ಯಾವುದೇ ಒಂದು ಅಪರಾಧಿಕ ಘಟನೆ ಸಂಬಂಧ ಪೋಲಿಸರು ಕಾನೂನಿನ ನಿಯಮಾನುಸಾರವಾಗಿ ತನಿಖೆ ಮಾಡಿ ನೈಜ ಅರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯಾಲಯದ ಮುಖಾಂತರ ತಪ್ಪಿತಸ್ತರಿಗೆ ಸರಿಯಾದ ಶಿಕ್ಷೆಯನ್ನು ಕೊಡಿಸಲು ಮತ್ತು ನೊಂದವರಿಗೆ ಸೂಕ್ತ ಪರಿಹಾರ ಮತ್ತು ನ್ಯಾಯವನ್ನು ಕೊಡಿಸುವ ನಿಟ್ಟಿನಲ್ಲಿ ಅಪರಾಧಿಕ ಘಟನೆಯ ಕುರಿತಂತೆ ಪೋಲಿಸರಿಗೆ ನೀಡುವ ದೂರು ಅಂದರೆ ಪೊಲೀಸ್ ಕಂಪ್ಲೇಂಟ್ ಬಹಳ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಕಾರಣ ಪೊಲೀಸರು ತಾವು ಪಡೆಯುವ ದೂರನ್ನು ಆಧಾರನ್ನಾಗಿಸಿಕೊಂಡು ಪ್ರಥಮ ವರ್ತಮಾನ ವರದಿಯನ್ನು (ಎಫ್.ಐ.ಆರ್) ತಯಾರಿಸಿ ಅದರಲ್ಲಿ ದೂರುದಾರರ ಸಹಿ ಪಡೆದು ಆ ಕೂಡಲೇ ಸಂಬಂಧಪಟ್ಟ ಸರಹದ್ದಿನ ನ್ಯಾಯಾಲಯಕ್ಕೆ ಮತ್ತು ತಮ್ಮ ಇಲಾಖೆಯ ಜಿಲ್ಲಾ ವರಿಷ್ಠಾಧಿಕಾರಿರವರಿಗೆ ಪ್ರಥಮ ವರ್ತಮಾನ ವರದಿಯನ್ನು (ಎಫ್.ಐ.ಆರ್) ಕಳುಹಿಸಿದ ನಂತರವೇ ಘಟನೆಗೆ ಸಂಬಂಧಪಟ್ಟ ತನಿಖೆ ಪ್ರಾರಂಭಿಸಿ ತನಿಖೆ ಪೂರ್ಣಗೊಂಡ ನಂತರ ಅರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ತಮ್ಮ ಅಂತಿಮ ವರದಿಯನ್ನು ಸಲ್ಲಿಸಬೇಕಾಗುತ್ತದೆ.
ಯಾವುದೇ ಅಪರಾಧಿಕ ಘಟನೆಯ ಕುರಿತು ಪ್ರತ್ಯಕ್ಷ ಸಾಕ್ಷಿಯಾಗಲಿ ಅಥವಾ ಒಂದು ಅಪರಾಧಿಕ ಘಟನೆ ನಡೆದ ಬಗೆಗಿನ ಮಾಹಿತಿ ಪಡೆದ ಯಾರೇ ವ್ಯಕ್ತಿಯಾಗಲಿ ಪೊಲೀಸ್ ಕಂಪ್ಲೇಂಟ್ ದಾಖಲಿಸಬಹುದಾಗಿದೆ. ಕರ್ತವ್ಯ ನಿರತ ಠಾಣಾಧಿಕಾರಿಯು ಪೊಲೀಸ್ ಕಂಪ್ಲೇಂಟ್‌ನ್ನು ಪಡೆಯುವಾಗ ದೂರನ್ನು ಸ್ವೀಕರಿಸಿದ ಸರಿಯಾದ ದಿನಾಂಕ, ಸಮಯ ಹಾಗೂ ಘಟನೆ ನಡೆದ ಸ್ಧಳ, ಸಮಯ ಮತ್ತು ದಿನಾಂಕ, ಘಟನೆಯಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾದ ವ್ಯಕ್ತಿಗಳ ವಿವರ, ಅಪರಾಧಿಕ ಕೃತ್ಯದ ವಿವರ, ಅಪರಾಧಿಕ ಕೃತ್ಯವನ್ನು ನೋಡಿರುವ ಪರಿಚಿತ ಪ್ರತ್ಯಕ್ಷ ಸಾಕ್ಷಿಗಳ ವಿವರ ಇತ್ಯಾದಿಗಳನ್ನು ಪಡೆದು ಅವುಗಳನ್ನು ಠಾಣೆಯ ದೈನಿಕ ದಿನಚರಿಯಲ್ಲಿ ದಾಖಲಿಸಿಕೊಳ್ಳಬೇಕಾಗುತ್ತದೆ. ಮಾಹಿತಿದಾರನು ಪ್ರತ್ಯಕ್ಷ ಸಾಕ್ಷಿಯಾಗಿರುವ ಸಂದರ್ಭದಲ್ಲಿ ಅಪರಾಧಿಕ ಕೃತ್ಯಕ್ಕೆ ಬಳಸಲಾದ ಆಯುಧಗಳ ಬಗೆಗಿನ ವಿವರಗಳನ್ನು ಪೊಲೀಸ್ ಕಂಪ್ಲೇಂಟ್‌ನಲ್ಲಿ ನಮೂದಿಸಬೇಕಾಗುತ್ತದೆ. ಅಂತೆಯೇ ಪೊಲೀಸ್ ಕಂಪ್ಲೇಂಟ್ ದಾಖಲಿಸುವ ಸಂದರ್ಭದಲ್ಲಿ ಕೃತ್ಯದಲ್ಲಿ ಭಾಗಿಯಾಗಿರುವ ಅಪರಿಚಿತ ವ್ಯಕ್ತಿಯ ಬಾಹ್ಯ ಲಕ್ಷಣಗಳನ್ನು ಪೋಲಿಸ್ ಕಂಪ್ಲೇಂಟ್‌ನಲ್ಲಿ ನಮೂದಿಸಬೇಕಾಗುತ್ತದೆ ಮತ್ತು ಅಂತಹ ವ್ಯಕ್ತಿಯನ್ನು ತನಗೆ ತೋರಿಸಿದರೆ ತಾನು ಆ ವ್ಯಕ್ತಿಯ ಗುರುತು ಹಿಡಿಯುವೆನೆಂದು ಮಾಹಿತಿದಾರನು ಪೋಲಿಸ್ ಕಂಪ್ಲೇಂಟ್‌ನಲ್ಲಿ ನಮೂದಿಸಬೇಕಾಗಿರುತ್ತದೆ. ಅಪರಾಧಿಕ ಕೃತ್ಯವನ್ನು ರಾತ್ರಿಯ ವೇಳೆ ಎಸಗಲಾಗಿದ್ದರೆ ತಾನು ಅಪರಾಧಿಕ ಕೃತ್ಯ ನಡೆಯುವುದನ್ನು ಮತ್ತು ದೋಷಿಗಳನ್ನು ಯಾವ ಮೂಲದಿಂದ ಬರುತ್ತಿದ್ದ ಬೆಳಕಿನಿಂದ ನೋಡಿದೆ ಎಂಬುದನ್ನು ಮಾಹಿತಿದಾರನು ಪೋಲಿಸ್ ಕಂಪ್ಲೇಂಟ್‌ನಲ್ಲಿ ನಮೂದಿಸಬೇಕಾಗಿರುತ್ತದೆ. ಮೃತ್ಯುವಿಗೆ ಕಾರಣವಾದ ಗಾಯಗಳಾಗುವಂತೆ ಮೃತನ ಮೇಲೆ ಹಲ್ಲೆ ನಡೆಸುವ ಮೊದಲಾಗಲಿ ಅಥವಾ ಹಲ್ಲೆ ನಡೆಸಿದ ನಂತರವಾಗಲಿ ಅಪರಾಧಿಕ ಕೃತ್ಯದಲ್ಲಿ ಭಾಗಿಯಾದ ವ್ಯಕ್ತಿಗಳು ಮೃತನನ್ನು ನೆಲದ ಮೇಲೆ ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿದ್ದರೆ ಆ ನೆಲವು ಹೇಗಿತ್ತು ಅಂದರೆ ಅದು ಒರಟು ಮೇಲ್ಮೈ ಹೊಂದಿತ್ತೇ, ಮಣ್ಣಿನಿಂದ ಕೂಡಿದ್ದು ಎಲ್ಲೆಡೆ ಸಣ್ಣ ಸಣ್ಣ ಕಲ್ಲುಗಳು ಹರಡಲ್ಪಟ್ಟಿತ್ತೇ ಇತ್ಯಾದಿ ವಿವರಗಳನ್ನು ಪೊಲೀಸ್ ಕಂಪ್ಲೇಂಟ್‌ನಲ್ಲಿ ನಮೂದಿಸಬೇಕಾಗುತ್ತದೆ.
