ನಮ್ಮ ದೇಶದ ಸಂವಿಧಾನದ ಪ್ರಕಾರ ಪ್ರತಿಯೊಬ್ಬ ಮಹಿಳೆಯು ಹೊಂದಿರುವ ವಿವಿಧ ಹಕ್ಕುಗಳ ರಕ್ಷಣೆಗಾಗಿ ಮತ್ತು ಮಹಿಳೆಯರ ಶ್ರೇಯೋಭಿವೃದ್ಧಿಯ ಹಿತದೃಷ್ಟಿಯಿಂದ 13-09-2005 ರಂದು ಕೇಂದ್ರ ಸರಕಾರವು ‘ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2005’ ಎಂಬ ವಿಶೇಷ ಕಾನೂನನ್ನು ದೇಶದಲ್ಲಿ ಜ್ಯಾರಿಗೆ ತಂದಿರುತ್ತದೆ. ಈ ಕಾಯ್ದೆಯ ಪ್ರಕಾರ ಯಾವುದೇ ವಿವಾಹಿತ ಮಹಿಳೆ ಆಕೆಯ ಗಂಡ ಅಥವಾ ಗಂಡನ ಸಂಬಂಧಿಕರೊಂದಿಗೆ ಒಟ್ಟಿಗೆ ವಾಸವಾಗಿರುವಂತಹ ಸಂದರ್ಭದಲ್ಲಿ ಆಕೆಯ ಗಂಡ ಅಥವಾ ಗಂಡನ ಸಂಬಂಧಿಕರು ನೇರವಾಗಿ ಅಥವಾ ಪರೋಕ್ಷವಾಗಿ ಆಕೆಗೆ ಮಾನಸಿಕ, ದೈಹಿಕ, ಆರ್ಥಿಕ ಹಿಂಸೆ ಅಥವಾ ಕಿರುಕುಳ ನೀಡಿದ ಸಂದರ್ಭದಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯು ‘ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2005’ ಕಲಂ 12ರ ಪ್ರಕಾರ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ನೇರವಾಗಿ ಅಥವಾ ಸರಕಾರದಿಂದ ನಿಯೋಜಿಸಲ್ಪಟ್ಟ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನಾಧಿಕಾರಿಯವರ ಮುಖಾಂತರ ಅಥವಾ ಸರಕಾರದಿಂದ ಮಾನ್ಯತೆ ಹೊಂದಿರುವ ಯಾವುದೇ ಸಮಾಜ ಸೇವಾ ಸಂಸ್ಥೆ ಮುಖಾಂತರವಾಗಲೀ ಆಕೆಯ ವಿರುದ್ಧ ನಡೆಸಿದ ಅಥವಾ ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಲಿಖಿತ ದೂರನ್ನು ನೀಡಿ ಸೂಕ್ತ ರಕ್ಷಣೆ ಮತ್ತು ದೌರ್ಜನ್ಯದಿಂದ ಆಕೆಗೆ ಉಂಟಾದ ಯಾವುದೇ ರೀತಿಯ ನಷ್ಟ ಮತ್ತು ತೊಂದರೆಗಳಿಗೆ ಸೂಕ್ತ ಪರಿಹಾರವನ್ನು ಕೇಳಿ ಪಡೆಯಲು ಹಕ್ಕುಳ್ಳವಳಾಗಿರುತ್ತಾಳೆ. ಮಾತ್ರವಲ್ಲದೇ ದೌರ್ಜನ್ಯದಿಂದ ತನಗೆ ಮಾನಸಿಕ, ಭಾವನಾತ್ಮಕ, ದೈಹಿಕ ಮತ್ತು ಆರ್ಥಿಕ ಒತ್ತಡ ಉಂಟಾಗಿದ್ದರೆ ಆಕೆ ದೌರ್ಜನ್ಯ ನೀಡಿದವರ ವಿರುದ್ಧ ಸೂಕ್ತ ಪರಿಹಾರವನ್ನು ಕೇಳಬಹುದು.
