ಭಕ್ತಿಯ ಹಣತೆ ಬೆಳಗಿದ ಭಕ್ತ ಕನಕದಾಸ

ಪರ್ಷಿಯಾ ದೇಶದ ಓರ್ವ ದಾಶರ್ನಿಕ ಕವಿ ಒಂದೆಡೆಯಲ್ಲಿ ಹೀಗೆ ಹೇಳಿದ್ದಾರೆ.
ಮೊದಲ ಹಾಗೂ ಕಡೆಯ ಪುಟಗಳನ್ನು ಕಳೆದುಕೊಂಡ
ಪುಸ್ತಕ ಈ ವಿಶ್ವ.
ಈ ಪುಸ್ತಕ ಹೇಗೆ ಪ್ರಾರಂಭವಾಯಿತು ಗೊತ್ತಿಲ್ಲ: ಹೇಗೆ ಮುಕ್ತಾಯ ಆಗಿದೆ ತಿಳಿದಿಲ್ಲ
ಮಾನವ ತನಗೆ ಬುದ್ಧಿಬಂದಾಗಿನಿಂದಲೂ ಕಳೆದುಹೋದ
ಆ ಪುಟಗಳನ್ನು ಹುಡುಕುತ್ತಿದ್ದಾನೆ. ಈ ಹುಡುಕುವಿಕೆ ಮತ್ತು ಅದರ ಪರಿಣಾಮವೇ ತತ್ವಜಿಜ್ಞಾಸೆ.
ಇಂಥದೇ ಅನ್ವೇಷಣೆಯಲ್ಲಿ ತೊಡಗಿದ ಸಂತರೆಂದರೆ ಕನಕದಾಸರು.

ಕನಕದಾಸರು ಕನ್ನಡ ನಾಡಿನ ಒಬ್ಬ ಪ್ರತಿಭಾನ್ವಿತ ಕವಿಯೂ, ಕಲಿಯೂ, ಸಂತರೂ ಆಗಿದ್ದರು. ಅವರ ಕಾಲ ಸುಮಾರು ಕ್ರಿ.ಶ 1550 ಎಂದು ಕವಿಚರಿತೆಕಾರರು ಅಭಿಪ್ರಾಯ ಪಡುತ್ತಾರೆ. ಮೋಹನ ತರಂಗಿಣಿ, ರಾಮಧಾನ್ಯ ಚರಿತ್ರೆ, ನಳಚರಿತ್ರೆ ಮತ್ತು ಹರಿಭಕ್ತಿಸಾರ ಕೃತಿಗಳನ್ನು ಬರೆದಿರುವ ವಿಶೇಷವಾಗಿ ಅದೆಷ್ಟೋ ಕೀರ್ತನೆಗಳನ್ನು ರಚಿಸಿದವರು ಕನಕದಾಸರು.
ಕನಕದಾಸರ ಬಾಳು ವಿಕಾಸಗೊಂಡಿರುವುದು ಮೂರು ಮಜಲುಗಳಲ್ಲಿ. ಅವರ ಜನ್ಮಸ್ಥಳ ಬಾಡ, ವಿಹಾರಸ್ಥಳ ವಿಜಯನಗರ ಮತ್ತು ವಾಸಸ್ಥಳ ಕಾಗಿನೆಲೆ. ಕನಕದಾಸರ ಬಾಲ್ಯ ಮತ್ತು ಯೌವನದ ದಿನಗಳು ವಿಜಯನಗರದ ಬಾಡದಲ್ಲಿ ನಡೆಯಿತೆಂದೂ ಶಿಕ್ಷಣ ಆನೆಗೊಂದಿಯಲ್ಲಿ ತಾತಾಚಾರ್ಯರ ಶ್ರೀಮಠದಲ್ಲಿ ನಡೆಯಿತ್ತೆಂದು ವಿದ್ವಾಂಸರು ತಿಳಿಸಿರುತ್ತಾರೆ. ಕನಕದಾಸರ ಬದುಕಿಗೆ ತಿರುವುಕೊಟ್ಟದು ವ್ಯಾಸರಾಯರ ಶ್ರೀಮಠ. ಅವರು ದಾಸದೀಕ್ಷೆಯನ್ನು ಪಡೆದಿರುವುದು ಅಲ್ಲಿಯೇ. ಕುಲದ ಕಹಿಯ ಉಣಿಸು ದೊರೆತದ್ಧು ಕೂಡ ಅಲ್ಲಿಯೇ ಎಂದು ತಿಳಿದುಬರುತ್ತದೆ‌. ಚಾತುವರ್ಣ್ಯ ಪದ್ಧತಿ ಪ್ರಬಲವಾಗಿಯೇ ಇದ್ದ ಕಾಲದಲ್ಲಿ ಉತ್ತಮ ಕುಲದವರೆನಿಸಿಕೊಂಡವರಿಂದ ಆದ ಹೀಯಾಳಿಕೆಯ ವಿಚಾರವಾಗಿ ತನ್ನ ನಿಲುವುಗಳನ್ನು ಸಾಹಿತ್ಯದಲ್ಲಿ ವಿಪುಲವಾಗಿಯೇ ಅಲ್ಲಲ್ಲಿ ಕಂಡುಬರುತ್ತದೆ.

