ಟಿಕ್ ಟಿಕ್ ಟಿಕ್ ಟಿಕ್ ಓಡುತಿದೆ ಕಾಲ

ನಿಮ್ಮ ಖಾತೆಗೆ ಒಂದು ದಿನಕ್ಕೆ ಯಾರೋ 86,400 ರೂಪಾಯಿಗಳನ್ನು ಹಾಕಿದ್ದಾರೆ ಎಂದು ಭಾವಿಸಿ. ಆ ದುಡ್ಡನ್ನು ಅದೇ ದಿನ ಖರ್ಚು ಮಾಡಬೇಕು ಎನ್ನುವುದು ಕಂಡೀಶನ್ ಇದ್ದರೆ ನೀವೇನು ಮಾಡ್ತೀರಿ? ಒಮ್ಮೆ ಯೋಚನೆ ಮಾಡಿ.
ಸಮಯವೂ ಹಾಗೆಯೇ. ನಿಮ್ಮ ಖಾತೆಗೆ ದೇವರು ಅಮೂಲ್ಯವಾದ 86,400 ಸೆಕೆಂಡುಗಳನ್ನು ಹಾಕಿ ಬಿಟ್ಟಿದ್ದಾರೆ. ಅವುಗಳನ್ನು ನಾಳೆಗೆ ಉಳಿಸಿಕೊಳ್ಳುವ ಹಾಗಿಲ್ಲ. ಅದೇ ದಿನಕ್ಕೆ ಖರ್ಚು ಮಾಡಬೇಕು ಅಂದಾಗ ನೀವೇನು ಮಾಡುತ್ತೀರಿ? ಯೋಚಿಸಿ.

ಸಮಯ ಇಲ್ಲ ಸರ್ – ಇದು ಎಲ್ಲರ ಗೋಳು!
ನೀವು ಯಾರನ್ನೂ ಬೇಕಾದರೂ ಮಾತಾಡಿಸಿ. ಅವರು ಹೇಳುವ ಕಾಮನ್ ಸಂಭಾಷಣೆ ಎಂದರೆ, ಸಮಯ ಇಲ್ಲಾ ಸರ್! ಬ್ಯೂಸಿ ಸರ್ ಬ್ಯೂಸಿ! ಆದರೆ ನಾವು ಸಮಯವನ್ನು ಸರಿಯಾಗಿ ಪ್ಲಾನ್ ಮಾಡಿಕೊಂಡರೆ ಈ ಸಮಸ್ಯೆ ಬರುವುದೇ ಇಲ್ಲ. ನಾವು ಪ್ರತೀ ದಿನ ಮಾಡುವ ಚಟುವಟಿಕೆಗಳನ್ನು ಸರಿಯಾಗಿ ಪ್ಲಾನ್ ಮಾಡಿಕೊಂಡು ಪ್ರೋಗ್ರಾಮಿಂಗ್ ಮಾಡಿಕೊಂಡರೆ ಯಾವುದೂ ಕಷ್ಟವೇ ಇಲ್ಲ.

ಸಮಯ ತುಂಬಾ ಪ್ರಾಮುಖ್ಯ ಎಂದು ಎಲ್ಲರಿಗೂ ಗೊತ್ತಿದೆ. ಒಬ್ಬ ಬಿಸಿನೆಸ್ ಲೀಡರಿಗೆ TIME IS MONEY. ಒಬ್ಬ ವಿದ್ಯಾರ್ಥಿಗೆ TIME IS MARKS. ಒಬ್ಬ ಉದ್ಯಮಶೀಲ ವ್ಯಕ್ತಿಗೆ TIME IS AN INVESTMENT……ಹೀಗೆ ನಮ್ಮ ಆದ್ಯತೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ದೇಶದ ಪ್ರಧಾನಿಯಿಂದ ಒಬ್ಬ ಸಣ್ಣ ಮಟ್ಟದ ಜವಾನನವರೆಗೆ ಪ್ರತಿಯೊಬ್ಬರಿಗೂ ದೊರೆಯುವುದು 24 ಘಂಟೆ ಮಾತ್ರ. ಆದರೆ ಸಮಯವನ್ನು ವಿಸ್ತರಿಸುವುದು (EXPAND) ಹೇಗೆ ಎಂಬುದನ್ನು ನಾನು ನಿಮಗೆ ಕಲಿಸಿಕೊಡುತ್ತೇನೆ.

