ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ವಿಘ್ನ ಕೊಡುತ್ತಿರುವವರಿಗೆ ವಿಘ್ನವಾಗುವ ಕಾಲ ಸನಿಹವಿದೆ – ಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ

ಕಾರ್ಕಳ : ಕಾರ್ಕಳ : ಧರ್ಮಸ್ಥಳ ಕ್ಷೇತ್ರವು 800 ವರ್ಷಗಳ ಭವ್ಯವಾದ ಇತಿಹಾಸವನ್ನು ಹೊಂದಿದೆ. ಚತುರ್‌ದಾನಗಳ ಶ್ರೇಷ್ಠ ಪರಂಪರೆಯುಳ್ಳ ಈ ಪುಣ್ಯ ಕ್ಷೇತ್ರಕ್ಕೆ ಇಲ್ಲಿಯವರೆಗೆ ಯಾರೂ ಕೂಡ ಅಪಮಾನ ಮಾಡಿಲ್ಲ. ಆದರೆ, ಈಗ ಇಲ್ಲಿ ದುಷ್ಟರ ಅಟ್ಟಹಾಸದಿಂದ ಧರ್ಮ ಲೋಪವಾಗುತ್ತಿದೆ. ವಿರೇಂದ್ರ ಹೆಗ್ಗಡೆಯವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಹೆಗ್ಗಡೆಯವರನ್ನು ಕ್ಷೇತ್ರದ ಶಕ್ತಿಗಳೇ ಕಾಪಾಡಲಿದೆ. ವಿಘ್ನ ಕೊಡುತ್ತಿರುವವರಿಗೆ ವಿಘ್ನವಾಗುವ ಕಾಲ ಸನಿಹವಿದೆ ಎಂದು ಕಾರ್ಕಳ ಜೈನಮಠದ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಹೇಳಿದರು.

ಅವರು ಆ. 15ರಂದು ಕಾರ್ಕಳ ಜೈನ್‌ ಜೈನ್‌ ಮಿಲನ್‌ ವತಿಯಿಂದ ಬಾಹುಬಲಿ ಪ್ರವಚನ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಬಗ್ಗೆ ನಡೆದ ಖಂಡನಾ ಸಭೆಯಲ್ಲಿ ಮಾತನಾಡಿದರು.

ಭಾರತೀಯ ಜೈನ್‌ ಮಿಲನ್ ಮಂಗಳೂರು ವಿಭಾಗ ಅಧ್ಯಕ್ಷ‌ ಸುದರ್ಶನ್ ಬಂಟ್ವಾಳ ಮಾತನಾಡಿ, ಪೂಜ್ಯ ಖಾವಂದರು ಜೈನ ಸಮಾಜದ ಬಹುದೊಡ್ಡ ಶಕ್ತಿ. ಅವರು ಜೈನ ಸಮುದಾಯ ಮಠಗಳು, ತೀರ್ಥ ಕ್ಷೇತ್ರಗಳು ಮಾತ್ರವಲ್ಲದೆ ಸಮಾಜದಲ್ಲಿನ ಇತರೆ ಧಾರ್ಮಿಕ‌ ಕ್ಷೇತ್ರಗಳ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅನನ್ಯ. ಗ್ರಾಮಾಭಿವೃದ್ಧಿ ಯೋಜನೆ‌ ಮೂಲಕ ಶಿಕ್ಷಣ, ಆರೋಗ್ಯ, ಕೃಷಿ ಹೀಗೆ ವಿವಿಧ ಕ್ಷೇತ್ರದಲ್ಲಿ ಜನತೆಯ ಪ್ರಗತಿಯಲ್ಲಿ ಅವರ ಪಾತ್ರ ಮಹತ್ತರ. ನಮ್ಮ ಸಮಾಜದ ಇಂತಹ ವ್ಯಕ್ತಿಯ ವಿರುದ್ಧ ಆಗುತ್ತಿರುವ ಕೆಟ್ಟ ಕೆಲಸಗಳ‌ನ್ನು ನಾವು ಖಂಡಿಸಬೇಕು ಎಂದು ಹೇಳಿದರು.

