ಮಹೇಶ್‌ ಶೆಟ್ಟಿ ಕುಡುಪುಲಾಜೆ ಸುವರ್ಣ ಸಂಭ್ರಮ

ಕಾರ್ಕಳ : ಬದುಕಿನಲ್ಲಿ ಹೊಸತನವನ್ನು ಕಂಡುಕೊಳ್ಳುವ ಸೃಜನಶೀಲತೆ, ಅಪಾರದವಾದ ಅನುಭವ, ಪ್ರಾಮಾಣಿಕತೆಯೊಂದಿಗೆ ಭಗವಂತನ ಅನುಗ್ರಹವಿದ್ದಾಗ ಮನುಷ್ಯ ಜೀವನದಲ್ಲಿ ಎತ್ತರಕ್ಕೇರಲು ಸಾಧ್ಯ. ಈ‌ ನಿಟ್ಟಿನಲ್ಲಿ ಮಹೇಶ್ ಶೆಟ್ಟಿಯವರ ಬದುಕು ಅರ್ಥಪೂರ್ಣ. ಭಕ್ತಿ ಮತ್ತು ಸೇವೆಯ ಮೂಲಕ ಧರ್ಮ ರಕ್ಷಣೆಯಲ್ಲಿ ಉದಾತ್ತವಾದ ಔದಾರ್ಯದೊಂದಿಗೆ ಜೀವನ ನಡೆಸುತ್ತಿರುವ ಅವರು ಪೂರ್ಣಾಯುಷಿಯಾಗಲಿ. ಅವರಿಂದ ಸಮಾಜ ಸೇವೆ ನಿರಂತರವಾಗಿ ನಡೆಯಲಿ ಎಂದು ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಅವರು ಏ. 27ರಂದು ಶ್ರೀ ಬಿ. ಮಂಜುನಾಥ ಪೈ ಸಭಾಂಗಣದಲ್ಲಿ ನಡೆದ ತೆಳ್ಳಾರು ಶ್ರೀ ಮಹೇಶ್‌ ಶೆಟ್ಟಿ ಕುಡುಪುಲಾಜೆ ಅವರ 50ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ವ್ಯಕ್ತಿತ್ವದ ಪೂಜೆ – ಸುನಿಲ್‌ ಕುಮಾರ್
ಶಾಸಕ ಸುನಿಲ್‌ ಕುಮಾರ್‌ ಮಾತನಾಡಿ, ಮಹೇಶ್‌ ಶೆಟ್ಟಿಯವರ ಹುಟ್ಟು ಹಬ್ಬದ ಸಂಭ್ರಮಾಚರಣೆ ಕಾರ್ಯಕ್ರಮ ವ್ಯಕ್ತಿಯ ಪೂಜೆಯಲ್ಲ ಬದಲಾಗಿ ಹಿಂದುತ್ವ ಮತ್ತು ರಾಷ್ಟ್ರೀಯತೆ ವಿಚಾರದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿತ್ವದ ಪೂಜೆ. ಪಕ್ಷದ ಹಿರಿಯರು ಹೇಳಿಕೊಟ್ಟ ಸಿದ್ಧಾಂತದಲ್ಲಿ ನಡೆಯುತ್ತಿರುವವರು ನಾವು. ಈ‌ ವಿಚಾರದಡಿಯಲ್ಲೇ ಕಾರ್ಯನಿರ್ವಹಿಸುತ್ತಿರುವ ಮಹೇಶ್ ಶೆಟ್ಟಿಯವರ ಹುಟ್ಟು ಹಬ್ಬ ಹಿಂದುತ್ವದ ಕಾರ್ಯಕ್ರಮಕ್ಕೆ ಮತ್ತೊಂದು ಉತ್ತೇಜನ. ತನ್ಮೂಲಕ ಹಿಂದೂ ಕಾರ್ಯಕರ್ತರು ಒಟ್ಟಾಗಬೇಕು ಎಂಬುದು ಕಾರ್ಯಕ್ರಮದ ಆಶಯ. ಮಹೇಶ್‌ ಶೆಟ್ಟಿಯವರಿಗಿರುವ ಹಿಂದುತ್ವದ ಮೇಲಿನ ಬದ್ಧತೆ, ಉದ್ಯಮ ಮತ್ತು ಬದುಕಿನ ಯಶಸ್ಸು ಸಮಾಜಕ್ಕೆ ಮಾದರಿಯಾಗಲಿ ಎಂದು ಹೇಳಿದರು.

