ಕಾರ್ಕಳ : ಅತ್ತೂರು ಸೇಂಟ್ ಲಾರೆನ್ಸ್ ಬಸಿಲಿಕಾದಲ್ಲಿ ಡಿ. 24ರಂದು ಕ್ರಿಸ್‌ಮಸ್ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಸಂಜೆ ಅತ್ತೂರು ಗಾಯನ ಮಂಡಳಿಯವರ ಕ್ರಿಸ್‌ಮಸ್ ಗಾಯನದೊಂದಿಗೆ ಕಾರ್ಯಕ್ರಮ ಆರಂಭಗೊಂಡಿದ್ದು, ಉಡುಪಿ ಧರ್ಮಪ್ರಾಂತ್ಯದ ಧರ್ಮಶಿಕ್ಷಣ ನಿರ್ದೇಶಕ ವಂದನಿಯ ಫಾ. ಜಿತೇಶ್ ಕ್ಯಾಸ್ಟೆಲಿನೋ ಪವಿತ್ರ ಬಲಿಪೂಜೆ ನೆರವೇರಿಸಿದರು. ತಮ್ಮ ಸಂದೇಶದಲ್ಲಿ ಕ್ರಿಸ್‌ಮಸ್ ಹಬ್ಬದ ಮಹತ್ವತೆಯನ್ನು ವಿವರಿಸಿದ ಅವರು ಏಸುಕ್ರಿಸ್ತನ ತತ್ವಾದರ್ಶಗಳನ್ನು ಪಾಲಿಸುವುದರೊಂದಿಗೆ ಸಮಾಜದಲ್ಲಿ ಬಡ ಜನತೆಗೆ ನೆರವಾಗೋಣ ಎಂದರು.

ಪವಿತ್ರ ಬಲಿ ಅರ್ಪಣೆಯ ಸಮಯದಲ್ಲಿ 2026ನೇ ಸಾಲಿನ ಐಸಿವೈಎಂ (ICYM) ಸಂಘಟನೆಯ ನೂತನ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿದರು. ನಂತರ ವೈಸಿಎಸ್ (YCS) ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಐಸಿವೈಎಂ ವತಿಯಿಂದ ಕೇಕ್ ಹರಾಜು ನಡೆಯಿತು. ಕಾರ್ಯಕ್ರಮದಲ್ಲಿ ಧರ್ಮಗುರು ವಂದನಿಯ ಫಾ. ಅಲ್ಬನ್ ಡಿಸೋಜಾ, ವಂದನಿಯ ಫಾ. ರೊಬಿನ್ ಸಾಂತುಮಾಯೆರ್, ವಂದನಿಯ ಫಾ. ರೋಮನ್ ಮಸ್ಕರೇನ್ಹಾಸ್ ಹಾಗೂ ವಂದನಿಯ ಫಾ. ಆಂಟನಿ ವಾಜ್ ಉಪಸ್ಥಿತರಿದ್ದರು.





















