ರಾಮಚಂದ್ರ ಬರೆಪ್ಪಾಡಿ, ವಿಲಾಸ್ ಕುಮಾರ್ ನಿಟ್ಟೆ, ದೀಕ್ಷಿತ್ ಜೈನ್ ಅವರಿಗೆ ಸನ್ಮಾನ
ಕಾರ್ಕಳ : ವ್ಯಕ್ತಿತ್ವ ವಿಕಸನ, ಸಂಘಟನೆಯೊಂದಿಗೆ, ಜೇಸಿಐ ಕಾರ್ಕಳ ರೂರಲ್ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಉತ್ತಮ ವಿಚಾರ ಎಂದು ಜೇಸಿಐ ವಲಯ ಉಪಾಧ್ಯಕ್ಷ ಪ್ರಶಾಂತ್ ಕುಮಾರ್ ಶ್ಲಾಘಿಸಿದರು.
ಅವರು ಜು. 22ರಂದು ಕಾರ್ಕಳದ ಹೊಟೇಲ್ ಸ್ವಾಗತ್‌ನ ಸಭಾಂಗಣದಲ್ಲಿ ನಡೆದ ಜೇಸಿಐ ಕಾರ್ಕಳ ರೂರಲ್ ನ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಯಕತ್ವ ಬೆಳೆಸುವಲ್ಲಿ ಜೇಸಿಐ ಪಾತ್ರ ಹಿರಿದಾದುದು. ಅರುಣ್ ಪೂಜಾರಿ ಮಾಂಜ ಅವರ ನೇತೃತ್ವದಲ್ಲಿ ಕಾರ್ಕಳ ಜೇಸಿಐ ರೂರಲ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘದ ಪದಾಧಿಕಾರಿಗಳು, ಸದಸ್ಯರು, ಪೂರ್ವ ಅಧ್ಯಕ್ಷರ ಸಹಕಾರದಿಂದ ಇದೆಲ್ಲ ಸಾಧ್ಯವಾಗಿದೆ ಎಂದರು.
ಜೇಸಿಐ ರಾಷ್ಟ್ರೀಯ ತರಬೇತುದಾರೆ ಡಾ. ಹರಿಣಾಕ್ಷಿ ಕರ್ಕೇರ ಮಾತನಾಡಿ, ಜೇಸಿಐಯಿಂದ ಏನು ಅನುಕೂಲ ಎನ್ನುವುದು ಅದರಲ್ಲಿ ಸದಸ್ಯರಾದವರಿಗೆ ಮಾತ್ರ ತಿಳಿದಿದೆ. ಯುವ ಸಮುದಾಯ ಜೇಸಿಐನಲ್ಲಿ ತೊಡಗಿಸಿಕೊಂಡು ಸಮಾಜದ ಮುನ್ನೆಲೆಗೆ ಬರುವಂತಾಗಬೇಕೆಂದರು.

ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್
ಮಾಧ್ಯಮ ಕ್ಷೇತ್ರದ ಕಾರ್ಯಕ್ಕಾಗಿ ನ್ಯೂಸ್ ಕಾರ್ಕಳದ ವ್ಯವಸ್ಥಾಪಕ ನಿರ್ದೇಶಕ, ವಿಶ್ವವಾಣಿ ದಿನಪತ್ರಿಕೆಯ ಉಡುಪಿ ಜಿಲ್ಲಾ ವರದಿಗಾರ ರಾಮಚಂದ್ರ ಬರೆಪ್ಪಾಡಿ ಹಾಗೂ ವಿಜಯ ಕರ್ನಾಟಕ ದಿನಪತ್ರಿಕೆಯ ಕಾರ್ಕಳ ತಾಲೂಕು ವರದಿಗಾರ ವಿಲಾಸ್ ಕುಮಾರ್ ನಿಟ್ಟೆ ಅವರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿ ಮತ್ತು ಉದ್ಯಮ ಕ್ಷೇತ್ರದ ಸಾಧನೆಗಾಗಿ ದೀಕ್ಷಿತ್ ಜೈನ್ ಅವರಿಗೆ ಉತ್ತಮ ವ್ಯವಹಾರ ಸಾಧಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.



ಕಾರ್ಕಳ ರೂರಲ್ ಘಟಕದ ಅಧ್ಯಕ್ಷ ಅರುಣ್ ಪೂಜಾರಿ ಮಾಂಜ, ವಲಯ ಅಧಿಕಾರಿ ಮಂಜುನಾಥ್ ಕೋಟ್ಯಾನ್, ನಿಕಟ ಪೂರ್ವ ಅಧ್ಯಕ್ಷರಾದ ಸಂತೋಷ್ ಬಂಗೇರ, ಸಂತೋಷ್ ಪೂಜಾರಿ ಮಾಳ, ಕಾರ್ಯದರ್ಶಿ ಚಿನ್ಮಯಿ ಶೆಣೈ, ಸ್ಥಾಪಕರಾದ ಸತೀಶ್ ಪೂಜಾರಿ, ಮಾರ್ಗದರ್ಶಕರಾದ ಪ್ರಕಾಶ್ ಕಾರ್ಕಳ, ಲೇಡಿ ಜೇಸಿ ಸಂಯೋಜಕರಾದ ಸಂಗೀತಾ ನಾಯ್ಕ, ಜೂನಿಯರ್ ಜೆಸಿ ಅಧ್ಯಕ್ಷ ದಿಯಾ ಭಂಡಾರಿ, ಪೂರ್ವ ಅಧ್ಯಕ್ಷರಾದ ಶೋಭಾ ಭಾಸ್ಕರ್, ವೀಣಾ ರಾಜೇಶ್, ಮೋಹನ್ ನಕ್ರೆ, ಕೃಷ್ಣ ಪವಾರ್ ಹಾಗೂ ಘಟಕದ ಸದಸ್ಯರು ಉಪಸ್ಥಿತರಿದ್ದರು.



