ಭಾರತೀಯರ ಸಾಂಸ್ಕೃತಿಕ ಬದುಕಿಗೆ ಭಕ್ತಿಯೇ ಬೆನ್ನೆಲುಬು. ಲೌಕಿಕ ಜೀವನದಲ್ಲಿ ಭಕ್ತಿಯೆಂಬುದು ವ್ಯಕ್ತಿಯ ಪಾಲಿಗೆ ಒಂದು ಕ್ಷೇಮಭಾವನೆಯನ್ನು ಒದಗಿಸುವ ಕೃಪಾರಕ್ಷೆ. ಭಾರತೀಯ ಸಂತರೆಲ್ಲರೂ ಭಕ್ತಿಯ ಕೀಲಿಯನ್ನು ಹಿಡಿದು ಭಗವಂತನ ಎದೆಯ ಕದವನ್ನು ತೆರೆದು ಅವನೊಂದಿಗೆ ಹೃದಯ ಸಂವಾದ ನಡೆಸಿ ಸಫಲರಾದರು. ದಕ್ಷಿಣ ಭಾರತದಲ್ಲಿ ಸುಮಾರು ಹನ್ನೆರಡನೆಯ ಶತಮಾನದಲ್ಲಿ ಹಚ್ಚಲಾದ ಭಕ್ತಿಯ ಹಣತೆ ಕರ್ನಾಟಕದ ಹರಿದಾಸರ ಕೈಯಲ್ಲಿ ಉಜ್ವಲವಾಗಿ ಬೆಳಗುವ ದೀವಿಗೆಯಾಯಿತು. ಕನ್ನಡ ಸಾಹಿತ್ಯ ವಾಹಿನಿಗೆ ಭಕ್ತಿ ಸಾಹಿತ್ಯದ ಶಾಖೆಯೊಂದು ಕೀರ್ತನೆ ಸುಳಾದಿ ಉಗಾಭೋಗ ಮುಂತಾದ ಸುಂದರ ಸುಳಿಗಳೊಡನೆ ಬಂದು ಸೇರುವಂತೆ ಆಯಿತು.

