ಕರ್ನಾಟಕ ಭೂ ಕಂದಾಯ ಅಧಿನಿಯಮ 1964

ಕಂದಾಯ ಪತ್ರಗಳು ಅಥವಾ ದಾಖಲೆಗಳು ಅಂದರೆ ಆರ್.ಟಿ.ಸಿ., ನಕ್ಷೆ, ತೀರ್ವೆ, ತೆರಿಗೆ ರಶೀದಿ ಇತ್ಯಾದಿಗಳು ಒಬ್ಬ ವ್ಯಕ್ತಿಗೆ ಸಂಬಂಧಪಟ್ಟ ಸ್ವತ್ತಿನ ಹಕ್ಕು ಅಥವಾ ಮಾಲಿಕತ್ವವನ್ನು ರುಜುವಾತುಪಡಿಸುವ ದಾಖಲೆಗಳಾಗಿರುವುದಿಲ್ಲ. ಅದೇ ರೀತಿ ಕಂದಾಯ ದಾಖಲೆಗಳಲ್ಲಿರುವ ನಮೂದುಗಳ ಆಧಾರದಲ್ಲಿ ಯಾವುದೇ ಸ್ವತ್ತಿನ ಮೇಲಿನ ಒಡೆತನವನ್ನು ನಿರ್ಧರಿಸಲು ಆಗುವುದಿಲ್ಲ. ಕಂದಾಯ ಪತ್ರ ಅಥವಾ ದಾಖಲೆಗಳನ್ನು ಕಂದಾಯ ಅಧಿಕಾರಿಗಳು ತಮ್ಮ ನಿಯಮಿತ ಉದ್ದೇಶಗಳಿಗಾಗಿ ಉಪಯೋಗಿಸಲು ಇರಿಸುವ ದಾಖಲೆಗಳಾಗಿರುತ್ತವೆ. ಆದುದರಿಂದ ಯಾವುದೇ ಒಬ್ಬ ವ್ಯಕ್ತಿ ತನ್ನ ಸ್ವತ್ತಿನ ಸ್ವಾಧೀನತೆಯನ್ನು ಕಾನೂನುಬದ್ಧವಾಗಿ ಹೊಂದಿರುವ ಸಂದರ್ಭದಲ್ಲಿ ಆ ಸ್ವತ್ತಿಗೆ ಸಂಬಂಧಪಟ್ಟ ಕಂದಾಯ ದಾಖಲೆಗಳನ್ನು ತನ್ನ ಹೆಸರಿನಲ್ಲಿ ಹೊಂದಿರುವ ಬೇರೊಬ್ಬ ವ್ಯಕ್ತಿಯು ಹಕ್ಕು ಮತ್ತು ಸ್ವಾಧೀನತೆಯ ವಿಷಯದಲ್ಲಿ ವಿವಾದ ಉಂಟಾದಲ್ಲಿ ಸ್ವತ್ತಿನ ಮೇಲಿನ ಕಾನೂನುಬದ್ದ ಮಾಲಿಕರು ಯಾರು ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಈ ಸಂದರ್ಭದಲ್ಲಿ ವಿವಾದವನ್ನು ತನಿಖೆ ಮಾಡುವ ಬಗೆಹರಿಸುವ ಅಧಿಕಾರವನ್ನು ಸರಕಾರದ ಕಂದಾಯ ಅಥವಾ ಇತರ ಯಾವುದೇ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು ಹೊಂದಿರುವುದಿಲ್ಲ. ವಿವಾದವನ್ನು ಬಗೆಹರಿಸಿಕೊಳ್ಳಲು ಸಂಬಂಧಪಟ್ಟ ವ್ಯಕ್ತಿಯು ಸಿವಿಲ್ ನ್ಯಾಯಾಲಯವನ್ನು ಸಂಪರ್ಕಿಸಬೇಕಾಗುತ್ತದೆ.