ಸತ್ಯ ಮತ್ತು ಅನ್ಯಾಯದ ನಡುವಿನ ಈ ಧರ್ಮ ಯುದ್ಧದಲ್ಲಿ ನಾವು ಸತ್ಯದ ಪರವಾಗಿ ನಿಲ್ಲೋಣ. ಪೂಜ್ಯ ಖಾವಂದರ ಪರವಾಗಿ ಜೈನ್ ಮಿಲನ್ ಯಾವಾಗಲೂ ಇದ್ದೇ ಇರುತ್ತದೆ. ಈ‌‌ ನಿಟ್ಟಿನಲ್ಲಿ ಜೈನ್ ಮಿಲನ್‌ನಿಂದ ಕೈಗೊಂಡ ನಿರ್ಣಯದಂತೆ ಶ್ರೀ ಕ್ಷೇತ್ರ‌ ಧರ್ಮಸ್ಥಳದ ಧರ್ಮಾಧಿಕಾರಿಗಳ ವಿರುದ್ಧ ನಡೆಯುತ್ತಿರುವ ನಿಂದನೆ, ಅಪಪ್ರಚಾರದ ವಿರುದ್ಧ ಸೂಕ್ತ‌ ಕ್ರಮಕೈಗೊಳ್ಳುವಂತೆ ಮಂಗಳೂರು ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿ, ರಾಜ್ಯಪಾಲರು, ಪ್ರಧಾನ‌ಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದು ಸುದರ್ಶನ್‌ ತಿಳಿಸಿದರು.

ಕಾರ್ಕಳ ಜೈನ್ ಮಿಲನ್ ವಿಭಾಗ ವೀಕ್ಷಕ ಅಂಡಾರು ಮಹಾವೀರ ಹೆಗ್ಡೆ ಮಾತನಾಡಿ, ದುಷ್ಟ ಕೂಟವೊಂದು ವೀರೇಂದ್ರ ಹೆಗ್ಗಡೆಯವರ ಕುಟುಂಬ ಮತ್ತು ದೇವಸ್ಥಾನದ ಮೇಲೆ ಸವಾರಿ ಮಾಡುತ್ತಿದೆ. ನಾವು ಈ ದುಷ್ಟಶಕ್ತಿಗಳ ಕೆಟ್ಟ ಕಾರ್ಯಗಳನ್ನು ಖಂಡಿಸುವ ಕೆಲಸ‌ ಮಾಡಬೇಕು. ಸತ್ಯವನ್ನು ಗೆಲ್ಲಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಸಮಾಜಕ್ಕೆ ಬಲವಾಗಿ ನಿಂತ ಹೆಗ್ಗಡೆಯವರ ಪರವಾಗಿ ನಾವಿದ್ದೇವೆ ಎಂಬ ನಿರ್ಣಯ ಕೈಗೊಳ್ಳೋಣ ಎಂದರು.

ಸಭೆಯಲ್ಲಿ ಕೈಗೊಂಡ‌ ಖಂಡನಾ‌ ನಿರ್ಣಯವನ್ನು ಕಾರ್ಕಳ ಜೈನ್ ಮಿಲನ್ ಅಧ್ಯಕ್ಷ ಅಶೋಕ್ ಜೈನ್ ವಾಚಿಸಿದರು. ಈ ನಿರ್ಣಯ ಪತ್ರವನ್ನು ವಿಭಾಗದ ವೀಕ್ಷಕರಿಗೆ ಹಸ್ತಾಂತರಿಸಲಾಯಿತು. ಆ. 19ರಂದು ಮಂಗಳೂರು ವಿಭಾಗದ ನೇತೃತ್ವದಲ್ಲಿ ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿ, ರಾಜ್ಯಪಾಲರು ಮತ್ತು ಪ್ರಧಾನಮಂತ್ರಿಯವರಿಗೆ ನೀಡಲಾಗುವುದು ಎಂದು ನಿರ್ಧರಿಸಲಾಯಿತು.

ಕಾರ್ಕಳ ವಲಯ ನಿರ್ದೇಶಕ‌ ಯುವರಾಜ ಬಲಿಪ ವೇದಿಕೆಯಲ್ಲಿದ್ದರು. ಆಗಮ್ ಜೈನ್ ಪ್ರಾರ್ಥಿಸಿದರು. ಜೈನ ಧರ್ಮ ಜೀರ್ಣೋದ್ಧಾರ ಸಂಘದ ಜೊತೆ ಕಾರ್ಯದರ್ಶಿ ಮೋಹನ್ ಪಡಿವಾಳ್ ಸ್ವಾಗತಿಸಿದರು. ಯೋಗರಾಜ್‌ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ‌ ವೀರೇಂದ್ರ ಜೈನ್ ವಂದಿಸಿದರು.

















































error: Content is protected !!
Scroll to Top