ಅಪರೂಪದ ರಾಜಕಾರಣಿ ಗೋಪಾಲ ಭಂಡಾರಿ

ಕೆಲಸ ಯಾವುದೇ ಇರಲಿ, ಆ ಕೆಲಸವನ್ನು ಪ್ರಾಮಾಣಿಕತೆ, ಶ್ರದ್ಧೆ, ಆತ್ಮಸಾಕ್ಷಿಗೆ ಅನುಗುಣವಾಗಿ ಮಾಡಬೇಕು ಎಂಬ ಗಾಂಧೀಜಿಯವರ ಮಾತಿಗೆ ಒಪ್ಪುವಂತಹ ವ್ಯಕ್ತಿತ್ವ ಮಾಜಿ ಶಾಸಕ ದಿ. ಹೆಚ್. ಗೋಪಾಲ ಭಂಡಾರಿ ಅವರದ್ದು ಎಂದರೆ ತಪ್ಪಾಗಲಾರದು. ಹೆಬ್ರಿ ತಾಲೂಕಿನ ಚಾರ ಗ್ರಾಮದ ಹುತ್ತುರ್ಕೆಯಲ್ಲಿ ಗಿರಿಜಾ ಭಂಡಾರಿ ಮತ್ತು ನಂದ್ಯಪ್ಪ ಭಂಡಾರಿಯವರ ಸುಪುತ್ರನಾಗಿ 1952 ಜುಲೈ 7 ರಂದು ಗೋಪಾಲ ಭಂಡಾರಿ ಜನಿಸಿದರು. ಪಿ.ಯು.ಸಿ. ಶಿಕ್ಷಣದ ಬಳಿಕ ವಾಚ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡ ಗೋಪಾಲ ಅವರು ಬಳಿಕ ಕಿಸಾನ್ ಸಭಾ ಟ್ರಸ್ಟ್ ನ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡರು. ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಅವರ ವಿಧೇಯ ಶಿಷ್ಯರಾಗಿ ರಾಜಕೀಯ ಪಯಣ ಆರಂಭಿಸಿದ ಭಂಡಾರಿಯವರು ತನ್ನ ಜೀವಿತದ ಕೊನೆಯ ತನಕವೂ ಪಕ್ಷಕ್ಕೆ ಮತ್ತು ಮೋಯ್ಲಿಯವರಿಗೆ ನಿಷ್ಠರಾಗಿಯೇ ಬದುಕಿದರು.

ಕೂಡು ಕುಟುಂಬದಲ್ಲಿ ಬೆಳೆದ ಭಂಡಾರಿಯವರು ಎಲ್ಲರೊಂದಿಗೂ ಪ್ರೀತಿ, ಬಾಂಧವ್ಯ, ಸ್ನೇಹದಿಂದಲೇ ಬೆರೆಯುತ್ತಿದ್ದರು. ರಾಜಕೀಯ ಜೀವನದಲ್ಲಿ ಏನೇ ಸಮಸ್ಯೆಗಳಿದ್ದರೂ ಆ ವಿಚಾರವನ್ನು ಮನೆಯೊಳಗೆ ತಂದವರು ಅವರಲ್ಲ ಎನ್ನುತ್ತಾರೆ ಅವರ ಕುಟುಂಬಸ್ಥರು. ಯೋಗ, ಮಿತ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡಿದ್ದ ಅವರು ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರು. ‘ಸರಳ ಜೀವನ, ದುಂದು ವೆಚ್ಚಕ್ಕೆ ಕಡಿವಾಣ’ ಎಂಬ ನಿಯಮದೊಂದಿಗೆ ಬದುಕಿದವರು. ತನ್ನೆಲ್ಲಾ ನೋವುಗಳನ್ನು ಮರೆತು ಯಾರೊಂದಿಗೂ ದ್ವೇಷ ಸಾಧಿಸಿದೇ ನಿರಾಳತೆ, ನಿರ್ಲಿಪ್ತ ಭಾವದೊಂದಿಗೆ ಇದ್ದರು ಭಂಡಾರಿಯವರು.

ಸಮಾಜಕ್ಕೆ ಒಳಿತಾಗುವ, ಬಡವರ ಕಾರ್ಯಗಳಿಗೆ ಸದಾ ಬೆಂಬಲ ನೀಡುತ್ತಾ ಬಂದವರು ಗೋಪಾಲ ಭಂಡಾರಿ ಅವರು. ಭೂ ರಹಿತ ಬಡವರಿಗೆ ಅಕ್ರಮ ಸಕ್ರಮ ನಿಯಮದಡಿಯಲ್ಲಿ ಜಮೀನು ಮಂಜೂರು ಮಾಡಿ ಮಾಲಕರನ್ನಾಗಿಸಿದರು. ಸಮಾಜದಲ್ಲಿ ಜವಾಬ್ದಾರಿಯುತ ನಾಗರೀಕರಾಗಲು ಶಿಕ್ಷಣದ ಅಗತ್ಯವಿದೆ ಎಂದು ಮನಗಂಡು ತಮ್ಮ ಕ್ಷೇತ್ರದಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಮತ್ತು ವಸತಿ ಶಾಲೆಗಳ ನಿರ್ಮಾಣಕ್ಕಾಗಿ ಶ್ರಮಿಸಿದರು. ಇವರ ಅಧಿಕಾರ ಜನಪರ ಕಾಳಜಿಯಿಂದ ಕೂಡಿತ್ತು. ಎಲ್ಲಾ ವರ್ಗದ ಜನರನ್ನು ಸಮಾನವಾಗಿ ಕಾಣುತ್ತಿದ್ದ ಅಪರೂಪದ ರಾಜಕಾರಣಿಯಾಗಿ ರಾಜಕೀಯ ಕ್ಷೇತ್ರಕ್ಕೂ ಮೇಲ್ಪಂಕ್ತಿ ಹಾಕಿಕೊಟ್ಟವರು.
2019 ಜುಲೈ 4 ರಂದು ಬಾಳ ಪಯಣವನ್ನು ಮುಗಿಸಿದ ಮಹಾನ್ ಚೇತನ ಸಜ್ಜನ ರಾಜಕಾರಣಿ ಮತ್ತೊಮ್ಮೆ ಹುಟ್ಟಿಬರಲಿ ಎಂಬುದೇ ನನ್ನ ಪ್ರಾರ್ಥನೆ.



















































































error: Content is protected !!
Scroll to Top