ಕಾರ್ಕಳ : ರೋಮ್ಗೆ ಬೆಂಕಿ ಬಿದ್ದಾಗ ಅಲ್ಲೊಬ್ಬ ಪಿಟೀಲು ಬಾರಿಸುತ್ತಿದ್ದನಂತೆ, ರಾಜಧಾನಿ ಬೆಂಗಳೂರು ಮಳೆಯಿಂದ ಮುಳುಗಿದಾಗ ಇಲ್ಲಿನ ಸರಕಾರ ಸಾಧನಾ ಸಮಾವೇಶ ನಡೆಸುತ್ತಿದೆ. ಗ್ರೇಟರ್ ಬೆಂಗಳೂರು ವಾಟರ್ನಲ್ಲಿ ಮುಳುಗಿರುವಾಗ ನಾಗರಿಕರ ಸಂಕಷ್ಟಕ್ಕೆ ನೆರವಾಗಬೇಕಿದ್ದ ಕಾಂಗ್ರೆಸ್ ಶಾಸಕರು, ಸಚಿವರು ಹೊಸಪೇಟೆಗೆ ದೌಡಾಯಿಸುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಟೀಕಿಸಿದ್ದಾರೆ.
ಮೇ 20 ರಂದು ಹೊಸಪೇಟೆಯಲ್ಲಿ ಆಯೋಜಿಸಿರುವ ರಾಜ್ಯ ಸರಕಾರದ ಎರಡು ವರ್ಷದ ಸಾಧನಾ ಸಮಾವೇಶದ ಬಗ್ಗೆ ತನ್ನ ಎಕ್ಸ್ (ಟ್ವಿಟ್ಟರ್)ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಸುನಿಲ್ ಕುಮಾರ್ ಬೆಂಗಳೂರಿನ ಜನತೆ ಮಳೆಯಿಂದಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿರುವಾಗ ಕಾಂಗ್ರೆಸ್ ಸಾಧನ ಸಮಾವೇಶ ನಡೆಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಬೆಂಗಳೂರಿನ ಜನರು ಕಷ್ಟದಲ್ಲಿರುವಾಗ ಈ ಸಂಭ್ರಮ ಬೇಕೇ ? ಈ ದುರಾಡಳಿತವನ್ನು ನಿಮ್ಮ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಬೆಂಬಲಿಸುತ್ತಾರೆಯೇ ? ಎಂದು ಪ್ರಶ್ನಿಸಿರುವ ಸುನಿಲ್ ಕುಮಾರ್, ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಕಳೆದ ಎರಡು ವರ್ಷದಲ್ಲಿ ವಿನಿಯೋಗಿಸಿದ ಹಣ ಎಷ್ಟು ಎಂದು ಮೊದಲು ಶ್ವೇತಪತ್ರ ಪ್ರಕಟಿಸಿ ಎಂದು ಆಗ್ರಹಿಸಿದ್ದಾರೆ.






