ಯಾವುದೇ ಒಬ್ಬ ವ್ಯಕ್ತಿಯು ಸ್ವತ್ತಿನ ಮೇಲೆ ವೀಲುನಾಮೆ ಅಥವಾ ಮರಣ ಶಾಸನದ ಮುಖಾಂತರ ಹಕ್ಕನ್ನು ಹೊಂದಿರುವ ಸಂದರ್ಭದಲ್ಲಿ ಅಂತಹ ವೀಲುನಾಮೆಯ ನೈಜತೆಯ ಕುರಿತು ತನಿಖೆ ಮಾಡುವ ಅಥವಾ ಅದರ ಆಧಾರದಲ್ಲಿ ವೀಲುನಾಮೆ ಬರೆಸಿಟ್ಟಿದ್ದ ಮೃತ ವ್ಯಕ್ತಿಯ ಎಲ್ಲಾ ವಾರೀಸುದಾರರ ಲಿಖಿತ ಒಪ್ಪಿಗೆ ಇಲ್ಲದೆ ಸ್ವತ್ತಿಗೆ ಸಂಬಂಧಪಟ್ಟ ಕಂದಾಯ ನಮೂದುಗಳನ್ನು ಬದಲಾಯಿಸುವ ಅಧಿಕಾರವನ್ನು ಕಂದಾಯ ಅಧಿಕಾರಿಗಳು ಹೊಂದಿರುವುದಿಲ್ಲ. ಕಾರಣ ಯಾವುದೇ ಒಂದು ವೀಲುನಾಮೆಯ ನೈಜತೆಯನ್ನು ತನಿಖೆ ಮಾಡುವ ಸಂದರ್ಭದಲ್ಲಿ ವೀಲುನಾಮೆಯನ್ನು ಬರೆದ ವ್ಯಕ್ತಿ ಹಾಗೂ ವೀಲುನಾಮೆಗೆ ಸಾಕ್ಷಿದಾರರಾಗಿ ಸಹಿ ಮಾಡಿರುವ ವ್ಯಕ್ತಿಗಳನ್ನು, ವೀಲುನಾಮೆಯ ಮುಖಾಂತರ ಪ್ರಯೋಜನ ಹೊಂದುವ ವ್ಯಕ್ತಿ ಹಾಗೂ ವೀಲುನಾಮೆಯ ನೈಜತೆಯನ್ನು ಯಾರಾದರೂ ಪ್ರಶ್ನಿಸಿದಲ್ಲಿ ಅಂತಹ ವ್ಯಕ್ತಿಗಳನ್ನು ಅಗತ್ಯವಾಗಿ ನ್ಯಾಯಾಲಯವು ವಿಚಾರಿಸಿ ಹೇಳಿಕೆ ಪಡಕೊಂಡು ಸೂಕ್ತ ಆದೇಶ ಮಾಡಬೇಕಾಗುತ್ತದೆ. ಈ ರೀತಿಯ ಅಧಿಕಾರವು ಕೇವಲ ಸಿವಿಲ್ ನ್ಯಾಯಾಲಯದ ವ್ಯಾಪ್ತಿಯೊಳಗೆ ಇರುತ್ತದೆ ವಿನ: ಕಂದಾಯ ನ್ಯಾಯಾಲಯವು ಈ ರೀತಿಯ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವುದಿಲ್ಲ.

