ಜಾರ್ಜ್ ಫರ್ನಾಂಡಿಸ್ ಮತ್ತು ಕೊಂಕಣ್ ರೈಲ್ವೇ

1989ರ ಇಸವಿ ಅಂದಿನ ಪ್ರಧಾನಿ ವಿ. ಪಿ. ಸಿಂಘ್ ಅವರ ಕ್ಯಾಬಿನೆಟಲ್ಲಿ ರೈಲ್ವೇ ಮಂತ್ರಿ ಆಗಿ ಪ್ರತಿಜ್ಞೆ ಸ್ವೀಕರಿಸಿದ ತಕ್ಷಣ ಜಾರ್ಜ್ ಫರ್ನಾಂಡಿಸ್ ಅವರು ಉನ್ನತ ರೈಲ್ವೇ ಇಲಾಖೆಯ ಅಧಿಕಾರಿಗಳ ತುರ್ತು ಸಭೆ ಕರೆದಿದ್ದರು. ಜಾರ್ಜ್ ಫರ್ನಾಂಡಿಸ್ ಅಂದು ಹೇಳಿದ್ದು ಎರಡೇ ಮಾತು – ನನ್ನ ಮನಸಿನಲ್ಲಿ ಎರಡು ರೈಲ್ವೇಯ ಯೋಜನೆಗಳು ಇವೆ. ಒಂದು ಬಿಹಾರದಲ್ಲಿ ಚಿಟ್ಟೌನಿ, ಮತ್ತೊಂದು ಕರ್ನಾಟಕದಲ್ಲಿ ಕೊಂಕಣ ರೈಲ್ವೆ. ಮುಂದಿನ ಬಜೆಟ್ಟಿನಲ್ಲಿ ಅವುಗಳಿಗೆ ನಾನು ಹೇಗಾದರೂ ಹಣವನ್ನು ಮೀಸಲು ಇಡುತ್ತೇನೆ. ಅವೆರಡೂ ಪೂರ್ತಿ ಆಗಬೇಕು.

ಅವರು ಎರಡು ರೈಲ್ವೇ ಯೋಜನೆಗಳ ಹಿಂದೆ ಬಿದ್ದದ್ದೇಕೆ?
ಆಗ ಪತ್ರಕರ್ತರು ಅವೆರಡು ಯೋಜನೆಗಳು ಮಾತ್ರವೇ ಯಾಕೆ? ಎಂದು ಕೇಳಿದ್ದರು. ಅದಕ್ಕೆ ಜಾರ್ಜ್ ಹೇಳಿದ್ದು – ಒಂದು ನನಗೆ ವೋಟನ್ನು ಹಾಕಿ ಗೆಲ್ಲಿಸಿದ ರಾಜ್ಯ ಬಿಹಾರ್. ಇನ್ನೊಂದು ನನ್ನ ಜನ್ಮ ಕೊಟ್ಟ ರಾಜ್ಯ ಕರ್ನಾಟಕ! ಎರಡು ರಾಜ್ಯಗಳ ಋಣವನ್ನು ಮರೆಯಲು ಸಾಧ್ಯವೇ? ಎಂದು ಉತ್ತರಿಸಿದ್ದರು.

ಜಾರ್ಜ್ ಅವರಿಗೆ ಮಂತ್ರಿಯಾಗಿ ಮುಂದೆ ತಾನು ಏನು ಮಾಡಬೇಕು ಅನ್ನುವುದು ಸ್ಪಷ್ಟ ಆಗಿತ್ತು!
ನಾನು ಇವತ್ತು ಕೊಂಕಣ ರೈಲ್ವೆ ಎಂಬ ಮಹತ್ವಾಕಾಂಕ್ಷೆಯ ಯೋಜನೆಯ ಅನುಷ್ಠಾನದ ಬಗ್ಗೆ ತುಂಬಾ ವಿಸ್ತಾರ ಆಗಿ ಬರೆಯಬೇಕು. ಏಕೆಂದರೆ ಅವರು ಇಲ್ಲವಾಗಿದ್ರೆ ಆ ಯೋಜನೆ ಇವತ್ತಿಗೂ ಪೂರ್ತಿ ಆಗುತ್ತಿರಲಿಲ್ಲ!

