ಅರಮನೆಯಿಂದ ಸೆರೆಮನೆಗೆ ದರ್ಶನ
ನವದೆಹಲಿ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 7 ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು ಹೈಕೋರ್ಟ್ ಆದೇಶವನ್ನು ರದ್ದುಪಡಿಸಿದೆ.
ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ದೋಷವಿದೆ. ತಾಂತ್ರಿಕ ಕಾರಣಗಳಿಂದ ಜಾಮೀನು ನೀಡಿದ್ದಾರೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಆರೋಪಿ ಎಷ್ಟೇ ಪ್ರಭಾವಿ ಇದ್ದರೂ ಅವರು ಕಾನೂನಿಗಿಂತ ದೊಡ್ಡವರಲ್ಲ. ಕಾನೂನು ಆಡಳಿತ ಎತ್ತಿ ಹಿಡಿಯಲಾಗಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಆರೋಪಿಗಳಿಗೆ 5 ಸ್ಟಾರ್ ಟ್ರೀಟ್ ಮೆಂಟ್ ನೀಡಲಾಗಿದೆ. ಜೈಲು ಸೂಪರಿಂಟೆಂಡ್ನನ್ನು ಸಸ್ಪೆಂಡ್ ಮಾಡಬೇಕಿತ್ತು ಎಂದು ಸುಪ್ರೀಂ ಕೋರ್ಟ್ ಖಾರವಾಗಿ ಪ್ರತಿಕ್ರಿಯಿಸಿದೆ.
ತಕ್ಷಣವೇ ದರ್ಶನ್ ಹಾಗೂ ಇತರ ಆರೋಪಿಗಳನ್ನು ಜೈಲಿಗೆ ಕಳುಹಿಸಬೇಕೆಂದು ಆದೇಶ ತಿಳಿಸಿದೆ.

ಕಳೆದ ವರ್ಷ ಜೂ. 11ರಂದು ದರ್ಶನ್ ರೇಣುಕಾಸ್ವಾಮಿ ಹತ್ಯೆ ಕೇಸಿನಲ್ಲಿ ಮೈಸೂರಿನಲ್ಲಿ ಬಂಧನಕ್ಕೀಡಾಗಿದ್ದರು. ಅನಂತರದ ಬೆಳವಣಿಗೆಯಲ್ಲಿ ನಾಲ್ಕು ತಿಂಗಳಿಗೂ ಅಧಿಕ ಕಾಲ ದರ್ಶನ್ ಜೈಲಿನಲ್ಲಿದ್ದರು. ಆ ಬಳಿಕ ಬೆನ್ನು ನೋವಿನ ಕಾರಣ ನೀಡಿ ಜೈಲಿನಿಂದ ಹೊರಬಂದರು. ಡಿಸೆಂಬರ್ನಲ್ಲಿ ಅವರಿಗೆ ಸಂಪೂರ್ಣ ಜಾಮೀನು ದೊರೆಯಿತು. ಇದನ್ನು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಿತ್ತು.
ದರ್ಶನ್ ಮತ್ತು ಸಹ-ಆರೋಪಿಗಳಿಗೆ ಕಳೆದ ವರ್ಷ ಡಿ. 13ರಂದು ಹೈಕೋರ್ಟ್ ನೀಡಿದ ಜಾಮೀನು ಆದೇಶದ ವಿರುದ್ಧ ಕರ್ನಾಟಕ ಸರಕಾರ ಸಲ್ಲಿಸಿದ ಮೇಲ್ಮನವಿಯ ಮೇರೆಗೆ ತೀರ್ಪು ನೀಡಲಾಗಿದೆ. ಪವಿತ್ರಾ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ 33 ವರ್ಷದ ರೇಣುಕಾಸ್ವಾಮಿ ಎಂಬ ದರ್ಶನ್ ಅಭಿಮಾನಿಯನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಆರೋಪ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ 7 ಮಂದಿ ಆರೋಪಿಗಳ ಮೇಲಿತ್ತು.






























