ಯಾವುದೇ ಒಂದು ವೀಲುನಾಮೆಯ ನೈಜತೆಯ ಬಗ್ಗೆ ವಿವಾದ ಉಂಟಾದಲ್ಲಿ ವೀಲುನಾಮೆ ಮೂಲಕ ಸ್ವತ್ತಿನ ಮೇಲೆ ಹಕ್ಕು ಅಥವಾ ಅಧಿಕಾರ ಹೊಂದಿರುವ ವ್ಯಕ್ತಿಯು ಇಂತಹ ದಾಖಲೆಯ ನೈಜತೆಯನ್ನು ಕಾನೂನಿನ ನಿಯಮಾನುಸಾರವಾಗಿ ರುಜುವಾತು ಪಡಿಸುವ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಕರ್ನಾಟಕ ಭೂ ಕಂದಾಯ ಅಧಿನಿಯಮದ ಪ್ರಕಾರ ಸಾಮಾನ್ಯವಾಗಿ 60 ವರ್ಷಗಳಷ್ಟು ಹಳೆಯದಾದ ಕಂದಾಯ ನಮೂದುಗಳನ್ನು ಪ್ರಶ್ನಿಸುವ ಹಕ್ಕು ಅಥವಾ ಅಧಿಕಾರ ಯಾವುದೇ ವ್ಯಕ್ತಿಗೆ ಇರುವುದಿಲ್ಲ. ಒಬ್ಬ ವ್ಯಕ್ತಿ ತನ್ನ ಸ್ವತ್ತಿನ ಮೇಲಿನ ಹಕ್ಕನ್ನು ನೋಂದಾಯಿತ ದಸ್ತಾವೇಜು ಮೂಲಕ ಹೊಂದುವ ಸಂದರ್ಭದಲ್ಲಿ ನೋಂದಣಿ ಪ್ರಾಧಿಕಾರವು ಹಕ್ಕು ಪರಾಭಾರೆಗೆ ಸಂಬಂಧಪಟ್ಟಂತೆ ಸೂಕ್ತ ವರದಿಯನ್ನು ಸಂಬಂಧಿಸಿದ ಕಂದಾಯ ಅಧಿಕಾರಿಗಳಿಗೆ ಕಳುಹಿಸಬೇಕಾಗುತ್ತದೆ. ಹೀಗಾಗಿ ಯಾವುದೇ ವ್ಯಕ್ತಿಯು, ಸ್ವತ್ತನ್ನು ನೋಂದಾಯಿತ ದಸ್ತಾವೇಜಿನ ಮೂಲಕ ಹೊಂದುವ ಸಂದರ್ಭದಲ್ಲಿ ತನ್ನ ಹಕ್ಕಿನ ಕುರಿತಂತೆ ಪ್ರತ್ಯೇಕವಾಗಿ ವರದಿಯನ್ನು ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ಸಲ್ಲಿಸಲೇಬೇಕೆನ್ನುವ ಕಡ್ಡಾಯವಾದ ನಿಯಮವಿರುವುದಿಲ್ಲ. ಈ ರೀತಿಯ ಹೊಣೆಯು ಅಥವಾ ಕರ್ತವ್ಯವು ಸಂಬಂಧಪಟ್ಟ ನೋಂದಣಿ ಪ್ರಾಧಿಕಾರದ್ದಾಗಿರುತ್ತದೆ. ಕ್ರಯದ ನೈಜತೆ ಮತ್ತು ಸ್ವತ್ತಿನ ಮಾರಾಟದ ಅಧಿಕಾರ ಕುರಿತಂತೆ ವಿವಾದ ಉಂಟಾದ ಸಂದರ್ಭದಲ್ಲಿ ಉದ್ಭವಿಸುವ ಪ್ರಶ್ನೆಗಳನ್ನು ನಿರ್ಣಯಿಸಲು ಕಂದಾಯ ಅಧಿಕಾರಿಗಳಿಗೆ ಅಧಿಕಾರ ವಿರುವುದಿಲ್ಲ. ಇಂತಹ ಅಧಿಕಾರವು ಸಿವಿಲ್ ನ್ಯಾಯಾಲಯಕ್ಕೆ ಮಾತ್ರ ಇರುತ್ತದೆ.