ಮುಂದಿನ ಪೀಳಿಗೆ ಪ್ರೇರಣೆಯಾಗಲಿ – ಪ್ರಕಾಶ್‌ ಶೆಟ್ಟಿ
ಎಂ.ಆರ್.‌ ಜಿ. ಗ್ರೂಪ್ ಅಧ್ಯಕ್ಷ  ಪ್ರಕಾಶ್ ಶೆಟ್ಟಿ ಮಾತನಾಡಿ, ಕಾರ್ಕಳದ ಮಣ್ಣಿಗೆ ಮಹತ್ತರವಾದ ಇತಿಹಾಸವಿದೆ. ಇಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕ ಸಾಧಕರಿದ್ದಾರೆ.‌ ಅಂತಹ ಸಾಧಕರಲ್ಲಿ ಓರ್ವರಾದ ಮಹೇಶ್ ಶೆಟ್ಟಿಯವರು ಅನೇಕರಿಗೆ ಉದ್ಯೋಗ ದಾತನಾಗಿ ದೊಡ್ಡ ಸಾಮ್ರಾಜ್ಯ ಕಟ್ಟಿದರೂ ತಾವು‌ ಹುಟ್ಟಿದ ನೆಲವನ್ನು ಮರೆಯದಿರುವುದು ಅವರ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತದೆ. ಅವರ ಬದುಕು ಮುಂದಿನ ಪೀಳಿಗೆ ಪ್ರೇರಣೆಯಾಗಲಿ ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಯಾವುದೇ ಅಧಿಕಾರವಿಲ್ಲದೆ ತಮ್ಮ ಕಾರ್ಯಶೈಲಿಯ ಮೂಲಕ ಜನರ ಪ್ರೀತಿ ಗಳಿಸಬಹುದು ಎಂಬುದಕ್ಕೆ ಉತ್ತಮ ನಿದರ್ಶನ ಮಹೇಶ್‌ ಶೆಟ್ಟಿಯವರು. ಜಾತಿ ವ್ಯವಸ್ಥೆಯನ್ನು ಮೀರಿ ಸಮಾಜದಲ್ಲಿ ಒಗ್ಗಟ್ಟಾದಾಗ ಅಭಿವೃದ್ಧಿ ಸಾಧ್ಯ. ಆ ನೆಲೆಯಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸೋಣ ಎಂದು ಹೇಳಿದರು.

ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ, ಬದುಕಿನ ಸಾಧನೆಯೊಂದಿಗೆ ಹುಟ್ಟೂರಿನ ಸರ್ವತೋಮುಖ ಅಭಿವೃದ್ಧಿಯ ಕನಸನ್ನು ಕಂಡವರು ಮಹೇಶ್ ಶೆಟ್ಟಿಯವರು. ಇಂತಹ ಧರ್ಮ ಪರಿಪಾಲನೆ ಮಾಡುವಂತಹ ವ್ಯಕ್ತಿತ್ವ ನಮ್ಮ ಸಮಾಜಕ್ಕೆ ಅಗತ್ಯ. ಸಮಾಜಕ್ಕೆ ನ್ಯಾಯ ಒದಗಿಸುತ್ತಾ ಸಮಾಜ ಸ್ವಾಸ್ಥ್ಯ ಉಳಿಸುವಂತಹ ಕೆಲಸದಲ್ಲಿ ಒಟ್ಟಾಗಿ ಶ್ರಮಿಸೋಣ ಎಂದು ಅಭಿಪ್ರಾಯಪಟ್ಟರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಮಹೇಶ್ ಶೆಟ್ಟಿಯವರ ಸಂಘರ್ಷದ ಬದುಕು ಅವರನ್ನು ಅವಮಾನಿಸಿತ್ತು, ಅನುಮಾನಿಸಿತ್ತು. ಆದರೆ, ಇಂದು ಅದೇ ಬದುಕು ಅವರನ್ನು ಸನ್ಮಾನಿಸುತ್ತಿದೆ. ಇಂತಹ ಬದುಕು ಯುವಜನತೆಗೆ ಸ್ಫೂರ್ತಿಯಾಗಲಿ ಎಂದು ಹೇಳಿದರು.

ಮುಂಬೈ ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ಹರೀಶ್ ಜಿ. ಅಮೀನ್ ಮಾತನಾಡಿ, ಮಹೇಶ್ ಶೆಟ್ಟಿಯವರ ಸಮಾಜ ಸೇವೆ ಕೇವಲ ತನ್ನೂರು ಕಾರ್ಕಳಕ್ಕೆ‌ ಮಾತ್ರ ಸೀಮಿತವಾಗದೆ ಮುಂಬೈಯಲ್ಲೂ ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಸಂತಸದಾಯಕ ಎಂದು ಹರ್ಷ ವ್ಯಕ್ತಪಡಿಸಿದರು.

