ಪವರ್ ಆಫ್ ಅಟಾರ್ನಿ ಅಧಿನಿಯಮ 1882

ಒಬ್ಬ ವ್ಯಕ್ತಿಯು ತನ್ನ ಪರವಾಗಿ ಕಾರ್ಯ ನಿರ್ವಹಿಸಲು ಮತ್ತು ವ್ಯವಹರಿಸಲು ಇನ್ನೊಬ್ಬ ವ್ಯಕ್ತಿಗೆ ಲಿಖಿತವಾಗಿ ಮತ್ತು ಅಧಿಕೃತವಾಗಿ ಬರೆದುಕೊಡುವ ದಾಖಲೆ ಪತ್ರಕ್ಕೆ ಪವರ್ ಆಫ್ ಅಟಾರ್ನಿ ಅಥವಾ ಮುಖ್ತ್ಯಾರ್‌ನಾಮೆ ಎನ್ನುತ್ತಾರೆ. ಈ ರೀತಿಯ ದಾಖಲೆಗೆ ಸಂಬಂಧಪಟ್ಟಂತೆ ಪವರ್ ಆಫ್ ಅಟಾರ್ನಿ ಅಧಿನಿಯಮ 1882 ಎಂಬ ಬಹಳ ಹಳೆಯದಾದ ಕಾನೂನು ನಮ್ಮ ದೇಶದಲ್ಲಿ ಜಾರಿಯಲ್ಲಿರುತ್ತದೆ. ಪವರ್ ಆಫ್ ಅಟಾರ್ನಿಯಲ್ಲಿ ಎರಡು ವಿಧಗಳಿದ್ದು (1) ಸಾಮಾನ್ಯ ಪವರ್ ಆಫ್ ಅಟಾರ್ನಿ (ಜನರಲ್ ಪವರ್ ಆಫ್ ಅಟಾರ್ನಿ) ಮತ್ತು (2) ವಿಶೇಷ ಪವರ್ ಆಫ್ ಅಟಾರ್ನಿ (ಸ್ಪೆಷಲ್ ಪವರ್ ಆಫ್ ಅಟಾರ್ನಿ). ಒಂದಕ್ಕಿಂತ ಹೆಚ್ಚು ಕಾರ್ಯಗಳಲ್ಲಿ ವ್ಯವಹರಿಸಲು ಒಬ್ಬ ವ್ಯಕ್ತಿ ಇನ್ನೊಂದು ವ್ಯಕ್ತಿಗೆ ನೀಡುವ ಪವರ್ ಆಫ್ ಅಟಾರ್ನಿಯನ್ನು ಸಾಮಾನ್ಯ ಪವರ್ ಆಫ್ ಅಟಾರ್ನಿ ಅಥವಾ ಜನರಲ್ ಪವರ್ ಆಫ್ ಅಟಾರ್ನಿ ಎಂಬುದಾಗಿ ಪರಿಗಣಿಸಲಾಗುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ನಿರ್ದಿಷ್ಟವಾದ ಯಾವುದೇ ಒಂದು ಕಾರ್ಯವನ್ನು ಮಾಡುವ ಉದ್ದೇಶಕ್ಕಾಗಿ ನೀಡುವ ಪವರ್ ಆಫ್ ಅಟಾರ್ನಿ ವಿಶೇಷ ಪವರ್ ಆಫ್ ಅಟಾರ್ನಿ ಅಥವಾ ಸ್ಪೆಷಲ್ ಪವರ್ ಆಫ್ ಅಟಾರ್ನಿ ಆಗಿರುತ್ತದೆ.

ಪ್ರಾಪ್ತ ವಯಸ್ಸಿನ (18 ವರ್ಷ ಮೀರಿದ), ಸ್ವಸ್ಥ ಮನಸ್ಸಿನ, ದಿವಾಳಿಯಾಗಿಲ್ಲದ ಯಾವುದೇ ವ್ಯಕ್ತಿ ಪವರ್ ಆಫ್ ಅಟಾರ್ನಿ ಬರೆದು ಕೊಡುವ ಅರ್ಹತೆ ಹೊಂದಿರುತ್ತಾರೆ. ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಜಂಟಿಯಾಗಿ ಪವರ್ ಆಫ್ ಅಟಾರ್ನಿಯನ್ನು ಇನ್ನೊಬ್ಬರ ಹೆಸರಿಗೆ ಬರೆದುಕೊಡಬಹುದು. ಪವರ್ ಆಫ್ ಅಟಾರ್ನಿಯನ್ನು ನೋಂದಣಿ ಮಾಡಬೇಕೆಂಬ ಕಡ್ಡಾಯವಾದ ನಿಯಮವಿರುವುದಿಲ್ಲ. ಆದರೂ ಇಂತಹ ದಾಖಲೆಯನ್ನು ನೋಂದಾಯಿಸುವುದರಿಂದ ಅದರ ನೈಜತೆಯ ಬಗ್ಗೆ ಹೆಚ್ಚು ನಂಬಿಕೆ ಮತ್ತು ವಿಶ್ವಾಸ ಬರುವುದರಿಂದ ವ್ಯವಹಾರಗಳು ಅದರಲ್ಲೂ ಮುಖ್ಯವಾಗಿ ಆಸ್ತಿ ಮಾರಾಟಕ್ಕೆ ಸಂಬಂಧಪಟ್ಟ ವ್ಯವಹಾರಗಳು ಸುಗಮವಾಗಿ ನಡೆಯುವುದರಿಂದ ಅದನ್ನು ನೋಂದಣಿ ಮಾಡುವುದು ಒಳ್ಳೆಯದು. ಪವರ್ ಆಫ್ ಅಟಾರ್ನಿ ಬರೆದುಕೊಟ್ಟ ವ್ಯಕ್ತಿಯು ಆ ನಂತರ ಯಾವ ಸಮಯದಲ್ಲಿಯೂ ಅದನ್ನು ತನಗಿಷ್ಟ ಬಂದಾಗ ಅದನ್ನು ರದ್ದುಪಡಿಸುವ ಅಧಿಕಾರ ಹೊಂದಿರುತ್ತಾನೆ. ಪವರ್ ಆಫ್ ಅಟಾರ್ನಿ ಹೊಂದಿರುವ ವ್ಯಕ್ತಿಗೆ ಅದನ್ನು ಬರೆದುಕೊಟ್ಟ ವ್ಯಕ್ತಿಯು ಲಿಖಿತವಾಗಿ ರಿಜಿಸ್ಟರ್ಡ್ ಪತ್ರ ಅಥವಾ ನೋಟೀಸು ಕಳುಹಿಸುವ ಮೂಲಕ ರದ್ದು ಪಡಿಸಬಹುದು. ಆದರೆ ಅದಕ್ಕೆ ಸಂಬಂಧಿಸಿದ ಸ್ವತ್ತಿನಲ್ಲಿ ಪವರ್ ಆಫ್ ಅಟಾರ್ನಿ ಹೊಂದಿರುವ ವ್ಯಕ್ತಿ ಯಾವುದೇ ಹಿತಾಸಕ್ತಿ ಹೊಂದಿರುವ ಪಕ್ಷದಲ್ಲಿ ಮತ್ತು ಅಂತಹ ದಾಖಲೆಯನ್ನು ಬರಕೊಡುವ ಸಂದರ್ಭದಲ್ಲಿ ತಾನು ನೀಡುವ ಅಧಿಕಾರವನ್ನು ಹಿಂದೆ ತೆಗೆದುಕೊಳ್ಳಲು ಅವಕಾಶ ಇಲ್ಲವೆಂಬ ಸ್ಪಷ್ಟವಾದ ಶರ್ತ ಇದ್ದರೆ ಪವರ್ ಆಫ್ ಅಟಾರ್ನಿಯ ಆಧಾರದ ಮೇಲೆ ಹೊಂದಿರುವ ಹಿತಾಸಕ್ತಿಯು ಕೊನೆಗೊಳ್ಳುವುದಿಲ್ಲ ಮತ್ತು ಪವರ್ ಆಫ್ ಅಟಾರ್ನಿಯನ್ನು ಸೂಕ್ತ ಪ್ರತಿಫಲಕ್ಕಾಗಿ ಇಲ್ಲವೇ ಭದ್ರತೆಯ ಭಾಗವಾಗಿ (ಪಾರ್ಟ್ ಆಫ್ ಸೆಕ್ಯೂರಿಟಿ) ಗೋಸ್ಕರ ಬರೆದು ಕೊಟ್ಟಿದ್ದರೆ ಅಂತಹ ಪವರ್ ಆಫ್ ಅಟಾರ್ನಿಯನ್ನು ಕಾನೂನಿನನ್ವಯ ರದ್ದುಗೊಳಿಸುವಂತಿಲ್ಲ.

ವಿದೇಶದಲ್ಲಿ ಇರುವ ಭಾರತೀಯ ಪ್ರಜೆ ಪವರ್ ಆಫ್ ಅಟಾರ್ನಿಯನ್ನು ಬರೆದುಕೊಟ್ಟಾಗ ಆ ದೇಶದಲ್ಲಿರುವ ಭಾರತದ ರಾಯಭಾರಿ ಅಥವಾ ಉಪ- ರಾಯಭಾರಿ ಇಲ್ಲವೇ ಕೇಂದ್ರ ಸರ್ಕಾರದ ಪ್ರತಿನಿಧಿಯು ಪವರ್ ಆಫ್ ಅಟಾರ್ನಿಯನ್ನು ದೃಢೀಕರಿಸಬೇಕಾಗುತ್ತದೆ ಮತ್ತು ಅದನ್ನು ಪಡಕೊಂಡ ವ್ಯಕ್ತಿ ಮೂರು ತಿಂಗಳ ಒಳಗಾಗಿ ಸಂಬಂಧಪಟ್ಟ ಜಿಲ್ಲಾ ನೋಂದಣಾಧಿಕಾರಿಯವರ ಕಚೇರಿಗೆ ಅದನ್ನು ಹಾಜರುಪಡಿಸಿ ನಿರ್ದಿಷ್ಟವಾದ ಸ್ಟ್ಯಾಂಪ್ ಡ್ಯೂಟಿಯನ್ನು ಪಾವತಿಸಿ ಸೂಕ್ತ ಹಿಂಬರಹವನ್ನು ಪಡೆಯಬೇಕಾಗುತ್ತದೆ. ದಸ್ತಾವೇಜನ್ನು ಬರೆದುಕೊಡುವ ವ್ಯಕ್ತಿ ಅಂಗವಿಕಲನಾಗಿದ್ದಲ್ಲಿ ಅಥವಾ ಆತ ಯಾವುದೇ ಜೈಲಿನಲ್ಲಿ ಇದ್ದು ಸಕಾರಣದಿಂದ ಆತನಿಗೆ ನೋಂದಣಾಧಿಕಾರಿ ಕಚೇರಿಗೆ ಹಾಜರಾಗಲು ಅಸಾಧ್ಯವಾದಲ್ಲಿ ಸ್ವತಃ ನೋಂದಣಾಧಿಕಾರಿಯವರು ಖುದ್ದು ಆತ ಇರುವ ಸ್ಥಳಕ್ಕೆ ಭೇಟಿ ನೀಡಿ ಪವರ್ ಆಫ್ ಅಟಾರ್ನಿಯನ್ನು ನೋಂದಣಿ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಆದುದರಿಂದ ಯಾವುದೇ ಒಂದು ಆಸ್ತಿಯನ್ನು ಅದಕ್ಕೆ ಸಂಬಂಧಪಟ್ಟ ನೋಂದಾಯಿತ ಮಾಲಿಕ ಪವರ್ ಆಫ್ ಅಟಾರ್ನಿ ಹೋಲ್ಡರ್ ಮುಖಾಂತರ ಖರೀದಿ ಮಾಡುವ ಸಂಧರ್ಭದಲ್ಲಿ ಖರೀದಿಗಾರ ಬಹಳ ಮುಂಜಾಗ್ರತೆ ವಹಿಸಬೇಕು. ಈ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ, ಅಂತಹ ವ್ಯವಹಾರಕ್ಕೆ ಸಂಬಂಧಪಟ್ಟ ಆಸ್ತಿಯ ನೋಂದಾಯಿತ ಮಾಲಿಕನಿಗೆ ಲಿಖಿತವಾಗಿ ಪತ್ರ ಅಥವಾ ನೋಟೀಸು ಮೂಲಕ ಖರೀದಿಯ ಪ್ರಸ್ತಾವವನ್ನು ತಿಳಿಸಿ ಅಥವಾ ಸಾರ್ವಜನಿಕ ಪ್ರಕಟಣೆ ನೀಡಿ ಆಸ್ತಿ ಖರೀದಿ ಮಾಡುವುದು ಒಳ್ಳೆಯದು. ಕಾರಣ ಪವರ್ ಆಫ್ ಅಟಾರ್ನಿಯಲ್ಲಿ ತಿಳಿಸಿರುವ ಉದ್ದೇಶ ನೆರವೇರಿದ ಸಂಧರ್ಭದಲ್ಲಿ ಅಥವಾ ಕಾನೂನಿನ ಬದಲಾವಣೆಯಿಂದ ಅಥವಾ ಅದನ್ನು ಬರೆದುಕೊಟ್ಟ ವ್ಯಕ್ತಿ ಮೃತಪಟ್ಟಾಗ ಅಥವಾ ಆತನು ತನ್ನ ಸ್ವಾಸ್ಥಚಿತ್ತವನ್ನು ಕಳಕೊಂಡಾಗ ಅಥವಾ ಪವರ್ ಆಫ್ ಅಟಾರ್ನಿಯನ್ನು ಬರೆದುಕೊಟ್ಟ ವ್ಯಕ್ತಿ ದಿವಾಳಿಯಾದರೆ ಅಥವಾ ಅದರಲ್ಲಿ ನಿಗದಿಗೊಳಿಸಿರುವ ಅವಧಿ ಮುಗಿದಾಗ ಅಥವಾ ಪವರ್ ಆಫ್ ಅಟಾರ್ನಿ ನೀಡಿದ ವ್ಯಕ್ತಿ ಅದನ್ನು ರದ್ದುಪಡಿಸಿದಾಗ, ಪವರ್ ಆಫ್ ಅಟಾರ್ನಿಯ ಆಧಾರದಲ್ಲಿ ನಡೆಸುವ ಯಾವುದೇ ವ್ಯವಹಾರವು ಕಾನೂನುಬದ್ಧವಾಗಿರುವುದಿಲ್ಲ ಮತ್ತು ಅಂತಹ ವ್ಯವಹಾರಗಳು ಕಾನೂನಿನನ್ವಯ ಅಸಿಂಧು ಆಗಿರುತ್ತದೆ.















































































































































































error: Content is protected !!
Scroll to Top