ಗೀತೆ ಪಠಣದಿಂದ ದಿವ್ಯ ಅನುಭೂತಿ ಪ್ರಾಪ್ತಿ – ಮೋದಿ

ಉಡುಪಿಯ ಸ್ವಚ್ಛತೆಗೆ ಪ್ರಧಾನಿ ಶ್ಲಾಘನೆ – ನವಸಂಕಲ್ಪಕ್ಕೆ ಕರೆ

ಉಡುಪಿ : ಸಾವಿರಾರು ಭಕ್ತರ ಸಮ್ಮುಖದಲ್ಲಿ ಗೀತೆ ಪಠಣದಿಂದ ದಿವ್ಯ ಅನುಭೂತಿ ಪ್ರಾಪ್ತಿಯಾಗುವುದು. ಉಡುಪಿ ಭಕ್ತಿ, ಧ್ಯಾನ, ಸೇವೆಯ ಸಂಗಮಕ್ಕೆ ಪ್ರಸಿದ್ಧಿ ಪಡೆದ ಕ್ಷೇತ್ರ. ಕೃಷ್ಣನೂರಿಗೆ, ಮಧ್ವಾಚಾರ್ಯರ ಈ ಭೂಮಿಗೆ ಬರುವುದೇ ನನಗೆ ಸಂತಸದ ಕ್ಷಣವಾಗಿದ್ದು, ಇಲ್ಲಿ ಆಧ್ಯಾತ್ಮಿಕ ಆನಂದ ದೊರೆಯುವುದು ಎಂದು ಪ್ರಧಾನಿ ಮೋದಿ ಬಣ್ಣಿಸಿದರು.


ನ. 28ರಂದು ಉಡುಪಿ ಕೃಷ್ಣ ಮಠದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿ ಶ್ರೀ ಸುಶ್ರೀಂದ್ರ ತೀರ್ಥರ ನೇತೃತ್ವದಲ್ಲಿ ನಡೆಯುತ್ತಿರುವ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ “ಎಲ್ಲರಿಗೂ ನಮಸ್ಕಾರ, ಜೈ ಶ್ರೀ ಕೃಷ್ಣ” ಎಂದು ಕನ್ನಡದಲ್ಲಿ ಮಾತು ಆರಂಭಿಸಿ ಸಭೆಯನ್ನುದ್ದೇಶಿಸಿ ಮೋದಿ ಮಾತನಾಡಿದರು.

ಭಕ್ತಿ ಮಾರ್ಗದ ಪ್ರವರ್ತಕ, ಉಡುಪಿ ಶ್ರೀಕೃಷ್ಣ ಮಠದ ಪ್ರೇರಕ ಶಕ್ತಿ ಮಧ್ವಾಚಾರ್ಯರ ಹೆಸರಿನಲ್ಲಿ ಅಯೋಧ್ಯೆಯಲ್ಲಿ ಮಹಾದ್ವಾರ ನಿರ್ಮಾಣ ಮಾಡಲಾಗಿದೆ. ಉಡುಪಿಯೊಂದಿಗೆ ನನಗೆ ಆತ್ಮೀಯ, ಅದ್ಭುತ ಭಾವನೆ ಇದೆ ಎಂದ ಮೋದಿಯವರು ಕಾರ್ಯಕ್ರಮದಲ್ಲಿ ಪುತ್ತಿಗೆ ಉಭಯ ಶ್ರೀಪಾದರು, ಸಂತರು, ಅಷ್ಟಮಠಗಳ ಪ್ರತಿನಿಧಿಗಳು, ರಾಜ್ಯಪಾಲರು, ಕೇಂದ್ರ ಸಚಿವರು, ಸಂಸದರು, ಶಾಸಕರು ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಭಕ್ತರು ಸೇರಿರುವುದನ್ನು ಕಂಡು ಸಂತಸವಾಗಿದೆ ಎಂದರು.
ನಾನು ಗುಜರಾತ್‌ನಲ್ಲಿ ಹುಟ್ಟಿದೆ. ಗುಜರಾತ್ ಮತ್ತು ಉಡುಪಿ ನಡುವೆ ವಿಶೇಷ ಸಂಬಂಧವಿದೆ. ಇಲ್ಲಿ ಸ್ಥಾಪನೆ ಮಾಡಿರುವ ಕೃಷ್ಣನ ಮೂರ್ತಿಗೆ ಮೊದಲು ದ್ವಾರಕದಲ್ಲಿ ಪೂಜೆ ನೆರವೇರುತ್ತಿತ್ತು. ಅಲ್ಲಿ ರುಕ್ಮಿಣಿ ಪೂಜೆ ಮಾಡುತ್ತಿದ್ದರು. ಮತ್ತೆ ಮಧ್ವಾಚಾರ್ಯರು ಉಡುಪಿಯಲ್ಲಿ ಕೃಷ್ಣನ ಮೂರ್ತಿ ಸ್ಥಾಪನೆ ಮಾಡಿದ್ದರು ಎಂದು ಮೋದಿ ಹೇಳಿದರು.