ಜಾಗತಿಕ ಬಂಟರ ಅಸೋಸಿಯೇಷನ್ ಅಧ್ಯಕ್ಷ ಐಕಳ ಹರೀಶ ಶೆಟ್ಟಿ ಮಾತನಾಡಿ, ಮಹೇಶ್‌ ಶೆಟ್ಟಿಯವರು ಒಂದು ಜಾತಿಗೆ ಸೀಮಿತವಾಗದೆ ಸಮಸ್ತ ಹಿಂದೂ ಸಮಾಜಕ್ಕಾಗಿ ಅವರು ಶ್ರಮಿಸುತ್ತಿದ್ದಾರೆ. ತಮ್ಮ ವಿಚಾರಧಾರೆಗಳಿಂದ ಕುಟುಂಬದ ಸಂಬಂಧದಲ್ಲಿ ಬಿರುಕು ಮೂಡದೆ ಸಮಾಜವನ್ನು ಒಗ್ಗೂಡಿಸಬೇಕು. ಈ ನಿಟ್ಟಿನಲ್ಲಿ ಮಹೇಶ್‌ ಶೆಟ್ಟಿಯವರ ಕುಟುಂಬ ಆದರ್ಶ ಎಂದು ಹೇಳಿದರು.

ಉದ್ಯಮಿ ಎನ್.‌ಟಿ. ಪೂಜಾರಿ, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಹಿರಿಯ ವಕೀಲ ಎಂ.‌ಕೆ. ವಿಜಯ್ ಕುಮಾರ್ ಸಂದರ್ಭೋಚಿತವಾಗಿ ಮಾತನಾಡಿದರು.

ಜನರ ವಿಶ್ವಾಸ ಗಳಿಸಿರುವ ಹೆಮ್ಮೆಯಿದೆ – ಮಹೇಶ್‌ ಶೆಟ್ಟಿ ಕುಡುಪುಲಾಜೆ
ಮಹೇಶ್ ಶೆಟ್ಟಿ ಕುಡುಪುಲಾಜೆ ಮಾತನಾಡಿ, ಜೀವನದಲ್ಲಿ ಏನು ಸಾಧಿಸಿದ್ದೆನೆಂದು ತಿಳಿದಿಲ್ಲ. ಆದರೆ, ಸಹಸ್ರ ಸಂಖ್ಯೆಯ ಜನರ ಪ್ರೀತಿ, ವಿಶ್ವಾಸ ಪಡೆದಿದ್ದೇನೆ ಎಂಬ ಹೆಮ್ಮೆಯಿದೆ. ನನ್ನ ಪ್ರತಿ ಕೆಲಸ ಕಾರ್ಯಗಳಿಗೆ ಕುಟುಂಬದವರು ನೀಡಿದ ಸಹಕಾರ, ಅವರ ಬೆಂಬಲವೇ ನನ್ನ‌ ಈ ಸಾಧನೆಗೆ ಪ್ರಮುಖ ಕಾರಣ ಎಂದು ಹೇಳಿದರು.
2014ರ ವಿಧಾನ ಸಭಾ ಚುನಾವಣೆ ಸಂದರ್ಭ ಸುನಿಲ್ ಕುಮಾರ್ ಅವರ ಕಾರ್ಯ ಶೈಲಿಗೆ ಇಂಪ್ರೆಸ್ ಆದೆ. ಹಿಂದುತ್ವ ಮತ್ತು ಅಭಿವೃದ್ಧಿಯ ಮೇಲೆ ಅವರಿಗಿರುವ ಬದ್ಧತೆ ನನಗಿಷ್ಟ. ಆದ್ದರಿಂದ ಅವರಿಗೆ ನಾನು ಯಾವಗಲೂ ನನ್ನನ್ನು ಸಮರ್ಪಿಸುತ್ತೇನೆ ಎಂದು ಹೇಳಿದರು.

ಬೋಳ ಪ್ರಭಾಕರ್ ಕಾಮತ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹೇಶ್‌ ಶೆಟ್ಟಿಯವರ ಪತ್ನಿ ಜಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುನಿಲ್‌ ಕೆ. ಆರ್. ಸ್ವಾಗತಿಸಿದರು. ಕರುಣಾಕರ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ, ನಿರಂಜನ್‌ ವಂದಿಸಿದರು.









































































































error: Content is protected !!
Scroll to Top