ಕೊಂಕಣ ರೈಲ್ವೆ ಎಂಬ ಮಹಾ ಮಿಷನ್!
ಭಾರತದ ಅತೀ ದೊಡ್ಡ, ಸವಾಲಿನ ರೈಲ್ವೇ ಪ್ರಾಜೆಕ್ಟ್ ಅದು!
70ರ ದಶಕದಲ್ಲಿ ಕರಾವಳಿ ಕರ್ನಾಟಕದ ಬೇರೆ ಬೇರೆ ಕಡೆಯಿಂದ ಮುಂಬೈಗೆ ಹೋಗಿ ಉದ್ಯಮ, ವ್ಯವಹಾರ ಆರಂಭ ಮಾಡಿದ್ದ ತುಳುವರಿಗೆ ಮುಂಬೈಗೆ ಹೋಗಲು ಆಗ 48 ಗಂಟೆ ಅವಧಿಯು ಬೇಕಾಗಿತ್ತು! ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರಭಸವಾಗಿ ಹರಿಯುತ್ತಿದ್ದ ದೊಡ್ಡ ದೊಡ್ಡ ನದಿಗಳಿಗೆ ಆಗ ಸೇತುವೆಗಳು ಆಗಿರಲಿಲ್ಲ.

ಕರಾವಳಿ ಕರ್ನಾಟಕದ ಮಂದಿಯು ರಸ್ತೆಯ ಮಾರ್ಗದಲ್ಲಿ ಚಿಕ್ಕಮಗಳೂರಿನವರೆಗೆ (ಕಡೂರು)ಹೋಗಿ ಅಲ್ಲಿಂದ ಟ್ರೈನನ್ನು ಏರಿಕೊಂಡು ಮುಂಬಯಿ ತಲುಪುವಾಗ ಎರಡು ದಿನ ಮತ್ತು ಎರಡು ರಾತ್ರಿಗಳು ಕಳೆದುಹೋಗುತ್ತಿದ್ದವು! ಬೇರೆ ಯಾವುದೇ ಮಾರ್ಗ ಆಗ ಇರಲಿಲ್ಲ. ವಿಮಾನದ ಕಲ್ಪನೆ ಕೂಡ ಇರಲಿಲ್ಲ.

ಕೊಂಕಣ ರೈಲ್ವೇಗೆ ಎದುರಾಯಿತು ನೂರಾರು ಸವಾಲು.
ಜಾರ್ಜ್ ತಾವು ಭರವಸೆ ಕೊಟ್ಟ ಹಾಗೆ ರೈಲ್ವೆ ಬಜೇಟಲ್ಲಿ ಕೊಂಕಣ್ ರೈಲ್ವೆಗೆ ಮಂಜೂರಾತಿ ಪಡೆದರು. ಒಂದಿಷ್ಟು ದುಡ್ಡು ಕೂಡ ಪಡೆದರು. ಆದರೆ ಅದು ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆ ಎಂಬ ಹಾಗೆ ಇತ್ತು. ಆದರೆ ಜಾರ್ಜ್ ಹಿಡಿದ ಹಠ ಬಿಡುವ ಜಾಯಮಾನದವರೆ ಅಲ್ಲವಲ್ಲ!

ಮುಂದೆ ಒಂದೆರಡು ತಿಂಗಳ ಒಳಗೆ ಅವರ ಉತ್ಸಾಹದಲ್ಲಿ ಕೊಂಕಣ ರೈಲ್ವೆಸ್ ಕಂಪೆನಿ ಉದ್ಘಾಟನೆ ಆಯಿತು(1990 ಜುಲೈ 19). ಕೆಲವೇ ತಿಂಗಳ ಹಿಂದೆ ಕೇಂದ್ರ ಸರಕಾರದ ಸೇವೆಯಿಂದ ನಿವೃತ್ತಿ ಹೊಂದಿದ್ದ ಚೀಫ್ ಇಂಜಿನಿಯರ್ ಕೇರಳದ ಈ. ಶ್ರೀಧರನ್ ಅವರನ್ನು ಕೊಂಕಣ್ ರೈಲ್ವೇಯ ಮುಖ್ಯಸ್ಥರಾಗಿ ಆಗಮಿಸಲು ಜಾರ್ಜ್ ವಿನಂತಿ ಮಾಡಿದರು. ಶ್ರೀಧರನ್ ಒಪ್ಪಿದರು.

