ಧರ್ಮಸ್ಥಳ ಮೂಲದ ಯುವತಿ ಪಂಜಾಬ್‌ನಲ್ಲಿ ಸಾವು

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಧರ್ಮಸ್ಥಳದ ಗ್ರಾಮದ ಬೊಳಿಯಾರ್ ನಿವಾಸಿ ಜೆಟ್ ಏರ್‌ ವೇಸ್‌ನಲ್ಲಿ ಏರೊನೋಟಿಕಲ್ ಎಂಜಿನಿಯರ್ ಆಗಿರುವ ಆಕಾಂಕ್ಷಾ (22 ) ತಾನು ಕಲಿತಿದ್ದ ಪಂಜಾಬ್‌ ರಾಜ್ಯದಲ್ಲಿನ ಕಾಲೇಜು ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಧರ್ಮಸ್ಥಳ ಗ್ರಾಮದ ಬೊಳಿಯಾರು ನಿವಾಸಿ ಸುರೇಂದ್ರನ್ ಮತ್ತು ಸಿಂಧೂದೇವಿ ದಂಪತಿ ಪುತ್ರಿಯಾಗಿರುವ ಈಕೆ, ಪಂಜಾಬಿನ ಎಲ್‌ಪಿಯು ಪಗ್ವಾಡ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು, ಕಳೆದ ಆರು ತಿಂಗಳ ಹಿಂದೆ ಏರೋಸ್ಪೇಸ್ ಎಂಜಿನಿಯರ್ ಆಗಿ ದೆಹಲಿಯಲ್ಲಿ ಉದ್ಯೋಗದಲ್ಲಿದ್ದರು. ಮುಂದೆ ವಿದೇಶಕ್ಕೆ ಉದ್ಯೋಗಕ್ಕೆ ಹೋಗುವವರಿದ್ದು, ಪಂಜಾಬ್ ಎಲ್‌ಪಿಯು ಪಗ್ವಾಡ ಕಾಲೇಜಿನಿಂದ ಸರ್ಟಿಫಿಕೇಟ್‌ಗಳನ್ನು ಪಡೆಯಲು ತೆರಳಿದ್ದರು.

ಶುಕ್ರವಾರ ಕಾಲೇಜಿಗೆ ಹೋಗಿದ್ದು, ಕಾಲೇಜಿನಲ್ಲಿ ಅಂದು ಸರ್ಟಿಫಿಕೇಟ್‌ಗಳನ್ನು ನೀಡದೆ ಶನಿವಾರ ಬರುವಂತೆ ತಿಳಿಸಿದ್ದಾರೆ ಎಂದು ಮನೆಯವರಿಗೆ ಆಕೆ ಮಾಹಿತಿ ನೀಡಿದ್ದಳು. ಇದಾದ ಬಳಿಕ ಶನಿವಾರ ಬೆಳಗ್ಗೆ ಆಕೆ ಮತ್ತೆ ಕಾಲೇಜಿಗೆ ಹೋಗಿದ್ದಾಳೆ. 11.45ಕ್ಕೆ ತಾಯಿಗೆ ಮೆಸೇಜ್ ಮಾಡಿ ತಾನು ಕಾಲೇಜಿನಲ್ಲಿ ಇರುವುದಾಗಿ ತಿಳಿಸಿರುವುದಾಗಿ ಮನೆಯವರು ಮಾಹಿತಿ ನೀಡಿದ್ದಾರೆ. ಸಂಜೆ 4.30ಕ್ಕೆ ಪಂಜಾಬಿನ ಪೊಲೀಸರು ಮನೆಯವರಿಗೆ ಕರೆ ಮಾಡಿದ್ದು, ಆಕೆ ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ.

ಮೃತ ಆಕಾಂಕ್ಷಾ ಅವರ ತಂದೆ, ತಾಯಿ, ಸಹೋದರ, ಚಿಕ್ಕಮ್ಮ ಹಾಗೂ ಕುಟುಂಬದ ಇಬ್ಬರು ಪಂಜಾಬ್‌ಗೆ ತೆರಳಿದ್ದು, ಭಾನುವಾರ ರಾತ್ರಿ ಪಂಜಾಬ್ ರಾಜ್ಯದ ಜಲಂಧರ್ ಜಿಲ್ಲೆಯ ಪಗ್ವಾಡಾ ಸಿವಿಲ್ ಸರ್ಕಾರಿ ಆಸ್ಪತ್ರೆಗೆ ತಲುಪಿದ್ದಾರೆ. ಜಲಂಧರ್ ಪೊಲೀಸ್ ಠಾಣೆಗೆ ಘಟನೆಯ ಬಗ್ಗೆ ಸಹೋದರ ಆಕಾಶ್ ನಾಯರ್ ದೂರು ನೀಡಿದ್ದಾರೆ.

ಪ್ರಕರಣಕ್ಕೆ ಟ್ವಿಸ್ಟ್‌
ಆಕಾಂಕ್ಷಾ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಆಕಾಂಕ್ಷಗೆ ತಾನು ಓದುತ್ತಿದ್ದ ಯೂನಿವರ್ಸಿಟಿಯ ಪ್ರೊಫೆಸರ್ ಜೊತೆ ಪ್ರೇಮವಾಗಿತ್ತು. ಕೇರಳದ ಕೊಟ್ಟಾಯಂ ನಿವಾಸಿ ಎರಡು ಮಕ್ಕಳ ತಂದೆ ಬಿಜಿಲ್ ಮ್ಯಾಥ್ಯೂ ಜೊತೆ ಆಕಾಂಕ್ಷಗೆ ಪ್ರೇಮಾಂಕುರವಾಗಿತ್ತು. ಅಲ್ಲದೇ ಮ್ಯಾಥ್ಯೂ ಜೊತೆ ಆತನ ಮನೆಗೆ ಹೋಗಿ ಮದುವೆಯಾಗುವಂತೆ ಒತ್ತಾಯಿಸಿ ಆಕಾಂಕ್ಷ ಜಗಳ ಮಾಡಿದ್ದಳು. ಬಳಿಕ ಕಾಲೇಜಿನಲ್ಲೂ ಜಗಳ ಮಾಡಿ ಕಟ್ಟಡದ ನಾಲ್ಕನೇ ಮಹಡಿಗೆ ಹೋಗಿ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆತ್ಮಹತ್ಯೆಗೆ ಪ್ರೇರಣೆ ಹಿನ್ನೆಲೆ ಮ್ಯಾಥ್ಯೂ ವಿರುದ್ದ ಪಂಜಾಬ್‌ನ ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಂದು ಶವಪರೀಕ್ಷೆ ಬಳಿಕ ಹೆತ್ತವರಿಗೆ ಆಕಾಂಕ್ಷಳ ಮೃತದೇಹ ಹಸ್ತಾಂತರಿಸಲಾಗುತ್ತದೆ. ಇಂದು ಸಂಜೆ ವೇಳೆಗೆ ಧರ್ಮಸ್ಥಳ ಬೊಳಿಯೂರು ಮನೆಯಲ್ಲಿ ಆಕಾಂಕ್ಷ ಅಂತ್ಯಸಂಸ್ಕಾರ ನಡೆಯಲಿದೆ.‌



















































































error: Content is protected !!
Scroll to Top