ಕಾರ್ಕಳ : ಸ್ವಯಂ ಶೂಟ್ ಮಾಡಿಕೊಂಡು ಉದ್ಯಮಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.29ರ ಮುಂಜಾನೆ ನಿಟ್ಟೆ ಸಮೀಪದ ದೂಪದಕಟ್ಟೆಯಲ್ಲಿ ಸಂಭವಿಸಿದೆ. ಮೂಲತಃ ಕಾರ್ಕಳದವರಾದ ಮಂಗಳೂರು ನಿವಾಸಿ ದಿಲೀಪ್ ಎನ್. ಆರ್. ಶೂಟ್ ಮಾಡಿಕೊಂಡವರು.
ಮಂಗಳೂರಿನಲ್ಲಿ ವಾಸವಿದ್ದ ದಿಲೀಪ್ ಎ. 28ರ ರಾತ್ರಿ ಅಲ್ಲಿಂದ ತನ್ನ ಕಾರಿನಲ್ಲಿ ಹೊರಟವರು ದೂಪದಕಟ್ಟೆಯ ಸಮೀಪ ನವೋದಯ ಪ್ರಾಪರ್ಟಿಸ್ ಮುಂಭಾಗ ರಸ್ತೆ ಬದಿ ಕಾರು ನಿಲ್ಲಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಿನ ಒಳಗೆ ವಿಷದ ಬಾಟಲಿಯಿದ್ದ ಕಾರಣ ವಿಷ ಸೇವಿಸಿ ನಂತರ ಗುಂಡು ಹಾರಿಸಿಕೊಂಡಿರಬೇಕು ಎನ್ನಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ. ಆರ್ಥಿಕ ಮುಗ್ಗಟ್ಟು ಮತ್ತು ಆರೋಗ್ಯ ಸಮಸ್ಯೆ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದ್ದು, ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.
ಕಾರ್ಕಳ ಪುರಸಭೆಗೆ ಪಕ್ಷೇತರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ದಿಲೀಪ್ ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷ ಸುಭೀತ್ ಎನ್. ಆರ್. ಅವರ ಸಹೋದರ. ಅವರು ಮಂಗಳೂರು, ಮುಂಬಯಿ ಹಾಗೂ ಹೈದರಾಬಾದ್‌ನಲ್ಲಿ ಹೋಟೆಲ್ ಉದ್ಯಮ ನಡೆಸಿದ್ದರು. ಉದ್ಯಮದಲ್ಲಿ ನಷ್ಟ ಅನುಭವಿಸಿದ್ದು ಆರೋಗ್ಯದಲ್ಲಿ ಸಮಸ್ಯೆಯಿತ್ತು.
ನಿನ್ನೆ ರಾತ್ರಿ ತನ್ನ ಆಪ್ತರಿಗೆ ವಾಟ್ಸಪ್‌ನಲ್ಲಿ ನಾನು ನಿಮ್ಮನ್ನು ಬಿಟ್ಟು ದೂರ ಹೋಗುತ್ತಿದ್ದೇನೆ ಎಂದು ಮೇಸೇಜ್ ಕಳುಹಿಸಿದ್ದರು. ಮುಂಬೈಯ ಉದ್ಯಮಿಯೊಬ್ಬರು ಮೇಸೆಜ್ ನೋಡಿ ಮೃತರ ಅಣ್ಣನಿಗೆ ವಿಷಯ ತಿಳಿಸಿದ್ದಾರೆ. ಅಣ್ಣ ದಿಲೀಪ್‌ರನ್ನು ಸಂಪರ್ಕಿಸಲು ಪ್ರಯತ್ನಪಟ್ಟಾಗ ಯಾವುದೇ ಸುಳಿವು ಸಿಗಲಿಲ್ಲ. ಪೊಲೀಸರ ಸಹಾಯದೊಂದಿಗೆ ಮೊಬೈಲ್ ನಂಬರ್ ಲೊಕೇಶನ್ ಆಧಾರದಲ್ಲಿ ಹುಡುಕಾಟ ನಡೆಸಿದಾಗ ಕಾರ್ಕಳದ ದೂಪದಕಟ್ಟೆಯಲ್ಲಿ ಕಾರು ಪತ್ತೆಯಾಗಿದೆ. ಕಾರನ್ನು ಪರಿಶೀಲಿಸಿದಾಗ ದಿಲೀಪ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದ ಇವರು ತುಳುನಾಡ ಸೇನೆ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು.



































