಗಳಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗಿದೆ.

ಶೃಂಗೇರಿಯ ಮುಂಡಗಾರು ಲತಾ ಯಾನೆ ಶ್ಯಾಮಲಾ ಯಾನೆ ಸ್ನೇಹ (45) ಬೆಂಗಳೂರು ಸೆಂಟ್ರಲ್ ಜೈಲ್ ನಲ್ಲಿದ್ದು, ವಿರುದ್ಧ 12 ಪ್ರಕರಣಗಳಿವೆ. ಕಳಸದ ಕನ್ಯಾಕುಮಾರಿ ಬೆಂಗಳೂರು ಸೆಂಟ್ರಲ್ ಜೈಲ್ ನಲ್ಲಿದ್ದು, 10 ಪ್ರಕರಣಗಳಲ್ಲಿ, ಮೂಡಿಗೆರೆಯ ಸುರೇಶ ಯಾನೆ ಪ್ರದೀಪ ಯಾನೆ ಮಹೇಶ (50) ಕೇರಳ ರಾಜ್ಯದ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿದ್ದು, 23 ಪ್ರಕರಣಗಳಲ್ಲಿ, ಹೊಸಗದ್ದೆ ಪ್ರಭಾ ತಮಿಳುನಾಡಿನ ವೆಲ್ಲೂರಿನ ಸಾಯಿ ಓಲ್ಡ್ ಏಜ್ ಹೋಂ ನಲ್ಲಿದ್ದು, ಆರು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ.
ಬೆಳ್ತಂಗಡಿ ಕುತ್ಲೂರಿನ ಸುಂದರಿ ಯಾನೆ ಗೀತಾ ಯಾನೆ ಬಿತ್ತು ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಅವರ ವಿರುದ್ಧ 9 ಪ್ರಕರಣಗಳ ಆರೋಪ ಇದೆ. ರಾಯಚೂರು ಜಿಲ್ಲೆಯ ಮಾನ್ವಿಯ ಮಹೇಶ ಯಾನೆ ಮಾಧವ ಯಾನೆ ಜಾನ್ (49) ಸದ್ಯ ಕೇರಳದ ತ್ರಿಶೂರ್ ಹೈ ಸೆಕ್ಯೂರಿಟಿ ಜೈಲಿನಲ್ಲಿದ್ದು, 8 ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿದ್ದಾರೆ. ಕೊಪ್ಪದ ನೀಲಗುಳಿ ಪದ್ಮನಾಭ ಜಾಮೀನು ಪಡೆದು ಬಿಡುಗಡೆಗೊಂಡಿದ್ದಾರೆ, ಅವರು 2 ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತೊಂಬಟ್ಟು ಗ್ರಾಮದ ಲಕ್ಷ್ಮಿ ಯಾನೆ ಪ್ರೇಮ (39) ಜಾಮೀನು ಪಡೆದಿದ್ದು, ಅವರ ವಿರುದ್ಧ 4 ಪ್ರಕರಣಗಳ ವಿಚಾರಣೆಯಾಗುತ್ತಿವೆ.






























