ಪೂರಕ
ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಲಕ್ಷ ಕಂಠ ಗೀತೆಯನ್ನು ದಿವ್ಯರೂಪದಿಂದ ಸಾಕಾರಗೊಳಿಸಿದ್ದಾರೆ. ಕೋಟಿ ಗೀತಾ ಲೇಖನ ಯಜ್ಞದಿಂದ ಸನಾತನ ಪರಂಪರೆಯ ಜನಾಂದೋಲನವಾಗಿದೆ. ಗೀತೆಯನ್ನು ಮುಂದಿನ ಪೀಳಿಗೆಗೆ ಮುಂದುವರಿಸಲು ಈ ಕಾರ್ಯಕ್ರಮ ಸಹಕಾರಿ ಎಂದರು. ಅಯೋಧ್ಯೆಯಿಂದ ಉಡುಪಿ ತನಕ ರಾಮಭಕ್ತರಿದ್ದಾರೆ. ಅಯೋಧ್ಯೆಯಲ್ಲಿ ಧರ್ಮ ಧ್ವಜ ಸ್ಥಾಪನೆಯಾಗಿದೆ. ರಾಮ ಮಂದಿರ ಆಂದೋಲನದಲ್ಲಿ ಉಡುಪಿಯ ಕೊಡುಗೆ ಲೋಕಕ್ಕೆ ತಿಳಿದಿದೆ. ಪೇಜಾವರ ಶ್ರೀವಿಶ್ವೇಶ ತೀರ್ಥರು ಶ್ರೀರಾಮ ಮಂದಿರಕ್ಕೆ ಹೊಸ ದಿಕ್ಕು ತೋರಿದವರು ಎಂದು ಮೋದಿ ಬಣ್ಣಿಸಿದರು.

ನವ ಭಾರತ
ಶ್ರೀ ಕೃಷ್ಣನು ಯುದ್ಧಭೂಮಿಯಲ್ಲಿ ಗೀತೆಯ ಧರ್ಮೋಪದೇಶ ನೀಡಿದನು. ಪಹಲ್ಗಾಮ್‌ ಘಟನೆಯಲ್ಲಿ ಜೀವ ತೆತ್ತವರಲ್ಲಿ ಕರ್ನಾಟಕದ ಸೋದರರೂ ಇದ್ದರು. ದೇಶದ ಮೇಲೆ ದಾಳಿಯಾದಾಗ ಮೊದಲೆಲ್ಲಾ ಸರಕಾರ ಸುಮ್ಮನಿರುತ್ತಿತ್ತು. ಆದರೆ, ಇದೀಗ ನವ ಭಾರತದಲ್ಲಿ ಹಾಗಿಲ್ಲ. ನಾವು ಯಾರ ಎದುರಿಗೂ ಬಗ್ಗದೇ ಸೂಕ್ತ ಪ್ರತ್ಯುತ್ತರ ನೀಡುತ್ತೇವೆ. ಗೀತೆಯಲ್ಲಿ ಉಲ್ಲೇಖ ಮಾಡಿದಂತೆ ಲೋಕ ಕಲ್ಯಾಣಕ್ಕಾಗಿ ಕೃಷ್ಣ ಸುದರ್ಶನ ಚಕ್ರ ಬಳಸಿದಂತೆ ದೇಶದ ಸುರಕ್ಷತೆಗಾಗಿ ದುಸ್ಸಾಹಸಿಗಳ ವಿರುದ್ಧ ಮಿಷನ್‌ ಸುದರ್ಶನ ಅಸ್ತ್ರದ ಮೂಲಕ ತಕ್ಕ ಶಾಸ್ತಿ ಮಾಡಿಲಿದ್ದೇವೆ. ಆಪರೇಶನ್‌ ಸಿಂದೂರದಲ್ಲಿ ನಮ್ಮ ಸಂಕಲ್ಪ ನಿರೂಪಿಸಿದ್ದೇವೆ. ನಾಗರಿಕ ರಕ್ಷಣೆಯ ಕೆಲಸದಿಂದ ಹಿಂದೆ ಸರಿಯಲಾರೆವು ಎಂದು ಮೋದಿ ಗುಡುಗಿದರು.

