ಕಾರ್ಕಳ : ಮೇ ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಡಿಕೆ ತೋಟಗಳಲ್ಲಿ ಕೊಳೆ ರೋಗ ಕಾಣಿಸಿಕೊಳ್ಳುತ್ತಿದೆ. ಮೋಡ ಕವಿದ ವಾತಾವರಣ, ತೋಟದಲ್ಲಿ ನೀರು ನಿಲ್ಲುವಿಕೆ, ಮಳೆ ಹಾಗೂ ಬಿಸಿಲು ಮಿಶ್ರಿತ ವಾತಾವರಣ, ಮಣ್ಣಿನಲ್ಲಿ ಹೆಚ್ಚಿದ ತೇವಾಂಶ ರೋಗ ಉಲ್ಬಣವಾಗಲು ಕಾರಣವಾಗಿದೆ. ಅಡಿಕೆ ಬೆಳೆ ಸಂರಕ್ಷಣೆ ಉದ್ದೇಶದಿಂದ ತೋಟಗಾರಿಕೆ ಇಲಾಖೆ ರೈತರಿಗೆ ಕೊಳೆ ರೋಗ ನಿಯಂತ್ರಣಕ್ಕಾಗಿ ಕೆಲವು ಕ್ರಮಗಳನ್ನು ಸೂಚಿಸಿದೆ.
- ತೋಟದಲ್ಲಿ ಬಿದ್ದ ಕೊಳೆ ರೋಗ ಭಾದಿತ ಹಾಗೂ ಹಸಿರು ಕಾಯಿಗಳನ್ನು ಹಾಗೂ ಪೂರ್ಣ ಕೊಳೆ ಬಂದು ಒಣಗಿದ ಸಿಂಗಾರಗಳನ್ನು ಸಂಗ್ರಹಿಸಿ ಹೊರ ಸಾಗಿಸಿ ಸುಡಬೇಕು.
- ತೋಟದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಬಸಿಗಾಲುವೆಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ಅಡಿಕೆ ಮರದ ಬುಡಭಾಗವು ಸಾಮಾನ್ಯ ಮಟ್ಟಕ್ಕಿಂತ ತಗ್ಗು ಇದ್ದಲ್ಲಿ, ಅಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.
- ತೋಟದ ಸುತ್ತಲೂ ಬೆಳೆದ ಕಾಡು ಮರಗಳ ರೆಂಬೆಗಳನ್ನು ಕತ್ತರಿಸಿ ತೋಟದಲ್ಲಿ ಸರಿಯಾಗಿ ಗಾಳಿ ಬೆಳಕು ಆಡುವಂತೆ ಕ್ರಮ ವಹಿಸುವುದು.
- ಶಿಫಾರಸ್ಸು ಮಾಡಿದ ಪೋಷಕಾಂಶಗಳನ್ನು ನಿಯಮಿತವಾಗಿ ಒದಗಿಸುವುದು.
- ಕೊಳೆ ರೋಗಭಾದಿತ ತೋಟಗಳಲ್ಲಿ ತುರ್ತು ನಿಯಂತ್ರಣಕ್ಕಾಗಿ ಮೆಟಲಾಕ್ಸೆಲ್ 35% ಶಿಲೀಂದ್ರ ನಾಶಕವನ್ನು 1.50 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಸಿಂಪರಣೆ ನಂತರ ಕನಿಷ್ಠ 2 ಗಂಟೆಗಳ ಮಳೆ ರಹಿತ ವಾತಾವರಣ ಅವಶ್ಯ. ಒಂದು ವಾರದ ತರುವಾಯ ಶೇ. 1ರ ಬೋರ್ಡೋ ದ್ರಾವಣ ಸಿಂಪರಣೆ ಕೈಗೊಳ್ಳಬೇಕು. ಕೊಳೆ ಭಾದಿತ ತೋಟಗಳಲ್ಲಿ ಈ ಮೇಲಿನ ಸಿಂಪರಣೆಗಳನ್ನು ಕೈಗೊಳ್ಳುವಾಗ ಅಡಿಕೆ ಗೊನೆಗಳಿಗೆ ಮಾತ್ರ ಸಿಂಪಡಿಸದೇ ಸುಳಿ, ಸೋಗೆ ಹಾಗೂ ಹೊಡೆ ಭಾಗಗಳಿಗೂ ಸಿಂಪಡಿಸುವುದರಿಂದ ಮುಂದೆ ಬರುವ ಶಿರಕೊಳೆ ರೋಗ ಹಾಗೂ ಸುಳಿ ಕೊಳೆ ರೋಗಗಳನ್ನು ನಿಯಂತ್ರಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶ್ರೀನಿವಾಸ ಬಿ. ವಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.



