ವ್ಯಕ್ತಿಯೊಬ್ಬನು ಬಂದೂಕಿನ ಗುಂಡೇಟಿನಿಂದ ಗಾಯಗೊಂಡಿದ್ದರೆ ಅಥವಾ ವ್ಯಕ್ತಿಯೊಬ್ಬನು ಗುಂಡೇಟಿನಿಂದ ಮರಣ ಹೊಂದಿದ್ದರೆ ದೋಷಿಯ ಮತ್ತು ಹಲ್ಲೆಗೊಳಗಾದವನ ನಡುವಿನ ದೂರವನ್ನು ಪೊಲೀಸ್ ಕಂಪ್ಲೇಂಟ್‌ನಲ್ಲಿ ನಮೂದಿಸಬೇಕಾಗುತ್ತದೆ. ದೋಷಿಯು ಅಪರಾಧಿಕ ಕೃತ್ಯವನ್ನು ಎಸಗುವಾಗ ತನ್ನ ಮುಖವನ್ನು ಮುಚ್ಚಿಕೊಂಡಿದ್ದರೆ ಆತ ಮುಖ ಮುಚ್ಚಲು ಬಳಸಿದ್ದ ಬಟ್ಟೆ ಅಥವಾ ವಸ್ತುವಿನ ವಿವರವನ್ನು ತನ್ನ ಪೊಲೀಸ್ ಕಂಪ್ಲೇಂಟ್‌ನಲ್ಲಿ ನಮೂದಿಸಬೇಕಾಗುತ್ತದೆ. ಈ ರೀತಿಯಾದ ಕೂಲಂಕುಶವಾದ ವಿವರಗಳನ್ನು ಪೊಲೀಸ್ ಕಂಪ್ಲೇಂಟ್‌ನಲ್ಲಿ ನಮೂದಿಸುವುದರಿಂದ ಪೋಲಿಸ್ ತನಿಖಾಧಿಕಾರಿಯು ಕ್ರಿಮಿನಲ್ ಕೃತ್ಯದ ಬಗ್ಗೆ ತಾನು ನಡೆಸುವ ತನಿಖೆಯನ್ನು ಸಮರ್ಪಕವಾಗಿ ನಡೆಸಿ ನೈಜ ಆರೋಪಿಗಳ ವಿರುದ್ದ ಪರಿಪೂರ್ಣವಾದ ಮತ್ತು ಕಾನೂನು ಪ್ರಕಾರ ನ್ಯಾಯಾಲಯವು ಪುರಸ್ಕರಿಸಬಹುದಾದ ಸಾಕ್ಷಾಧಾರಗಳನ್ನು ಕಲೆ ಹಾಕಿ, ನಡೆದ ಅಪರಾಧಿಕ ಕೃತ್ಯವನ್ನು ರುಜುವಾತು ಪಡಿಸಿ ನೈಜ ಅರೋಪಿಗಳಿಗೆ ನ್ಯಾಯಾಲಯವು ಸರಿಯಾದ ಶಿಕ್ಷೆ ಮತ್ತು ನೊಂದವರಿಗೆ ಸರಿಯಾದ ನ್ಯಾಯ ಮತ್ತು ಪರಿಹಾರವನ್ನು ಕೊಡಿಸುವಲ್ಲಿ ಯಶಸ್ಸನ್ನು ಸಾಧಿಸಬಹುದಾಗಿದೆ.























