ಕಾರ್ಕಳ : ಕರ್ನಾಟಕ ಪಬ್ಲಿಕ್ ಸ್ಕೂಲ್ ಮುನಿಯಾಲು ಇದರ 2025-26 ರ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ವೇದಿಕೆಯ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ವಿ. ಸುನಿಲ್ ಕುಮಾರ್, ವಿದ್ಯಾರ್ಥಿಗಳು ಸ್ಕಿಲ್ ಇಂಡಿಯಾ, ಫಿಟ್ ಇಂಡಿಯಾದಂತಹ ಆಶಯಗಳನ್ನು ಮೈಗೂಡಿಸಿಕೊಂಡು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದರು.
ರಾಜ್ಯಶಾಸ್ತ್ರ ಉಪನ್ಯಾಸಕ ಜಗದೀಶ್ ನಾಯಕ್ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷ ಹರೀಶ್ ಪೂಜಾರಿ, ಉದ್ಯಮಿಗಳಾದ ದಿನೇಶ್ ಪೈ, ಸತೀಶ್ ಪೈ, ಸರಕಾರಿ ಪ್ರಥಮ ದರ್ಜೆ ಕಾಲೇಜು ಮುನಿಯಾಲಿನ ಪ್ರಾಂಶುಪಾಲ ಪ್ರೊ. ಸುಧಾಕರ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಉಷಾ ಶೆಟ್ಟಿ, ವಿದ್ಯಾರ್ಥಿ ನಾಯಕ ಕು. ಆಯುಷ್ ಶೆಟ್ಟಿ, ಕು. ಶ್ರೇಯಸ್, ಕು. ಸಾತ್ವಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ
ಈ ವರ್ಷ ರಾಷ್ಟ್ರ, ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸಂಸ್ಥೆಯನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳನ್ನು ಹಾಗೂ ಕ್ರೀಡಾ ತರಬೇತಿದಾರ ತಾರಾನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿ ಗಿರೀಶ್ ಶೆಟ್ಟಿ ತೆಳ್ಳಾರು ಇವರು ಕೊಡಮಾಡಿದ ಧ್ವನಿವರ್ಧಕವನ್ನು ಹಸ್ತಾಂತರ ಮಾಡಲಾಯಿತು.
ಸಂಸ್ಥೆಯ ಪ್ರಾಂಶುಪಾಲರಾದ ಬೇಬಿ ಶೆಟ್ಟಿ ಸ್ವಾಗತಿಸಿದರು. ಉಪ ಪ್ರಾಂಶುಪಾಲ ರವೀಂದ್ರ ರಾವ್ ವಂದಿಸಿದರು. ಉಪನ್ಯಾಸಕ ಅನಿಲ್ ಕುಮಾರ್ ಜೈನ್ ನಿರೂಪಿಸಿದರು.





