ರಾಷ್ಟ್ರ ರಕ್ಷಣೆಗಾಗಿ ನಾವು ವಸುಧೈವ ಕುಟುಂಬಕಂ ಜೊತೆಗೆ ಧರ್ಮೋ ರಕ್ಷತಿ ರಕ್ಷಿತಃ ಪಾಲನೆ ಮಾಡಲಿದ್ದೇವೆ. ಭಗವದ್ಗೀತೆ ಶಾಂತಿ ಸತ್ಯ ಹೇಳಿಕೊಡುವುದು. ಅದರ ಅನುಷ್ಠಾನದೊಂದಿಗೆ ಅತ್ಯಾಚಾರಿಗಳ ಅಂತ್ಯವೂ ಆಗಬೇಕಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನೀತಿಯ ಹಿಂದೆ ಶ್ರೀ ಕೃಷ್ಣನ ಶ್ಲೋಕಗಳಿವೆ. ಪಿಎಂ ಆವಾಜ್‌ ಯೋಜನೆ, ಆಯುಷ್ಮಾನ್‌, ಮಹಿಳಾ ಸಶಕ್ತಿಕರಣಕ್ಕಾಗಿ ರೂಪಿಸಿದ ಯೋಜನೆಗಲ್ಲೂ ಶ್ರೀಕೃಷ್ಣನ ಪ್ರೇರಣೆಯಿದೆ ಎಂದು ಮೋದಿ ಹೇಳಿದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಿ.ವೈ. ರಾಘವೇಂದ್ರ, ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸ್ವಾಗತಿಸಿದರು. ಮಠದ ಶಿಷ್ಯರು ಪ್ರಾರ್ಥಿಸಿದರು. ತನ್ಮಯ ಗೋಸ್ವಾಮಿ ಮತ್ತು ಗೋಪಾಲ ಆಚಾರ್ಯ ನಿರೂಪಿಸಿದರು.

ಪ್ರಧಾನಿ ಮಾತು ಆರಂಭಿಸುತ್ತಿದ್ದಂತೆ, ಮಕ್ಕಳು ಬಿಡಿಸಿದ ಚಿತ್ರಗಳನ್ನು ಮೊದಲು ಕೊಡಿ, ಎಸ್‌ಪಿಜಿ, ಪೊಲೀಸರು ಸಹಾಯ ಮಾಡುವಂತೆ ಕೇಳಿಕೊಂಡ ಪ್ರಧಾನಿ ಅವರು ಚಿತ್ರದ ಹಿಂದೆ ವಿಳಾಸ ಬರೆದರೆ ನಾನು ಧನ್ಯವಾದ ಕಳಿಹಿಸುತ್ತೇನೆ ಎಂದರು. ಮಕ್ಕಳು ಕಷ್ಟಪಡಬಾರದು, ಅವರಿಗೆ ತೊಂದರೆಯಾದರೆ ನನಗೆ ಬೇಸರವಾಗುತ್ತದೆ ಎಂದು ಮೋದಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಲಕ್ಷಕಂಠ ಗೀತಾ ಪಠಣ ವೇದಿಕೆ ಸುತ್ತ ಮುತ್ತ ಭಾರಿ ಭದ್ರತೆ ಒದಗಿಸಲಾಗಿತ್ತು. ಗುಪ್ತಚರ ದಳ, ಎಸ್‌ಪಿಜಿ, ಎಲ್ಲೆಂದರಲ್ಲಿ ಪೊಲೀಸ್ ಕಣ್ಗಾವಲು ಇತ್ತು. ಗಣ್ಯರು ಸೇರಿದಂತೆ ಎಲ್ಲರನ್ನೂ ತೀವ್ರ ತಪಾಸಣೆ ನಡೆಸಿ ವೇದಿಕೆಯತ್ತ ಸಾಗುವಂತೆ ಮಾಡಲಾಗಿತ್ತು.

