ಸಾಲ ಕೊಡುವುದಾಗಿ 200 ಕೋಟಿ ರೂ. ಗೂ ಅಧಿಕ ವಂಚನೆ

ಮಂಗಳೂರು : ಸಾಲ ಕೊಡುವುದಾಗಿ ಅನೇಕ ವರ್ಷಗಳಿಂದ 200 ಕೋಟಿ ರೂ. ಗೂ ಅಧಿಕ ವಂಚನೆ ಮಾಡಿರುವ ವಂಚಕ ರೋಹನ್ ಸಲ್ಡಾನಾ ಎಂಬಾತನನ್ನ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಸಿಕ್ಕಿಬಿದ್ದಿದ್ದೇಗೆ ?
ಆಂಧ್ರ ಪ್ರದೇಶ ಮೂಲದ ಸಿಲ್ಕ್ ಸ್ಯಾರಿ ತಯಾರಿಕ ಕಂಪನಿ ಮಾಲಕ ಸಾಲಕ್ಕಾಗಿ 2023ರಲ್ಲಿ ಬೆಂಗಳೂರಿನಲ್ಲಿ ಫೈನಾನ್ಸ್ ಕನ್ಸಲ್‌ಟೆನ್ಸಿ ನಡೆಸಿಕೊಂಡಿರುವ ವಿಮಲೇಶ್ ಎಂಬಾತನ ಮೊರೆ ಹೋಗಿದ್ದ. ಆಗ ವಿಮಲೇಶ್ ರೋಹನ್‌ನನ್ನ ಪರಿಚಯಿಸಿದ್ದ. ಸಾಲ ಕೊಡಿಸೋದಕ್ಕೆ ಒಂದು ಸ್ಟ್ಯಾಂಪ್ ಪೇಪರ್‌ಗೆಂದು ರೋಹನ್ ಉದ್ಯಮಿ ಬಳಿ 40 ಲಕ್ಷ ರೂ, ಹಣ ಪಡೆದಿದ್ದ. ಇದಾದ 15 ದಿನಗಳ ಬಳಿಕ ರೋಹನ್ ಎಸ್ಕೇಪ್ ಆಗಿದ್ದ. ಮೋಸ ಹೋಗಿರುವ ಅರಿವಾದ ಉದ್ಯಮಿ, ಕಳೆದ ವರ್ಷ ಜುಲೈ 16ರಂದು ಚಿತ್ರದುರ್ಗ ನಗರ ಠಾಣೆಗೆ ದೂರು ಕೊಟ್ಟಿದ್ದರು. ಆಗ ಈ ಇಬ್ಬರ ನಡುವೆ ಇದ್ದ ವಿಮಲೇಶ್ ಎಂಬಾತನನ್ನ ಪೊಲೀಸರು ಬಂಧಿಸಿದ್ದರು. ಆಗ ರೋಹನ್‌ ಬಂಡವಾಳ ಬಯಲಾಗಿದೆ.

ಈಗಾಗಲೆ 3 ತಿಂಗಳಲ್ಲೇ 45 ಕೋಟಿ ರೂ. ವ್ಯವಹಾರ ಮಾಡಿದ ರೋಹನ್, ಹಲವು ವರ್ಷಗಳಿಂದ 200 ಕೋಟಿ ರೂ.ಗೂ ಅಧಿಕ ವಂಚನೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಮನೆಯಲ್ಲಿಯೇ ಅಡಗುತಾಣ ನಿರ್ಮಿಸಿದ್ದ ರೋಹನ್ ಅಲ್ಲೇ ಅಡಗಿಕುಳಿತಿದ್ದ, ದಾಳಿ ನಡೆಸಿದ ಪೊಲೀಸರು ಬಾಗಿಲು ಒಡೆದು ಒಳಗೆ ಹೋಗಿ ಆತನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಐಷಾರಾಮಿ ಬಾರ್ ಕೌಂಟರ್
ಮಂಗಳೂರಿನ ‘ಮದ್ಯದ ದೊರೆ’ ಎಂದೇ ಪ್ರಸಿದ್ಧನಾದ ರೋಹನ್ ಸಲ್ಡಾನಾನ ಬಾರ್ ಕೌಂಟರ್‌ನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಿದೇಶಿ ಮದ್ಯಗಳು ಇದ್ದು, ಮೂರು ಲಕ್ಷದ ಸ್ಕಾಚ್‌ನ್ನು ಶೋ ಕೇಸ್ ನಲ್ಲಿ ಇಟ್ಟಿದ್ದ. ಶ್ಯಾಂಪೇನ್, ಸ್ಕಾಚ್, ವೈನ್, ಬಿಯರ್ ಸೇರಿದಂತೆ ತರಹೇವಾರಿ ಮದ್ಯಗಳು ಮೂರು ಫ್ರಿಡ್ಜ್ ತುಂಬಿತ್ತು ಎಂದು ತಿಳಿದು ಬಂದಿದೆ.

ರೋಹನ್ ಸಿರಿವಂತರನ್ನೇ ಟಾರ್ಗೆಟ್‌ ಮಾಡಿದ್ದ. ಭೂ ವ್ಯವಹಾರ, ಸಾಲ ನೀಡುವ ನೆಪದಲ್ಲಿ ನಂಬಿಸಿ ಮಂಗಳೂರಿನ ಜಪ್ಪಿನಮೊಗರುವಿನ‌ ಐಷಾರಾಮಿ ಬಂಗಲೆಗೆ ಕರೆದು ವ್ಯವಹಾರ ಕುದುರಿಸುತ್ತಿದ್ದ. ಈತ ಕೈಸ್ತ ಸಮುದಾಯದವನಾದರೂ ತನ್ನ ಮನೆಯಲ್ಲಿ ಉತ್ತರ ಪ್ರದೇಶದ ಹಿಂದೂ ಗುರೂಜಿ ನೀಮ್ ಕರೋಲಿ ಬಾಬಾ ಫೋಟೋವನ್ನು ಹಾಕಿದ್ದಾನೆ. ಆ ಮೂಲಕ ಉತ್ತರ ಭಾರತದ ಬಹುಕೋಟಿ ಉದ್ಯಮಿಗಳನ್ನು ವಂಚಿಸಲು ನಾನು ಬಾಬಾ ಭಕ್ತ ಅಂತ ನಂಬಿಸುತ್ತಿದ್ದ ಎಂಬ ಶಂಕೆ ವ್ಯಕ್ತವಾಗಿದೆ.







































error: Content is protected !!
Scroll to Top