ಸಮಯವನ್ನು ವಿಸ್ತರಿಸುವುದು ಹೀಗೆ!
ಒಂದು ಗಾಜಿನ ಬೀಕರ್ ತೆಗೆದುಕೊಂಡು ಅದರಲ್ಲಿ ಫುಲ್ ಆಗುವಷ್ಟು ನೀರನ್ನು ತುಂಬಿ. ನೀವೀಗ ಅದರಲ್ಲಿ ತಲೆಯಿಲ್ಲದ ಸಣ್ಣ ಗುಂಡುಸೂಜಿಗಳನ್ನು ಹಾಕುತ್ತಾ ಹೋಗಿ. ಆದರೆ ನೀರು ಚೆಲ್ಲಬಾರದು ಎಂಬುದು ನಮ್ಮ ಕಂಡೀಶನ್! ನೀವು ಎಷ್ಟು ಗುಂಡು ಸೂಜಿಗಳನ್ನು ಆ ಬೀಕರಿನಲ್ಲಿ ಹಾಕಬಹುದು? ಇದು ಪ್ರಶ್ನೆ.

ಇದಕ್ಕೆ ಉತ್ತರ ಬೀಕರ್ ತುಂಬಾ ಗುಂಡುಸೂಜಿಗಳನ್ನು ಹಾಕಬಹುದು. ನೀರು ಹೊರಗೆ ಚೆಲ್ಲುವುದೇ ಇಲ್ಲ! ಏಕೆಂದರೆ ಪ್ರತೀಯೊಂದು ಗುಂಡು ಸೂಜಿಯೂ ತನಗೆ ಬೇಕಾದ ಜಾಗವನ್ನು ತಾನೇ ಕ್ರಿಯೇಟ್ ಮಾಡುತ್ತದೆ!

ಸಮಯವೂ ಹೀಗೆಯೇ! ನಾವು ಚಟುವಟಿಕೆಗಳನ್ನು ಹೆಚ್ಚು ಮಾಡುತ್ತಾ ಹೋದಂತೆ ಸಮಯವೂ ವಿಸ್ತಾರಗೊಳ್ಳುವುದು ನಮ್ಮ ಗಮನಕ್ಕೆ ಬರುತ್ತದೆ! ನಾವು ಪ್ರತೀದಿನ ನಮ್ಮ ಆಸಕ್ತಿಯ ಕ್ಷೇತ್ರಗಳಿಗೆ ಸಮಯವನ್ನು ಕೊಡುತ್ತಾ ಹೋದಂತೆ ನಮಗೆ PRODUCTIVE TIME ಹೆಚ್ಚು ಹೆಚ್ಚು ದೊರೆಯುತ್ತದೆ. ಒಂದು ಸಮೀಕ್ಷೆಯ ಪ್ರಕಾರ ಭಾರತೀಯರು ಪ್ರತೀದಿನ ದುಡಿಸಿಕೊಳ್ಳುವ PRODCTIVE TIME ತುಂಬಾ ಕಡಿಮೆ, ಅಂದರೆ ಮೂರು ಘಂಟೆ 20 ನಿಮಿಷ ಮಾತ್ರ ಅಂದರೆ ನಿಮಗೆ, ನಮಗೆ ನಂಬುವುದು ಕಷ್ಟ ಆದೀತು!

ಅನುತ್ಪಾದಕ ಚಟುವಟಿಕೆಗಳು
ಉಳಿದ ಹೊತ್ತನ್ನು ಹರಟೆ ಹೊಡಿಯುವುದರಲ್ಲಿ, ಮೊಬೈಲ್ ನೋಡುವುದರಲ್ಲಿ, ಯಾರ್ಯಾರ ಬಗ್ಗೆ ಕಾಮೆಂಟ್ಸ್ ಮಾಡುವುದರಲ್ಲಿ, ಗಾಸಿಪ್ ಮಾಡುವುದರಲ್ಲಿ, ಹೋಟೆಲುಗಳಲ್ಲಿ ಪಾರ್ಟಿ ಮಾಡುವುದರಲ್ಲಿ, ಲಾಂಗ್ ಡ್ರೈವ್ ಹೋಗುವುದರಲ್ಲಿ ಮತ್ತು ನಿದ್ದೆಗಳಲ್ಲಿ ಕಳೆಯುತ್ತೇವೆ! ನಿದ್ರೆ ನಮಗೆ ಅನಿವಾರ್ಯ ಆದ ಕಾರಣ ಅದನ್ನು ನಾನು ಅನುತ್ಪಾದಕ ಎಂದು ಹೇಳಲಾರೆ. ಆದರೆ ನಿದ್ದೆ ಜಾಸ್ತಿಯಾದಾಗ, ಹೊತ್ತಲ್ಲದ ಹೊತ್ತಿನಲ್ಲಿ ನಾವು ಮಲಗಿದಾಗ ಅದು ಅನುತ್ಪಾದಕ ಚಟುವಟಿಕೆಯೇ ಹೌದು.

