50 ಸೇವಾ ಕಾರ್ಯದೊಂದಿಗೆ 50ರ ಹುಟ್ಟು ಆಚರಿಸಿದ ಸುನಿಲ್‌ ಕುಮಾರ್‌

ಕಾರ್ಕಳ : ಶಾಸಕ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್‌ ಕುಮಾರ್‌ ಅವರು 50ರ ಹುಟ್ಟುಹಬ್ಬವನ್ನು ಸಾಮಾಜಿಕ ಕಾರ್ಯಗಳ ಮೂಲಕ ಸರಳವಾಗಿ ಆಚರಿಸಿ ಮಾದರಿಯಾಗಿದ್ದಾರೆ. ಹುಟ್ಟುಹಬ್ಬವೆಂದು ಕೇಕ್ ಕತ್ತರಿಸಲಿಲ್ಲ. ಬದಲಿಗೆ 50ಕ್ಕೂ ಅಧಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಕಾರ್ಕಳದ ಪುಲ್ಕೇರಿ ನಿವಾಸಿಯಾಗಿರುವ ಸುಂದರಿಯವರಿಗೆ ನೂತನ ಮನೆ ನಿರ್ಮಾಣ ಮಾಡಿ ಹಸ್ತಾಂತರಿಸಿದರು. ಹೆಬ್ರಿಯ ಬಡಕುಟುಂಬ ಚುಕ್ರಿ, ಗಣೇಶ್‌ ಸಾಣೂರು ಸೇರಿದಂತೆ ಅಶಕ್ತ ಕುಟುಂಬಗಳ ಮನೆ ನಿರ್ಮಾಣಕ್ಕೆ ಧನಸಹಾಯ ಮಾಡಿದರು. ನೊಂದ ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ನೆರವಾದರು. ಬಡ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯ, ಶ್ರವಣ ಸಾಧನಾ ವಿತರಣೆ, ಸ್ವಚ್ಚತಾ ಕಾರ್ಯ ನಡೆಸುವ ಸಂಘಗಳಿಗೆ ಸ್ವಚ್ಛತಾ ಸಾಮಗ್ರಿ ವಿತರಣೆ, ಕಟ್ಟಿಂಗ್ ಮೆಷಿನ್, ಟೈಲರಿಂಗ್ ಮೆಷಿನ್, ಸೇವಾ ಮನೋಭಾವನೆಯ ಸಮಾಜ ಸೇವಾ ಸಂಸ್ಥೆಗಳಿಗೆ ಸಹಾಯಧನ ಹಸ್ತಾಂತರ ಸೇರಿದಂತೆ 50ಕ್ಕೂ ಅಧಿಕ ಸೇವಾ ಕಾರ್ಯಗಳಿಗೆ ಚಾಲನೆ ನೀಡಿದರು.

ವಿಕಾಸ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಸುನಿಲ್ ಕುಮಾರ್, ನನಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಅಶಕ್ತರನ್ನು ಗುರುತಿಸಿ, 50ಕ್ಕೂ ಹೆಚ್ಚು ಜನರಿಗೆ ನಮ್ಮ ಕೈಯಿಂದಾದ ಸಹಾಯ ಮಾಡಿದ್ದೇವೆ. ಸಾಮಾಜಿಕ ಕೆಲಸಗಳು ಹಾಗೂ ಸೇವಾ ಕಾರ್ಯಗಳು, ಇನ್ನಿತರ ಸಹಾಯವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದೇವೆ ಎಂದರು. ಹಳೆ ಮನೆಗಳನ್ನು ಸಂಪೂರ್ಣವಾಗಿ ರಿಪೇರಿ ಮಾಡುವ ಹೊಣೆಗಾರಿಕೆ ಅನ್ನು ವಿಕಾಸ ಸೇವಾ ಸಂಸ್ಥೆಯು ವಹಿಸಿಕೊಂಡಿದೆ. ತರುಣಾ ಭಾರತ ಸಂಘ, ಸ್ವಚ್ಛ ಬ್ರಿಗೇಡ್ ಕಾರ್ಕಳ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಅಂತಹ ಸಂಘಗಳಿಗೆ ಎಲ್ಲರ ಬೆಂಬಲವಿರಲಿ ಎಂದರು.

ಬಿಜೆಪಿ ಮುಖಂಡರಾದ ರವೀಂದ್ರ ಮಡಿವಾಳ ಮಾತನಾಡಿ, ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ನಮಗೆ ಸುನಿಲ್‌ ಕುಮಾರ್‌ ಹುಟ್ಟುಹಬ್ಬ ಮತ್ತೊಂದು ಖುಷಿ, ಸಂಭ್ರಮ. ಕಾರ್ಕಳದ ಅಭಿವೃದ್ಧಿಗಾಗಿ ಪಣ ತೊಟ್ಟು ಕಾರ್ಯನಿರ್ವಹಿಸಿದವರು ಸುನಿಲ್‌ ಕುಮಾರ್‌ ಎಂದರು. ಉದ್ಯಮಿ ಬೋಳ ಶ್ರೀನಿವಾಸ್ ಕಾಮತ್ , ಅತ್ರಿ ಪ್ರಸನ್ನ ಶೆಟ್ಟಿ, ಜಯರಾಮ್ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

















































error: Content is protected !!
Scroll to Top