ಅವರಿಗೆ ಜಾರ್ಜ್ ಹೇಳಿದ್ದು ಒಂದೇ ಮಾತು – ಸರ್, ನೀವು ಕೆಲಸ ಮಾಡ್ತಾ ಹೋಗಿ. ಕೆಲಸ ನಿಲ್ಲಬಾರದು. ದುಡ್ಡು ನಾನು ಹೊಂದಿಸುವೆ!

ನಾನು ರೈಲ್ವೆ ಮಂತ್ರಿ ಆಗಿರದಿದ್ದರೂ….!
ಮುಂದೆ ಶಿಲಾನ್ಯಾಸದ ಕಾರ್ಯಕ್ರಮವು ನಡೆದಾಗ ರೈಲ್ವೆ ಮಂತ್ರಿ ಜಾರ್ಜ್ ಹೇಳಿದ್ದು – ಮುಂದೆ ನಾನು ರೈಲ್ವೆ ಮಂತ್ರಿ ಆಗಿರುತ್ತೇನೋ ಇಲ್ಲವೋ ಗೊತ್ತಿಲ್ಲ. ಎಂಟು ವರ್ಷಗಳ ಒಳಗೆ ಈ ಯೋಜನೆಯು ಖಂಡಿತ ಪೂರ್ತಿ ಆಗುತ್ತದೆ. ಅದಕ್ಕೆ ಬೇಕಾದ ದುಡ್ಡು ನನ್ನ ಹೊಣೆ!

ಜಾರ್ಜ್ ಫರ್ನಾಂಡಿಸ್ ನುಡಿದ ಹಾಗೆ ನಡೆದರು. ಸರಕಾರದ ದುಡ್ಡು ಸಾಲದೆ ಹೋದಾಗ ಪಬ್ಲಿಕ್ ಇಷ್ಯು ಮೂಲಕ ಫಂಡ್ಸ್ ಒಟ್ಟು ಮಾಡಿದರು. ಆ ಯೋಜನೆಯ ಫಲಾನುಭವಿಗಳ ಸಭೆ ಕರೆದು ಭಿಕ್ಷಾಪಾತ್ರೆ ಹಿಡಿದರು. ಜನರು ಹಿಂದೆ ಮುಂದೆ ನೋಡದೆ ಜಾರ್ಜ್ ಮೇಲೆ ಭರವಸೆ ಇಟ್ಟರು. ಜಾರ್ಜ್ ಅವರ ಕನ್ವಿನ್ಸಿಂಗ್ ಪವರ್ ತುಂಬಾ ಅದ್ಭುತವೇ ಆಗಿತ್ತು. ಅವರ ಕೊಂಕಣಿ, ತುಳು, ಹಿಂದೀ, ಇಂಗ್ಲಿಷ್, ಮರಾಠಿ ಭಾಷೆಯ ಮಾತುಗಳು ಜನರಲ್ಲಿ ಭಾರೀ ಭರವಸೆಯನ್ನು ಮೂಡಿಸಿದವು.

ಶ್ರೀಧರನ್ ಎಂಬ ಮಹಾ ಕಾಯಕ ರಾಕ್ಷಕ
ಇನ್ನು ಈ ಶ್ರೀಧರನ್ ಸಾಮರ್ಥ್ಯದ ಬಗ್ಗೆ ಎಷ್ಟು ಬರೆದರೂ ಅದು ಕಡಿಮೆಯೇ! ಆತ ಮಹಾ ಕಾಯಕ ರಾಕ್ಷಸ! ತುಂಬಾ ಸ್ಟ್ರಾಂಗ್ ಆಗಿದ್ದ ಯುವ ಇಂಜಿನಿಯರಗಳ ತಂಡವನ್ನು ಕಟ್ಟಿಕೊಂಡ ಅವರು ಮುಂದಿನ ಎಂಟು ವರ್ಷಗಳ ಕಾಲ ಮಾಡಿದ್ದೆಲ್ಲವೂ ಅದ್ಭುತ! ಎಲ್ಲವೂ ಮಹೋನ್ನತ!

ಅತ್ಯಂತ ದುರ್ಗಮವಾದ ಪರ್ವತಗಳ ಶ್ರೇಣಿ! ಜಾರುವ ಬಂಡೆಗಳು! ಒಂದು ಮಳೆಗೆ ಜಾರಿ ಕುಸಿದು ಹೋಗುವ ಶೇಡಿಮಣ್ಣಿನ ನೆಲ! ಬೆಟ್ಟಗಳನ್ನು ಅಗೆದು ಮೈಲು ದೂರದ ಸುರಂಗಗಳನ್ನು ಕೊರೆಯುವ ಸವಾಲು! ಅದು ಇಡೀ ಭಾರತದ ರೈಲ್ವೆ ಇತಿಹಾಸದ ಅತ್ಯಂತ ಸಾಹಸದ ಮತ್ತು ಸವಾಲಿನ ಪ್ರಾಜೆಕ್ಟ್ ಆಗಿತ್ತು!

ಮೂರು ರಾಜ್ಯಗಳ ಮೂಲಕ ಹಾದು ಹೋಗುವ 760 KM ಉದ್ದವಾದ ರೈಲ್ವೆ ಹಳಿಗಳು! 2000 ಸಣ್ಣ ಸೇತುವೆಗಳು! 179 ದೊಡ್ಡದಾದ ಸೇತುವೆಗಳು! 92 ಭಾರೀ ಉದ್ದವಾದ ಸುರಂಗಗಳು! ಅದರಲ್ಲಿ ಕೆಲವು ಮೈಲುಗಟ್ಟಲೆ ಉದ್ದ ಇವೆ! 59 ವೈಭವದ ನಿಲ್ದಾಣಗಳು! ಆಗಾಗ ನಡೆದ ಗುಡ್ಡ ಕುಸಿತದ ಹಿನ್ನೆಲೆಯಲ್ಲಿ ಕೆಲಸವು ಕಷ್ಟ ಆಯ್ತು. ಆದರೆ ಈ. ಶ್ರೀಧರನ್ ಕೆಲಸವನ್ನು ನಿಲ್ಲಲು ಬಿಡಲಿಲ್ಲ! ಜಾರ್ಜ್ ಅವರನ್ನು ಬೆನ್ನು ಬಿಡಬೇಕಲ್ಲ!

ಜಾರ್ಜ್ ಫರ್ನಾಂಡಿಸ್ ನುಡಿದಂತೆ ನಡೆದರು
ಜಾರ್ಜ್ ಭರವಸೆ ಕೊಟ್ಟ ಹಾಗೆ ಎಂಟು ವರ್ಷಗಳ ಒಳಗೆ ಈ ಪ್ರಾಜೆಕ್ಟ್ ಪೂರ್ತಿ ಆಯಿತು. 1998 ಜನವರಿ 26ರಂದು ಅಂದಿನ ಪ್ರಧಾನಿ ವಾಜಪೇಯಿ ಅವರು ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಕೊಂಕಣ ರೈಲ್ವೆಯ ಹೊಸ ಮಾರ್ಗವನ್ನು ಉದ್ಘಾಟನೆ ಮಾಡಿದರು. ಆಗ ಕೇಂದ್ರದ ರಕ್ಷಣಾ ಮಂತ್ರಿ ಆಗಿದ್ದ ಜಾರ್ಜ್ ಫರ್ನಾಂಡಿಸ್ ಅಂದು ವೇದಿಕೆಯಲ್ಲಿ ಇದ್ದು ಆನಂದ ಭಾಷ್ಪ ಸುರಿಸಿದರು! ತನ್ನ ತಂದೆ ಮರಣವನ್ನು ಹೊಂದಿದಾಗಲೂ ಕಣ್ಣೀರು ಹಾಕದೆ ಇದ್ದ ಉಕ್ಕಿನ ಮನುಷ್ಯ ಜಾರ್ಜ್ ಫರ್ನಾಂಡಿಸ್ ಅಂದು ಅಕ್ಷರಶಃ ಪುಟ್ಟ ಮಗುವಿನ ಹಾಗೆ ಕಣ್ಣೀರು ಹಾಕಿದ್ದರು! ಅಂದು ಮಂಗಳೂರು ಮುಂಬೈ ನಡುವೆ ಮೊದಲ ಟ್ರೈನ್ ಓಡಿತ್ತು!

