ಟೀಮ್ ಇಂಡಿಯಾ ಆಟಗಾರರೊಂದಿಗೆ ಬಿಸಿಸಿಐ ಒಪ್ಪಂದ ಪ್ರಕಟ

ದೆಹಲಿ : ಟೀಮ್ ಇಂಡಿಯಾ ಆಟಗಾರರ ಜೊತೆಗಿನ ಕೇಂದ್ರ ಒಪ್ಪಂದವನ್ನು ಬಿಸಿಸಿಐ ಪ್ರಕಟಿಸಿದೆ. ಹೊಸ ಒಪ್ಪಂದದಲ್ಲಿ ಒಟ್ಟು 34 ಆಟಗಾರರು ಸ್ಥಾನ ಪಡೆದಿದ್ದಾರೆ. 34 ಆಟಗಾರರನ್ನು 4 ಶ್ರೇಣಿಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಬ್ಬ ಆಟಗಾರನಿಗೆ ಅವರ ದರ್ಜೆಗೆ ಅನುಗುಣವಾಗಿ ಬಿಸಿಸಿಐ ವಾರ್ಷಿಕ ಮೊತ್ತವನ್ನು ನೀಡಲಾಗುತ್ತದೆ.

ಎ+ ಗ್ರೇಡ್​ನಲ್ಲಿರುವ ಆಟಗಾರರಿಗೆ ಗರಿಷ್ಠ 7 ಕೋಟಿ ರೂ. ನೀಡಲಾಗುತ್ತದೆ. ಬಿಸಿಸಿಐ ಕೇಂದ್ರ ಒಪ್ಪಂದದ ಎ+ ದರ್ಜೆಯಲ್ಲಿ ಒಟ್ಟು 4 ಆಟಗಾರರಿಗೆ ಸ್ಥಾನ ನೀಡಲಾಗಿದೆ. ಈ ನಾಲ್ವರು ಆಟಗಾರರಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇರುವುದು ವಿಶೇಷ. ಹಾಗೆಯೇ ಎ ಗ್ರೇಡ್​ನ ಆಟಗಾರರು 5 ಕೋಟಿ ರೂ. ಮತ್ತು ಬಿ ಗ್ರೇಡ್ ಆಟಗಾರರಿಗೆ 3 ಕೋಟಿ ರೂ. ನಿಗದಿ ಮಾಡಲಾಗಿದೆ. ಇನ್ನು ಸಿ ಗ್ರೇಡ್​ನಲ್ಲಿರುವ ಆಟಗಾರರು ವಾರ್ಷಿಕವಾಗಿ ತಲಾ 1 ಕೋಟಿ ರೂ. ಪಡೆಯುತ್ತಾರೆ.

ಎ + ಗ್ರೇಡ್​ನಲ್ಲಿರುವ ಆಟಗಾರರು
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್​ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ

ಎ ಗ್ರೇಡ್​ನಲ್ಲಿರುವ ಆಟಗಾರರು
ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭ್​ಮನ್ ಗಿಲ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ ಮತ್ತು ರಿಷಭ್ ಪಂತ್

ಬಿ ಗ್ರೇಡ್​ನಲ್ಲಿರುವ ಆಟಗಾರರು
ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಮತ್ತು ಯಶಸ್ವಿ ಜೈಸ್ವಾಲ್.

ಸಿ ಗ್ರೇಡ್​ನಲ್ಲಿರುವ ಆಟಗಾರರು
ಇಶಾನ್ ಕಿಶನ್, ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಿವಂ ದುಬೆ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ರಜತ್ ಪಾಟಿದಾರ್, ಧ್ರುವ್ ಜುರೆಲ್, ಸರ್ಫರಾಝ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಅಭಿಷೇಕ್ ಶರ್ಮಾ, ಆಕಾಶ್ ದೀಪ್, ವರುಣ್ ಚಕ್ರವರ್ತಿ.

ಈ ಪಟ್ಟಿಯಲ್ಲಿ ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಕೂಡ ಕಾಣಿಸಿಕೊಂಡಿದ್ದಾರೆ. ಕಳೆದ ಸಾಲಿನ ಒಪ್ಪಂದದಿಂದ ಇಬ್ಬರನ್ನು ಕೈ ಬಿಡಲಾಗಿತ್ತು. ಬಿಸಿಸಿಐ ಹಾಗೂ ಟೀಮ್ ಇಂಡಿಯಾ ಆಟಗಾರರ ನಡುವಣ ಈ ಕೇಂದ್ರ ಒಪ್ಪಂದವು ಅಕ್ಟೋಬರ್ 1, 2024 ರಿಂದ ಸೆಪ್ಟೆಂಬರ್ 30, 2025 ರವರೆಗೆ ಚಾಲ್ತಿಯಲ್ಲಿ ಇರಲಿದೆ. ಇದಾದ ಬಳಿಕ ಮತ್ತೆ ಒಪ್ಪಂದವನ್ನು ಪುನರ್​ ರೂಪಿಸಲಾಗುತ್ತದೆ.









































































































error: Content is protected !!
Scroll to Top