ಚಿಕ್ಕಮಗಳೂರು : ಶಬರಿಮಲೆ ಅಯ್ಯಪ್ಪ ಮಾಲೆ ಧರಿಸಿ ಬಂದಿದ್ದ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಹಾಕಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ನಗರದ ಎಂಇಎಸ್ ಪಿಯು ಕಾಲೇಜಿನಲ್ಲಿ ಅಯ್ಯಪ್ಪ ಮಾಲೆ ಧರಿಸಿದ ಮೂವರು ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಪ್ರಿನ್ಸಿಪಾಲ್ ಹೊರಗೆ ಹಾಕಿದ್ದು, ಮಾಲೆ ತೆಗೆದು ಒಳಗೆ ಬನ್ನಿ ಎಂದು ತಾಕೀತು ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಹಿಂದೂ ಸಂಘಟನೆ, ಬಿಜೆಪಿ ಕಾರ್ಯಕರ್ತರು ಕಾಲೇಜು ಬಳಿ ಬಂದು ಪ್ರಿನ್ಸಿಪಾಲ್ ನಡುವೆ ವಾಗ್ವಾದ ನಡೆಸಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಸೇರಿದಂತೆ ನೂರಾರು ಹಿಂದೂ ಸಂಘಟನೆಗಳ ಮುಖಂಡರು, ಕಾಲೇಜು ಬಳಿ ಬಂದು ಕಾಲೇಜ್ ಅಡಳಿತ ಮಂಡಳಿಯ ವಿರುದ್ಧ ಆಕ್ರೋಶ ಹೊರಹಾಕಿದ್ದು, ಅಯ್ಯಪ್ಪ ಮಾಲಾಧಾರಿಗಳನ್ನ ಹೊರ ಕಳಿಸಿದ್ರೆ ನೂರಾರು ವಿದ್ಯಾರ್ಥಿಗಳಿಗೆ ಮಾಲೆ ಹಾಕಿಸುವ ಎಚ್ಚರಿಕೆ ನೀಡಿದರು. ಬಸವನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ವಾದ ವಿವಾದದ ಬಳಿಕ ಅಂತಿಮವಾಗಿ ಅಯ್ಯಪ್ಪ ಮಾಲೆ ಹಾಕಿಕೊಂಡು ಬಂದಿದ್ದ ಮೂವರು ವಿದ್ಯಾರ್ಥಿಗಳನ್ನು ತರಗತಿಗೆ ಕೂರಲು ಪ್ರಿನ್ಸಿಪಾಲ್ ಅನುಮತಿ ನೀಡಿದ್ದಾರೆ. ಜೊತೆಗೆ ಆಡಳಿತ ಮಂಡಳಿ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಿನ್ಸಿಪಾಲ್, ನಾವು ಸರ್ಕಾರ ಹಾಗೂ ಕಾಲೇಜು ಆಡಳಿತ ಮಂಡಳಿಯ ಆದೇಶ ಪಾಲಿಸಿದ್ದೇವೆ. ನಮ್ಮಲ್ಲಿ ಸಮವಸ್ತ್ರ ಬಿಟ್ಟು ಬೇರೆ ಯಾವುದೇ ಬಟ್ಟೆ ಧರಿಸುವಂತಿಲ್ಲ. ವಿದ್ಯಾರ್ಥಿಗಳಿಗೆ ನಾವು ತಿಳಿ ಹೇಳಿದ್ದೇವೆ ಅಷ್ಟೇ. ಸದ್ಯಕ್ಕೆ ಮೂವರು ವಿದ್ಯಾರ್ಥಿಗಳನ್ನ ತರಗತಿಗೆ ಕೂರುವಂತೆ ಸೂಚನೆ ನೀಡಿದ್ದು, ಈ ಬಗ್ಗೆ ಆಡಳಿತ ಮಂಡಳಿಯ ಜೊತೆ ಚರ್ಚೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.