ಒಂದು ಕುಟುಂಬ ವ್ಯವಸ್ಥೆಯಲ್ಲಿ ಮದುವೆಯ ನಂತರ ವಿಧಿಸಮ್ಮತವಾಗಿ ಅಂದರೆ ಕಾನೂನಿನ ನಿಯಮಾನುಸಾರವಾಗಿ ವಿವಾಹವಾಗಿರುವ ಅಥವಾ ವಿಧಿಸಮ್ಮತವಲ್ಲದ ಅಂದರೆ ಅನಧಿಕೃತವಾಗಿ ವಿವಾಹವಾಗಿರುವ ಮಹಿಳೆಯ ವಿರುದ್ಧ ಆಕೆಯ ಪತಿ ಅಥವಾ ಪತಿಯ ಸಂಬಂಧಿಕರು ಒಟ್ಟಿಗೆ ವಾಸವಾಗಿರುವ ಸಂದರ್ಭದಲ್ಲಿ ಆಕೆಗೆ ದೈಹಿಕವಾಗಿ ಅಥವಾ ಮಾನಸಿಕವಾಗಿ ಅಂದರೆ ಚುಚ್ಚು ಮಾತಿನ ಮೂಲಕವಾಗಲಿ ಅಥವಾ ಭಾವನಾತ್ಮಕವಾಗಿ ನಿಂದಿಸುವ ಮೂಲಕ, ಆರ್ಥಿಕವಾಗಿ, ಧಾರ್ಮಿಕವಾಗಿ ಅಥವಾ ಲೈಂಗಿಕವಾಗಿ ನೇರವಾಗಿ ಅಥವಾ ಪರೋಕ್ಷವಾಗಿ ಎಸಗುವ ದೌರ್ಜನ್ಯವನ್ನು ‘ಕೌಟುಂಬಿಕ ದೌರ್ಜನ್ಯ’ ಎಂದು ಪರಿಗಣಿಸಲಾಗುತ್ತದೆ. ಈ ರೀತಿಯ ಕೌಟುಂಬಿಕ ದೌರ್ಜನ್ಯದ ದೂರಿನ ವಿರುದ್ಧ ನಡೆಸುವ ತನಿಖೆಯನ್ನು ಸಂಬಂಧಪಟ್ಟ ನ್ಯಾಯಾಧೀಶರು ಸಂದರ್ಭಕ್ಕನುಸಾರವಾಗಿ ಅಗತ್ಯವೆಂದು ಕಂಡುಬಂದಲ್ಲಿ ‘ಗೌಪ್ಯ ವಿಚಾರಣೆ’ ಮೂಲಕ ದೂರು ನೀಡಿದ ಮಹಿಳೆ ಮತ್ತು ದೂರಿನಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳ ಸಮಕ್ಷಮ ತನಿಖೆ ನಡೆಸಲು ಕಾನೂನಿನಲ್ಲಿ ಅವಕಾಶವಿದೆ.
ದೌರ್ಜನ್ಯಕ್ಕೊಳಗಾದ ಮಹಿಳೆ ತಾನು ವಾಸ ಮಾಡುತ್ತಿರುವ ಮನೆಯಿಂದ ಆಕೆಯ ಪತಿ ಅಥವಾ ಪತಿಯ ಸಂಬಂಧಿಕರು ಹೊರದಬ್ಬುವ ಸಂದರ್ಭದಲ್ಲಿ ಸೂಕ್ತ ರಕ್ಷಣೆ ಅಥವಾ ಆಕೆ ತಾನು ವಾಸ ಮಾಡುತ್ತಿರುವ ಮನೆಗೆ ಅಥವಾ ನೌಕರಿ ಮಾಡುತ್ತಿರುವ ಕಚೇರಿಗೆ, ಆಕೆಯ ಪತಿ ಅಥವಾ ಪತಿಯ ಸಂಬಂಧಿಕರು ಆತಳ ಇಚ್ಚೆಗೆ ವಿರುದ್ಧವಾಗಿ ಪ್ರವೇಶ ಮಾಡದಂತೆ ಮತ್ತು ಯಾವುದೇ ರೀತಿಯ ತೊಂದರೆ ಅಥವಾ ಕಿರುಕುಳ ನೀಡದಂತೆ, ಆಕೆಯ ವೈಯುಕ್ತಿಕ ವಿಚಾರಗಳ ಅಂದರೆ ವಿದ್ಯುಜ್ಜನಿತ ಸಾಧನ ಅಂದರೆ ಮೊಬೈಲ್, ಟೆಲಿಫೋನ್ ಮೂಲಕ ತನ್ನ ಸಂಬಂಧಿಕರೊಂದಿಗೆ ಅಥವಾ ಸ್ನೇಹಿತರೊಂದಿಗೆ ನಡೆಸುವ ಸಂಭಾಷಣೆ ವಿಚಾರಗಳ ಕುರಿತು ಹಸ್ತಕ್ಷೇಪ ನಡೆಸಿ ಆಕೆಗೆ ತೊಂದರೆ ನೀಡದಂತೆ ಅಥವಾ ಆಕೆ ತನ್ನ ಸ್ವಂತ ಹೆಸರಿನಲ್ಲಿ ಅಥವಾ ತನ್ನ ಗಂಡನೊಂದಿಗೆ ಜಂಟಿಯಾಗಿ ಹೊಂದಿರುವ ಯಾವುದೇ ಆಸ್ತಿ ಅಥವಾ ಸೊತ್ತನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಮಾರಾಟ ಅಥವಾ ಪರಾಭಾರೆ ಮಾಡದಂತೆ ಮತ್ತು ಆಕೆ ತಾನು ಸ್ವತಂತ್ರವಾಗಿ, ಶಾಂತಿಯುತವಾಗಿ ಮತ್ತು ನೆಮ್ಮದಿಯಿಂದ ಜೀವಿಸಲು ಹೊಂದಿರುವ ಹಕ್ಕಿಗೆ ಯಾವುದೇ ರೀತಿಯಲ್ಲಿ ಅಡ್ಡಿ ಅಥವಾ ಆಕ್ಷೇಪ ಉಂಟುಮಾಡದಂತೆ ಸೂಕ್ತ ‘ರಕ್ಷಣಾ ಆದೇಶ’ವನ್ನು ಸಂಬಂಧಪಟ್ಟ ನ್ಯಾಯಾಧೀಶರಿಂದ ಪಡೆಯುವ ಹಕ್ಕನ್ನು ಹೊಂದಿರುತ್ತಾಳೆ. ಮಾತ್ರವಲ್ಲದೆ ಒಂದು ವೇಳೆ ಆಕೆ ತನ್ನ ಗಂಡನ ಅಥವಾ ಗಂಡನೊಂದಿಗೆ ವಾಸವಿರುವ ಆತನ ಸಂಬಂಧಿಕರ ದೌರ್ಜನ್ಯ ಅಥವಾ ಕಿರುಕುಳದಿಂದಾಗಿ ತನ್ನ ಗಂಡನ ಮನೆಯಲ್ಲಿ ನೆಮ್ಮದಿ ಮತ್ತು ಸುರಕ್ಷಿತವಾಗಿ ವಾಸ ಮಾಡಲು ಅಸಾಧ್ಯವೆಂತ ರುಜುವಾತು ಪಡಿಸಿದಲ್ಲಿ ಆಕೆಗೆ ಪ್ರತ್ಯೇಕವಾಗಿ ವಾಸ ಮಾಡಲು ಮನೆ ಅಥವಾ ವಾಸ್ತವ್ಯದ ವ್ಯವಸ್ಥೆಯನ್ನು ಮಾಡಿಕೊಡುವಂತೆ ಆಕೆಯ ಗಂಡನಿಗೆ ಸೂಕ್ತ ನಿರ್ದೇಶನ ನೀಡುವ ಅಧಿಕಾರವನ್ನು ಮೇಲ್ಕಾಣಿಸಿದ ಕಾನೂನಿನ ಪ್ರಕಾರ ನ್ಯಾಯಾಧೀಶರು ಹೊಂದಿರುತ್ತಾರೆ. ಇದಲ್ಲದೇ ಆಕೆಯ ಮತ್ತು ಆಕೆಯ ಮಕ್ಕಳ ಪಾಲನೆ ಪೋಷಣೆ ಬಗ್ಗೆ ಮಾಸಿಕ ಅಥವಾ ಏಕಗಂಟಿನ ಜೀವನಾಂಶವನ್ನು ಮತ್ತು ಆಕೆಗೆ ಉಂಟಾದ ಕಷ್ಟ ಮತ್ತು ನಷ್ಟದ ಪರಿಹಾರ ಬಾಬ್ತು ಸೂಕ್ತ ಮೊತ್ತವನ್ನು ಆಕೆಯ ಗಂಡನಿಂದ ಅಥವಾ ದೌರ್ಜನ್ಯ ನಡೆಸಿದ ಗಂಡನ ಸಂಬಂಧಿಕರಿಂದ ಕೊಡಿಸುವ ಮತ್ತು ಆಕೆಯ ವಿರುದ್ಧ ದೌರ್ಜನ್ಯ ನಡೆಸಿದವರಿಗೆ ಸೂಕ್ತ ಶಿಕ್ಷೆಯನ್ನು ನೀಡುವ ಅಥವಾ ದಂಡ ವಿಧಿಸುವ ಅಧಿಕಾರವನ್ನು ಸಂಬಂಧಪಟ್ಟ ನ್ಯಾಯಾಧೀಶರು ಹೊಂದಿರುತ್ತಾರೆ.






















