ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ – ಕಂದಾಯ ಸಚಿವರಿಗೆ ಮನವಿ
ಕಾರ್ಕಳ : ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಜು. 18ರಂದು ಏಕಕಾಲಕ್ಕೆ ದಲಿತರ ಭೂಮಿ – ವಸತಿ ಹಕ್ಕಿಗಾಗಿ ಮತ್ತು ಇತರೆ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಹಕ್ಕೊತ್ತಾಯ ನಡೆಯಿತು. ದಸಂಸ ಕಾರ್ಕಳ ತಾಲೂಕು ಶಾಖೆ ನೇತೃತ್ವದಲ್ಲಿ ಕಾರ್ಕಳ ತಾಲೂಕು ಕಚೇರಿ ಮುಂಭಾಗವೂ ಪ್ರತಿಭಟನೆ ನಡೆದು ಬಳಿಕ ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಉಡುಪಿ ಜಿಲ್ಲೆಯಲ್ಲಿ ಡಿ.ಸಿ. ಮನ್ನಾ ಭೂಮಿಗಳನ್ನು ಅರ್ಹ ಭೂ ರಹಿತ ಪರಿಶಿಷ್ಟ ಜಾತಿ/ಪಂಗಡವರಿಗೆ ಮರು ಹಂಚಿಕೆ ಮಾಡಬೇಕು. ಜಿಲ್ಲೆಯ ಅಕ್ರಮ ಸಕ್ರಮ ಸಮಿತಿಗಳು ಕರ್ನಾಟಕ ಭೂ ಮಂಜೂರಾತಿ ಅಧಿನಿಯಮದಂತೆ ಲಭ್ಯ ಭೂಮಿಯ ಶೇಕಡಾ 50%ರಷ್ಟನ್ನು ದಲಿತ ಸಮುದಾಯಗಳಿಗೆ ಮಂಜೂರು ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರ್, ಜಿಲ್ಲಾ ಸಂಘಟನಾ ಸಂಚಾಲಕ ಅಣ್ಣಪ್ಪ ನಕ್ರೆ, ರಾಜ್ಯ ಸಂಘಟನಾ ಸಂಚಾಲಕ ಹೂವಪ್ಪ ಮಾಸ್ತರ್, ಕಾರ್ಕಳ ತಾಲೂಕು ಪ್ರಧಾನ ಸಂಚಾಲಕ ನ್ಯಾಯವಾದಿ ರಾಘವ ಕುಕ್ಕುಜೆ, ಉಪ ಪ್ರಧಾನ ಸಂಚಾಲಕ ರಮೇಶ್ ಬಿ. ಪೆರ್ವಾಜೆ, ಸಂಘಟನಾ ಸಂಚಾಲಕರಾದ ಸುಂದರ ಹವಾಲ್ದಾರ್‌ಬೆಟ್ಟು, ಕೆ.ಕೆ. ಸಾಲಿಯಾನ್, ರಮೇಶ್ ಜರಿಗುಡ್ಡೆ, ಖಜಾಂಚಿ ಸುಂದರ್ ನಲ್ಲೂರು, ಉಪ ಖಜಾಂಚಿ ಸೋಮನಾಥ್ ನಾಯ್ಕ್, ಪುರಸಭಾ ಸದಸ್ಯರಾದ ಪ್ರತಿಮಾ ರಾಣೆ, ಸೋಮನಾಥ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.




















