ಉಧಂಪುರದಲ್ಲಿ ಉಗ್ರರರೊಂದಿಗೆ ಗುಂಡಿನ ಚಕಮಕಿ – ಓರ್ವ ಯೋಧ ಹುತಾತ್ಮ

ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ದುಡು-ಬಸಂತ್‌ಗಢ ಪ್ರದೇಶದಲ್ಲಿ ಏ.24ರಂದು ಬೆಳಗ್ಗೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.

‘ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಇಂದು ಉಧಂಪುರದ ಬಸಂತ್‌ಗಢದಲ್ಲಿ ಜೆ & ಕೆ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಈ ವೇಳೆ ಉಗ್ರರು ಅಡಗಿದ್ದ ಸ್ಥಳವನ್ನು ಸುತ್ತುವರಿಯಲು ಆರಂಭಿಸಿದಾಗ ಭೀಕರ ಗುಂಡಿನ ಚಕಮಕಿ ನಡೆಯಿತು. ನಮ್ಮ ಯೋಧರೊಬ್ಬರು ಆರಂಭದಲ್ಲಿ ಗಂಭೀರ ಗಾಯಗೊಂಡರು. ಕೂಡಲೇ ಅಗತ್ಯ ವೈದ್ಯಕೀಯ ನೆರವು ನೀಡಲಾಯಿತು. ಆದರೆ ಅವರು ತೀವ್ರ ಗಾಯಗೊಂಡಿದ್ದರಿಂದ ಹುತಾತ್ಮರಾದರು. ಸದ್ಯ ಕಾರ್ಯಾಚರಣೆಗಳು ಮುಂದುವರೆದಿವೆʼ ಎಂದು ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ‘ಎಕ್ಸ್‌ʼನಲ್ಲಿ ತಿಳಿಸಿದೆ.

ಗುಪ್ತಚರ ಮಾಹಿತಿ ಆಧರಿಸಿ ಸೇನೆ ಕಾರ್ಯಾಚರಣೆ ಆರಂಭಿಸಿದೆ. ಕನಿಷ್ಠ ಇಬ್ಬರು ಉಗ್ರರು ಅಡಗಿರುವ ಶಂಕೆ ವ್ಯಕ್ತವಾಗಿದೆ. ಎರಡು ದಿನಗಳ ಹಿಂದೆ ನಡೆದ ಪಹಲ್ಗಾಮ್ ಭಯಾನಕ ದಾಳಿಯ ನಂತರ ಈ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ 26 ಜನರು ಸಾವನ್ನಪ್ಪಿದ್ದರು. ಇದಾದ ಬಳಿಕ ಕಣಿವೆ ರಾಜ್ಯದಲ್ಲಿ ಭದ್ರತೆ ಹೆಚ್ಚಿಸಲಾಗಿದೆ





























































































































error: Content is protected !!
Scroll to Top