ನಾವು ನಮ್ಮ PRODUCTIVE ಸಮಯವನ್ನು ಹೆಚ್ಚು ಮಾಡುತ್ತಾ ಹೋದಂತೆ ನಮ್ಮ ಯಶಸ್ಸು ಗಟ್ಟಿ ಆಗುತ್ತಾ ಹೋಗುತ್ತದೆ.

ಆದ್ಯತೆಗಳನ್ನು ಕೊಡುವುದು ಅಂದರೇನು?
ನಾನು ಒಂದಿಷ್ಟು ರೂಪಾಯಿ ನೋಟುಗಳನ್ನು ಗಾಳಿಗೆ ತೂರಿಕೊಂಡು ನಿಮಗೆ ಅವುಗಳನ್ನು ಆರಿಸಿಕೊಳ್ಳಿ ಅಂದಾಗ ನಾವೆಲ್ಲರೂ ದೊಡ್ಡ ಮೌಲ್ಯದ ನೋಟುಗಳನ್ನು ಮೊದಲು ಹುಡುಕಿ ಅವುಗಳನ್ನು ಪಡೆಯಲು ಜಗಳವನ್ನೇ ಮಾಡುತ್ತೇವೆ. ಅದು ಮುಗಿದ ನಂತರ ನಾವು ಕಡಿಮೆ ಮುಖಬೆಲೆಯ ನೋಟುಗಳನ್ನು ಆರಿಸಲು ಹೊರಡುತ್ತೇವೆ. ಸಮಯವೂ ಹೀಗೆಯೇ! ನಾವು ಮುಂದೆ ಮಾಡಲಿರುವ ಕೆಲಸಗಳನ್ನು ಪಟ್ಟಿಮಾಡಿ ಅವುಗಳಿಗೆ ಆದ್ಯತೆಗಳನ್ನು (PRIORITIES) ಕೊಡುತ್ತಾ ಹೋಗುವುದರ ಜೊತೆಗೆ ಹೆಚ್ಚು ಪ್ರಾಮುಖ್ಯವಾದ ಕೆಲಸಗಳನ್ನು ಮೊದಲು ಮಾಡಿದರೆ, ಆದ್ಯತೆಗಳು ಇಲ್ಲದ ಕೆಲಸಗಳನ್ನು ಸ್ವಲ್ಪ ನಿಧಾನಕ್ಕೆ ಕೈಗೆತ್ತಿಕೊಂಡರೆ ಯಶಸ್ಸು ಖಂಡಿತ. ಈ ಆದ್ಯತೆಗಳನ್ನು ನಿರ್ಧಾರ ಮಾಡಿಕೊಳ್ಳುವುದು ಹೇಗೆ? ನಾಳೆ ಬರೆಯುತ್ತೇನೆ.
ಆದರೆ ಒಂದಂಶ ಗಮನಿಸಿಕೊಳ್ಳಿ. ಜಗತ್ತಿನ ಅತ್ಯಂತ ಬ್ಯೂಸಿ ವ್ಯಕ್ತಿಯು ಕೂಡ ತನ್ನ ಆಸಕ್ತಿಯ ಕ್ಷೇತ್ರಗಳಿಗೆ ಹೆಚ್ಚು ಸಮಯ ವಿನಿಯೋಗ ಮಾಡಲು ಸಾಧ್ಯವಿದೆ. ವಾರೆನ್ ಬಫೆಟ್ ಮತ್ತು ಬಿಲ್ ಗೇಟ್ಸ್ ಓದುವುದಕ್ಕೆ, ಬರಾಕ್ ಒಬಾಮಾ ಅಡುಗೆ ಮಾಡಲು ಸಮಯವನ್ನು ಮೀಸಲಾಗಿ ಇಟ್ಟುಕೊಂಡಿದ್ದರು. ಹಾಗೆಯೇ ಬಿಡುವಿನ ಅವಧಿಯ ಆರೋಗ್ಯಪೂರ್ಣ ಹವ್ಯಾಸಗಳು ನಮ್ಮ ಬದುಕನ್ನು ಸುಂದರವಾಗಿ ಮಾಡುತ್ತವೆ.

(ನಾಳೆಗೆ ಮುಂದುವರೆಯುತ್ತದೆ)









































































































error: Content is protected !!
Scroll to Top