ರೋಡ್‌ ಶೋ
ಬನ್ನಂಜೆಯಿಂದ ಮಠಕ್ಕೆ ಮೋದಿ ರೋಡ್ ಶೋ ಮೂಲಕ ಸಾಗಿದರು. ಈ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ಸೇರಿದ್ದ ಜನ “ಮೋದಿ, ಮೋದಿ” ಘೋಷಣೆ ಮೊಳಗಿದರು. ತಮ್ಮ ನೆಚ್ಚಿನ ಪ್ರಧಾನಿಯನ್ನು ಕಣ್ತುಂಬಿಕೊಂಡು ರಸ್ತೆಯುದ್ದಕ್ಕೂ ಹೂಮಳೆಗರೆದರು. ಕಪ್ಪು ಕಾರಿನಲ್ಲಿ ಬಿಳಿ ಕುರ್ತಾ ಕಪ್ಪು ಜಾಕೆಟ್ ಧರಿಸಿದ್ದ ಮೋದಿ ಬಿಗಿ ಭದ್ರತೆಯ ನಡುವೆ ಜನರತ್ತ ಕೈ ಬೀಸಿ ಸಂಭ್ರಮಿಸಿದರು. ಹತ್ತಿರದಿಂದ ಪ್ರಧಾನಿಯವರನ್ನು ಕಂಡ ಅಭಿಮಾನಿಗಳು ಪುಳಕಿತರಾದರು.


ಮೋದಿ ಅವರನ್ನು ಕೃಷ್ಣ ಮಠದವರು, ಜನಪ್ರತಿನಿಧಿಗಳು, ಭಕ್ತರು ಬರಮಾಡಿಕೊಂಡರು. ಕೃಷ್ಣ ಮಠದ ಎದುರಲ್ಲಿರುವ ಮಧ್ವ ಸರೋವರದಲ್ಲಿ ಪ್ರಧಾನಿ ಮೋದಿ ತೀರ್ಥ ಸಂಪ್ರೋಕ್ಷಣೆಗೈದರು. ಸ್ವರ್ಣಲೇಪಿತ ಕನಕನ ಕಿಂಡಿ ಅನಾವರಣಗೊಳಿಸಿದ ಮೋದಿ ಅವರು ಬಳಿಕ ಕನಕನ ಕಿಂಡಿಯಿಂದ ಉಡುಪಿ ಕೃಷ್ಣನ ದರುಶನ ಪಡೆದರು.

ಮೋದಿ ಆಗಮನ ಮುನ್ನವೇ ಮಠದ ಪರಿಸರದಲ್ಲಿ ವೈದಿಕರಿಂದ ಉಪನಿಷತ್ತು, ವೇದ, ಗೀತೆ ಪಠಣವಾಗುತ್ತಿತ್ತು. ಲಕ್ಷಕಂಠ ಗೀತಾ ಕಾರ್ಯಕ್ರಮ ಅಂಗವಾಗಿ ಭಗವದ್ಗೀತೆಯ ಶ್ಲೋಕಗಳನ್ನು ಸಾಮೂಹಿಕವಾಗಿ ಪಠಣ ಮಾಡಲಾಯಿತು. ಪ್ರಧಾನಿ ಮೋದಿ ಭಗವದ್ಗೀತೆಯ 15ನೇ ಅಧ್ಯಾಯ ಪಠಿಸಿದರು. ಪ್ರಧಾನಿ ಮೋದಿಯವರಿಗೆ ಕೃಷ್ಣದೇವರ ಪ್ರಸಾದ ನೀಡಲಾಯಿತು. ಮಾಧ್ವ ಸಂಪ್ರದಾಯದ ತಿಲಕವನ್ನು ಇಡಲಾಯಿತು. ಪುತ್ತಿಗೆ ಶ್ರೀಗಳು ಅಂಗಾರಕ ಅಕ್ಷತೆಯನ್ನು ಇರಿಸಿದರು. ಹೋಮದಿಂದ ತಯಾರಿಸಿರುವ ವಿಶೇಷ ತಿಲಕವನ್ನು ಸ್ವಾಮೀಜಿ ಮೋದಿಯ ಹಣೆಗಿಟ್ಟರು.





































error: Content is protected !!
Scroll to Top