ಹಿಂದೂದಾಯದಿತ್ವ ಸ್ವತ್ತಿನಲ್ಲಿ ವಿಭಾಗವಾಗದಂತಹ ಒಬ್ಬ ಸಹ ಮಾಲೀಕನ ಸ್ವತ್ತನ್ನು ಯಾರಾದರೂ ಖರೀದಿ ಮಾಡಿದಂತಹ ಪಕ್ಷದಲ್ಲಿ ಕಂದಾಯ ಅಧಿಕಾರಿಗಳಿಗೆ ಅಂತಹ ಖರೀದಿದಾರನ ಹೆಸರನ್ನು ಕಂದಾಯ ದಾಖಲಾತಿಗಳಲ್ಲಿ ನಮೂದು ಮಾಡಲು ಅಧಿಕಾರವಿರುವುದಿಲ್ಲ. ವಿಭಾಗಕ್ಕಾಗಿ ಹೂಡಿದ ದಾವೆಯು ವಿಚಾರಣೆಯಲ್ಲಿರುವಾಗ ಮೂರನೆಯ ವ್ಯಕ್ತಿಯು ಒಬ್ಬ ದಾಯಾದಿಯ ಅನಿರ್ದಿಷ್ಟಿತ ಸ್ವತ್ತಿನ ಭಾಗಾಂಶವನ್ನು ಖರೀದಿ ಮಾಡಿದ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟ ಸ್ವತ್ತಿನ ಕಂದಾಯ ದಾಖಲೆಗಳನ್ನು ಬದಲಾಯಿಸಲು ಕಾನೂನಿನ ನಿಯಮಾನುಸಾರವಾಗಿ ಅವಕಾಶವಿರುವುದಿಲ್ಲ. ಕಂದಾಯ ಅಧಿಕಾರಿಗಳಿಗೆ ಸ್ವತ್ತಿನ ಹಕ್ಕು ಪರಾಭಾರೆಗೆ ಸಂಬಂಧಪಟ್ಟ ದಾಖಲೆಗೆ ಸಂಬಂಧಿಸಿದಂತೆ ಉಂಟಾಗಿದೆ ಎಂದು ಹೇಳುವ ವಂಚನೆ ಅಥವಾ ಮೋಸ ಇನ್ನಿತರ ವಿವಾದಿತ ಪ್ರಶ್ನೆಗಳನ್ನು ನಿರ್ಧರಿಸುವ ಹಕ್ಕು ಇರುವುದಿಲ್ಲ. ಇಂತಹ ಅಧಿಕಾರವು ಕೇವಲ ಸಿವಿಲ್ ನ್ಯಾಯಾಲಯಕ್ಕೆ ಮಾತ್ರ ಇರುತ್ತದೆ. ಕಂದಾಯ ದಾಖಲೆಗಳಿಗೆ ಸಂಬಂಧಿಸಿದ ವಿವಾದವನ್ನು ತನಿಖೆ ಮಾಡುವ ಸಂದರ್ಭದಲ್ಲಿ ವಿವಾದಿತ ಸ್ವತ್ತಿನ ಸ್ವಾಧೀನತೆ ಅಥವಾ ಅನುಭೋಗದ ವಿಚಾರವಾಗಿ ಯಾವುದೇ ಇಂಜಕ್ಷನ್, ಸ್ಟೇಟಸ್ ಕೋ (ಯಥಾಸ್ಥಿತಿ) ಮುಂತಾದ ತಾತ್ಕಾಲಿಕ ಅಥವಾ ಶಾಶ್ವತ ನಿರ್ಭಂದಕಾಜ್ಞೆಯನ್ನು ಹೊರಡಿಸುವ ಅಥವಾ ಪಕ್ಷಕಾರರ ಸ್ವಾಧೀನಾನುಭೋಗಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಯಾವುದೇ ರೀತಿಯ ಹಸ್ತಾಕ್ಷೇಪವನ್ನು ಮಾಡುವ ಅಧಿಕಾರವನ್ನು ಕಂದಾಯ ನ್ಯಾಯಾಲಯ ಅಥವಾ ಕಂದಾಯ ಅಧಿಕಾರಿಗಳು ಹೊಂದಿರುವುದಿಲ್ಲ.











































error: Content is protected !!
Scroll to Top