ಕೊಂಕಣ ರೈಲು ಕ್ರಾಂತಿಯನ್ನೇ ಮಾಡಿತು!
ಅದುವರೆಗೆ ಮಂಗಳೂರು ಮುಂಬೈ ನಡುವಿನ ಪ್ರಯಾಣಕ್ಕೆ 48 ಗಂಟೆ ತೆಗೆದುಕೊಳ್ಳುತ್ತಿದ್ದ ಕರಾವಳಿಯ ಮಂದಿ ಈಗ ಕೇವಲ 15 ಗಂಟೆಯಲ್ಲಿ ಮುಂಬೈ ತಲುಪಿದ್ದರು! ಈಗ ಇನ್ನೂ ಕಡಿಮೆಯ ಸಮಯವು ಸಾಕಾಗುತ್ತದೆ. ದೂರವು 1200 ಕಿಲೋಮೀಟರನಿಂದ 760 ಕಿಲೋಮೀಟರಗೆ ಇಳಿದಿದೆ. ಅತ್ಯಂತ ಆಕರ್ಷಕವಾದ 59 ಸ್ಟೇಶನಗಳು ಕೂಡ ಮುಗಿದು ಬಿಟ್ಟಿದ್ದವು. ತುಳುವರ ಸಂತೋಷಕ್ಕೆ ಅಂದು ಪಾರವೇ ಇರಲಿಲ್ಲ. ಈ. ಶ್ರೀಧರನ್ ಈ ಪ್ರಾಜೆಕ್ಟನ್ನು ಪೂರ್ತಿ ಮಾಡಿ ಇನ್ನೊಂದು ಪ್ರಾಜೆಕ್ಟ್ ಹಿಂದೆ ಹೋದರು. ಅವರೆಲ್ಲಿ ವಿಶ್ರಾಂತಿ ಪಡೆಯುತ್ತಾರೆ?

ಜಾರ್ಜ್ ಫರ್ನಾಂಡಿಸ್ ಆದರು ಲೆಜೆಂಡ್
ಇಂದು( ಜೂನ್ 3) ಜಾರ್ಜ್ ಫರ್ನಾಂಡಿಸ್ ಅವರ ಹುಟ್ಟಿದ ಹಬ್ಬ. ಬದುಕಿದ್ದರೆ ಅವರಿಗೆ ಇಂದು 95 ವರ್ಷ ಆಗಿರುತ್ತಿತ್ತು. ಅವರಿಂದು ಬದುಕಿಲ್ಲ. 2019ರಲ್ಲಿ ಅವರು ನಿಧನವಾದರು.
ಆದರೆ ಪ್ರತೀ ದಿನವೂ ರೈಲಿನಲ್ಲಿ ಪ್ರಯಾಣ ಮಾಡುವ ಜನರ ಹೃದಯದಲ್ಲಿ ಅವರು ಸದಾ ಜೀವಂತ ಇರುತ್ತಾರೆ. ಕೊಂಕಣ್ ರೈಲ್ವೆ ಯೋಜನೆಯ ಕಾರಣಕ್ಕೆ ಇಂದು ಭಾರತದ ಎಲ್ಲ ನಗರಗಳಿಗೆ ಕರಾವಳಿಯ ಕನೆಕ್ಟಿವಿಟಿಯು ದೊರೆತಿದೆ. ನಾವು ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಅವರೊಬ್ಬ ಕನ್ನಡಿಗ ಎಂಬ ಹೆಮ್ಮೆ ಕೂಡ ನಮಗೆ ಇರಲಿ. ಅವರು ಹುಟ್ಟಿದ್ದು ಮಂಗಳೂರಿನಲ್ಲಿ.

ಜಾರ್ಜ್ ನಿಜಾರ್ಥದಲ್ಲಿ ಒಬ್ಬ ಲೆಜೆಂಡ್
ಉಡುಪಿ ಇಂದ್ರಾಳಿಯ ಜಂಕ್ಷನನಿಂದ ರೈಲ್ವೆ ನಿಲ್ದಾಣದ ತನಕ ಹೋಗುವ ರಸ್ತೆಗೆ ಜಾರ್ಜ್ ಫರ್ನಾಂಡಿಸ್ ಅವರ ಹೆಸರು ಇಡಲಾಗಿದೆ. ಆದರೆ ಆ ನಾಮಫಲಕವು ಎಲ್ಲೋ ಮರೆಗೆ ಹೋಗಿದೆ. ಅವರ ಬಗ್ಗೆ ನಿರ್ಲಕ್ಷವು ಖಂಡಿತ ಸಲ್ಲದು. ಜಾರ್ಜ್ ಫೆರ್ನಾಂಡಿಸ್ ನಿಜವಾದ ಅರ್ಥದಲ್ಲಿ ನಮಗೆ ಲೆಜೆಂಡ್ ಆಗಬೇಕು.









































































































error: Content is protected !!
Scroll to Top