ಕರ್ನಾಟಕದಲ್ಲಿ ಹರಿದಾಸ ಪರಂಪರೆಗೆ ಶ್ರೀಪಾದರಾಯರೇ ಆದ್ಯ ಪ್ರವರ್ತಕರು. ಅವರ ಶಿಷ್ಯ ಸನ್ಯಾಸಿ ವ್ಯಾಸರಾಯರು ಹರಿದಾಸ ಪರಂಪರೆಗೆ ಚಾಲನೆ ನೀಡಿದವರು‌. ವ್ಯಾಸರಾಯರ ಶಿಷ್ಯರಲ್ಲಿ ಕನಕದಾಸರು ಒಬ್ಬರು. ಕನಕದಾಸ ಪುರಂದರ ದಾಸರಿಬ್ಬರೂ ದಾಸ ಸಾಹಿತ್ಯದ ಅಶ್ವಿನಿ ದೇವತೆಗಳು ಎಂಬ ಮಾತು ಅರ್ಥಪೂರ್ಣ. ವೈಯಕ್ತಿಕ ಜೀವನದ ಹತಾಶೆ, ನೋವು, ಸಂತರನ್ನು ಜ್ಞಾನದ ಅನ್ವೇಷಕರನ್ನಾಗಿ ಮಾಡಿದ್ದು ಕುತೂಹಲಕರ ಸಂಗತಿ. ಗೌತಮ ಬುದ್ಧನಿಂದ ಹಿಡಿದು ಪುರಂದರದಾಸ ಕನಕದಾಸ ಮುಂತಾದವರೆಗೆ ಇಂಥ ಪರಂಪರೆಯೊಂದು ಚಾಚಿಕೊಂಡಿದೆ‌. ಕನಕದಾಸರ ಕೃತಿಗಳಲ್ಲಿನ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸಂವೇದನೆಯ ಸ್ವರೂಪ ಸ್ಪಷ್ಟಪಡುತ್ತದೆ. ದೇಹಬಲ ಮತ್ತು ದೈವಬಲಗಳ ಸೆಳೆತಗಳಲ್ಲಿ ಅಂತಿಮವಾಗಿ ಕನಕದಾಸರು ಆಯ್ಕೆ ಮಾಡಿದ್ದು ದೈವಬಲವನ್ನೆ.
ಕನಕದಾಸರು ವಿಶಾಲ ಮನೋಭಾವದ ಭಾಗವತರಾಗಿದ್ದರೂ ಅದ್ವೈತ ನಿಷ್ಠ ಭಾಗವತ ಸಂಪ್ರದಾಯಕ್ಕೆ ಸೇರಿದವರಲ್ಲ. ಮಧ್ವ ಸಿದ್ಧಾಂತದ ನೆಲೆಯಲ್ಲಿ ತಮ್ಮ ವಿಚಾರಗಳಿದ್ದರೂ ಆ ಸಿದ್ಧಾಂತಕ್ಕೂ ಕಟ್ಟಬಿದ್ದವರಲ್ಲ. ಕನಕದಾಸರಲ್ಲಿ ಭಕ್ತಿ, ದೈವಶ್ರದ್ಧೆ, ಭೋಗ, ನಿರಾಸಕ್ತಿ, ಸಂಸಾರ, ನಿಸ್ಸಾರತೆ, ಅರಿವು ಮುಂತಾದ ವ್ಯಕ್ತಿನಿಷ್ಠ ರಚನೆಗಳಂತೆ ಸಮಾಜನಿಷ್ಠ ರಚನೆಗಳು ಇತ್ತು. ಕನಕದಾಸರು ಭಗವಂತನ ಸರ್ವಾಂತರರ್ಯಾಮಿತ್ವ ಸರ್ವಶಕ್ತಗುಣದ ಬಗ್ಗೆ ಅಪಾರ ನಂಬಿಕೆ ಹೊಂದಿದ್ದವರಾಗಿದ್ದರು. ಕನಕದಾಸರ ಕೀರ್ತನೆಗಳಲ್ಲಿ ಕಂಡು ಬರುವಂತೆ ದೇವತಾಸ್ತುತಿ, ಭಗವಂತನ ಹಿರಿಮೆ, ಭಕ್ತ ರಕ್ಷಣೆಯಲ್ಲಿ ಅವನು ವಹಿಸಿದ ಪಾತ್ರ, ಕನಕದಾಸರ ಕೀರ್ತನೆಗಳ ವಸ್ತುವಾಗಿದೆ. “ದಾಸ ದಾಸರ ಮನೆಯ ದಾಸಿಯರ ಮಗ ನಾನು” ಎಂಬ ಸರ್ವಸಮರ್ಪಣಾ ಭಾವದ ಕೀರ್ತನೆಯಲ್ಲಿ “ಹರಿ ಮುಕುಂದನು ನೀನು ನರಜನ್ಮ ಹುಳ ನಾನು, ಪರಮಾತ್ಮನು ನೀನು ಪಾಮರನು ನಾನು” ಎಂಬ ಸ್ವಯಂ ನಿಂದನೆಯಲ್ಲಿನ ಅನುಸಂಧಾನ ಕಾಣಿಸುತ್ತದೆ. “ಭಜಿಸಿ ಬದುಕೆಲೋ ಮನುಜ” ನಿಲುವು ಕನಕದಾಸರದು. “ಆರು ಬಾಳಿದರೇನು? ಆರು ಬದುಕಿದರೆನು? ನಾರಾಯಣನ ಸ್ಮರಣೆ ನಮಗಿಲ್ಲದನಕ” ಎಂದು ಹಾಡುವುದರ ಮೂಲಕ ಭಗವಂತನ ಸ್ಮರಣೆ ಇಲ್ಲದ ಬದುಕು ವ್ಯರ್ಥ ಎಂದು ಸಾರಿದವರು ಕನಕದಾಸರು.

ಕನ್ನಡ ನಾಡಿನ ಸಂತ ಶ್ರೇಷ್ಠರಲ್ಲೊಬ್ಬರಾದ ಕನಕದಾಸರ ಕೃತಿಗಳಲ್ಲಿ ನುಡಿ ಸಂಪತ್ತು ಕನಕ ಸೂಕ್ತಿಯಾಗಿ ಪ್ರಸಿದ್ಧವಾಗಿದೆ. ಕನಕದಾಸರ ಕೃತಿಗಳಲ್ಲಿ ಕನಕದಾಸರ ಪ್ರತಿಭಾ ವಿಲಾಸ, ಅನುಭಾವ ಸಂಪತ್ತು, ನುಡಿಗಟ್ಟುಗಳ ರಹಸ್ಯ ಹಾಗೂ ಎಲ್ಲದರ ಹಿಂದಿರುವ ವಾಗ್ವೈಭವದ ಅರಿವು ವೈಶಿಷ್ಟ್ಯತೆಯನ್ನು ಗಮನಿಸಬಹುದು. ಈ ನುಡಿಗಳು ಕನಕನ ಹೃದಯದಿಂದ ಹೂ ಅರಳಿದಂತೆ ಬೆಳದಿಂಗಳು ಚೆಲ್ಲಿದಂತೆ ಮಳೆ ಸುರಿದಂತೆ ಹೊರಹೊಮ್ಮಿ ಬರುತ್ತವೆ. ಈ ನುಡಿಮುತ್ತುಗಳು ಮಾನವನ ಬದುಕಿಗೆ ಸಮಾಧಾನ ನೀಡುತ್ತವೆ.

ಗಣೇಶ್‌ ಜಾಲ್ಸೂರು








































































































error: Content is protected !!
Scroll to Top