ಅಹಮದಾಬಾದ್‌ ವಿಮಾನ ದುರಂತ – ಪ್ರಾಥಮಿಕ ವರದಿಯಲ್ಲಿ ಕಾರಣ ಪತ್ತೆ

ಅಹಮದಾಬಾದ್‌ : ಅಹಮದಾಬಾದ್‌ ಏರ್ ಇಂಡಿಯಾ ವಿಮಾನ ದುರಂತದ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ನಡೆಸಿದ ಪ್ರಾಥಮಿಕ ವರದಿ ಬಹಿರಂಗಗೊಂಡಿದ್ದು, 15 ಪುಟಗಳ ಈ ವರದಿಯಲ್ಲಿ ಹಲವು ಅಂಶಗಳು ಬೆಳಕಿಗೆ ಬಂದಿವೆ.

ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಜೂನ್ 12 ರಂದು ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ಹೊರಟ ಸ್ವಲ್ಪ ಸಮಯದ ನಂತರ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಆವರಣಕ್ಕೆ ಅಪ್ಪಳಿಸಿತ್ತು. ವಿಮಾನದಲ್ಲಿದ್ದ 241 ಪ್ರಯಾಣಿಕರು ಸೇರಿದಂತೆ 275 ಜನರು ಸಾವನ್ನಪ್ಪಿದ್ದರು.

ವಿಮಾನ ದುರುಂತದ ಬಗ್ಗೆ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಗಮನ ಸೆಳೆದಿರುವ ಎಎಐಬಿ ವಿಮಾನದಲ್ಲಿ ಇಂಧನ ಸ್ವಿಚ್ ಆಫ್ ಆಗಿರುವುದರಿಂದ ಎಂಜಿನ್ ಗಳಿಗೆ ಇಂಧನ ಪೂರೈಕೆಯಾಗದೆ ಅವಘಡ ಸಂಭವಿಸಿದೆ. ಯಾವುದೇ ಕೆಟ್ಟ ಹವಾಮಾನ, ಹಕ್ಕಿಗಳ ಢಿಕ್ಕಿ ದುರಂತಕ್ಕೆ ಕಾರಣವಲ್ಲ ಎಂದು ಸ್ಪಷಪಡಿಸಿದೆ.
ಟೇಕಾಫ್ ನಂತರ ಎಂಜಿನ್‌ಗಳ ಇಂಧನ ಸ್ವಿಚ್‌ಗಳು ಇದ್ದಕ್ಕಿದ್ದಂತೆ ರನ್‌ (RUN) ನಿಂದ ಕಟ್‌ಆಫ್‌ (CUTOFF) ಗೆ ಬದಲಾದವು. ಈ ಘಟನೆ ಕೇವಲ 1 ಸೆಕೆಂಡ್ ಅಂತರದಲ್ಲಿ ಸಂಭವಿಸಿದೆ. ಈ ಸಮಯದಲ್ಲಿ, ಎಂಜಿನ್‌ಗಳಿಗೆ ಇಂಧನ ಬರುವುದು ನಿಂತುಹೋಗಿದೆ.

ಕಾಕ್‌ಪಿಟ್‌ನಲ್ಲಿ ಪೈಲಟ್‌ಗಳ ನಡುವೆ ನಡೆದ ಸಂಭಾಷಣೆಯ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಪ್ರಕಾರ, ಒಬ್ಬ ಪೈಲಟ್ ಮತ್ತೊಬ್ಬ ಪೈಲಟ್ ಬಳಿ, ನೀವು ಎಂಜಿನ್ ಅನ್ನು ಏಕೆ ಆಫ್ ಮಾಡಿದ್ದೀರಿ ಎಂದು ಕೇಳಿದ್ದಾರೆ. ಆಗ ಮತ್ತೊಬ್ಬ ಪೈಟಲ್, ನಾನು ಏನನ್ನೂ ಮಾಡಲಿಲ್ಲ ಎಂದು ಹೇಳಿದ್ದಾರೆ. ಇಬ್ಬರು ಪೈಲಟ್‌ಗಳ ನಡುವಿನ ಈ ಸಂಭಾಷಣೆ ಗಮನಿಸಿದರೆ, ಯಾರೂ ಉದ್ದೇಶಪೂರ್ವಕವಾಗಿ ಇಂಧನ ಸ್ವಿಚ್ ಕಡಿತಗೊಳಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ತುರ್ತು ಪರಿಸ್ಥಿತಿ ಅರಿವಿಗೆ ಬರುತ್ತಿದ್ದಂತೆಯೇ ವಿಮಾನದ ಸ್ವಯಂಚಾಲಿತ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಪ್ರಯತ್ನಿಸಲಾಯಿತು. ಆದಾಗ್ಯೂ, ರಾಮ್ ಏರ್ ಟರ್ಬೈನ್ (RAT) ಅಂದರೆ, ತುರ್ತು ಫ್ಯಾನ್ ಮತ್ತು ಎಪಿಯುನಂತಹ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಿದ ನಂತರವೂ, ವಿಮಾನವನ್ನು ಅಪಘಾತದಿಂದ ರಕ್ಷಿಸಲು ಪೈಲೆಟ್‌​ಗಳಿಗೆ ಸಾಧ್ಯವಾಗಲಿಲ್ಲ. ವಿಮಾನದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆ ಇದ್ದಾಗ ಮಾತ್ರ ರಾಮ್ ಏರ್ ಟರ್ಬೈನ್ ಸಕ್ರಿಯವಾಗುತ್ತದೆ. ಇದರರ್ಥ, ಎಂಜಿನ್ ಸ್ಥಗಿತಗೊಂಡಿದ್ದು ವಿಮಾನದ ವಿದ್ಯುತ್ ಪೂರೈಕೆ ಮೇಲೂ ಪರಿಣಾಮ ಬೀರಿತ್ತು.

ರಾಮ್ ಏರ್ ಟರ್ಬೈನ್
ಎರಡೂ ಎಂಜಿನ್‌ಗಳು ಅಥವಾ ವಿದ್ಯುತ್ ಸರಬರಾಜು ನಿಂತಾಗ ಅಥವಾ ಹೈಡ್ರಾಲಿಕ್ ವೈಫಲ್ಯ ಉಂಟಾದಾಗ ರಾಮ್ ಏರ್ ಟರ್ಬೈನ್ ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತದೆ. ಇದು ವಿಮಾನವು ಎತ್ತರವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಇದು ವಿದ್ಯುತ್ ಉತ್ಪಾದಿಸಲು ಗಾಳಿಯ ವೇಗವನ್ನು ಬಳಸುತ್ತದೆ.









































































































error: Content is protected !!
Scroll to Top