ಮೂಡುಬಿದಿರೆ : ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ಸಭಾಂಗಣದಲ್ಲಿ ಮಾದಕ ದ್ರವ್ಯ ವಿರೋಧಿ ಘಟಕದ ವತಿಯಿಂದ ಮಾದಕ ವಸ್ತು ವ್ಯಸನ ವಿರುದ್ಧ ಜಾಗೃತಿ ಕಾರ್ಯಕ್ರಮ ನಡೆಯಿತು.
ಮೂಡುಬಿದಿರೆ ಪೊಲೀಸ್ ಠಾಣೆಯ ಸಬ್ ಇನ್ಸೆಕ್ಟರ್ ಕೆ. ಸಿ. ಪ್ರತಿಭಾ ಕಾರ್ಯಕ್ರಮ ಉದ್ಘಾಟಿಸಿದರು. ಬಳಿ ಮಾತನಾಡಿದ ಅವರು ಮಾದಕ ವಸ್ತುಗಳ ವ್ಯಸನಕ್ಕೆ ಒಮ್ಮೆ ಒಳಗಾದರೆ ಅದು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ನಾಶಮಾಡುತ್ತದೆ. ಹದಿಹರೆಯದಲ್ಲಿ ಇಂತಹ ದುಶ್ಚಟಗಳಿಗೆ ಬಲಿಯಾಗದೆ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕುವಂತೆ ನಿಮ್ಮನ್ನು ನೀವು ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಮಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರಿನ ರೋಶ್ನಿ ನಿಲಯದ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪಿ. ರಮ್ಯಾ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಬಲಿಯಾದಲ್ಲಿ ವಿದ್ಯಾಭ್ಯಾಸದ ಕಡೆಗೆ ತಮ್ಮನ್ನು ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಉತ್ತಮ ಭವಿಷ್ಯ ಹಾಗೂ ಸ್ವಾಸ್ಥ್ಯ ಬದುಕನ್ನು ಕಟ್ಟಿಕೊಳ್ಳುವಂತಹ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕೆಂದರು.
ಕಾಲೇಜಿನ ಟ್ರಸ್ಟಿ ಹಾಗೂ ಪ್ರಾಂಶುಪಾಲ ಡಾ. ಎಸ್. ಎನ್. ವೆಂಕಟೇಶ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವೈಬ್ರೆಂಟ್ ಎಜುಕೇಶನ್ ಮತ್ತು ಚಾರಿಟಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ಮೆಹಬೂಬ್ ಬಾಷಾ, ಚಂದ್ರಶೇಖರ್ ರಾಜೇ ಅರಸ್, ಯೋಗೇಶ್ ಬೆಡೆಕರ್, ಸುಭಾಶ್ ಝಾ, ಶರತ್ ಗೋರೆ ಮತ್ತು ಕಾಲೇಜಿನ ಆಡಳಿತಾಧಿಕಾರಿ ಅರುಣ್ ಡಿಸಿಲ್ವಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕನಿಷ್ಕ ಪ್ರಕಾಶ್ ಮತ್ತು ಶ್ರೇಯಸ್ ಶಾನುಭೋಗ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಮಾದಕ ದ್ರವ್ಯ ವಿರೋಧಿ ಘಟಕದ ಸಂಯೋಜಕ ಅರುಣ್ ಕುಮಾರ್ ಎಚ್. ಸ್ವಾಗತಿಸಿ, ಕನ್ನಡ ವಿಭಾಗದ ಉಪನ್ಯಾಸಕ ಅಜಿತ್ ಕುಮಾರ್ ವಂದಿಸಿದರು.
























