ಇವುಗಳಲ್ಲಿ ಕೆಲವನ್ನಾದರೂ ಮಾಡಿ ಹ್ಯಾಪಿನೆಸ್ ಹೆಚ್ಚು ಮಾಡಿಕೊಳ್ಳಿ
- ನಾವು ಕಲಿತ ಪ್ರೈಮರಿ ಶಾಲೆಯ ಜಗುಲಿಯ ಮೇಲೆ ವಾರಕ್ಕೊಮ್ಮೆ ಹೋಗಿ ಒಂದಷ್ಟು ಹೊತ್ತು ಮೌನವಾಗಿ ಕುಳಿತು ಬರುವುದು.
- ನಮ್ಮೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಯಾವುದಾದರೂ ಐದು ಜನರಿಗೆ ವಾರಕ್ಕೊಮ್ಮೆ ಕಾಲ್ ಮಾಡಿ ಕ್ಯಾಶುವಲ್ ಆಗಿ ಸ್ವಲ್ಪ ಹೊತ್ತು ಪ್ರೀತಿಯಿಂದ ಮಾತನಾಡುವುದು.
- ದಿನಕ್ಕೊಂದು ಹದಿನೈದು ನಿಮಿಷಗಳ ಕಾಲ ಬಿಡುವು ಮಾಡಿಕೊಂಡು ಕಿವಿಗೆ ಇಯರ್ ಫೋನ್ ಚುಚ್ಚಿಕೊಂಡು ಮಾಧುರ್ಯದ ಹಾಡುಗಳನ್ನು ಕೇಳುವುದು.
- ಹಸಿರು ಪರಿಸರದ ನಡುವೆ ಮೌನವಾಗಿರುವ ಒಂದು ಆಪ್ತವಾದ ಸ್ಥಳವನ್ನು ಆಯ್ದು ಅಲ್ಲಿ ಹೋಗಿ ಕೂತು ಬಿಡುವುದು ಮತ್ತು ಕಣ್ಣು ಮುಚ್ಚಿ ಏಕಾಂತವನ್ನು ಫೀಲ್ ಮಾಡಿಕೊಳ್ಳುವುದು.
- ವಾರಕ್ಕೊಮ್ಮೆ ಯಾವುದಾದರೂ ಅನಾಥಾಶ್ರಮದ ಮಕ್ಕಳೊಂದಿಗೆ ಅಥವಾ ವೃದ್ಧಾಶ್ರಮದ ಹಿರಿಯರೊಂದಿಗೆ ಸ್ವಲ್ಪ ಹೊತ್ತು ಕಾಲ ಕಳೆಯುವುದು. ಅವರೊಂದಿಗೆ ಸಾಧ್ಯವಾದರೆ ಊಟ ಮಾಡಿ ಬರುವುದು.
- ನೀವು ಶಾಲೆ ಅಥವಾ ಕಾಲೇಜಿನಲ್ಲಿ ಮೊದಲು ಪ್ರೀತಿ ಮಾಡಿದ ಹುಡುಗಿಗೆ/ ಹುಡುಗನಿಗೆ ನವಿರಾದ ಭಾಷೆಯಲ್ಲಿ ಒಂದು ಪ್ರೇಮಪತ್ರವನ್ನು ಬರೆಯುವುದು ಮತ್ತು ಅದನ್ನು ಪೋಸ್ಟ್ ಮಾಡದೇ ಹರಿದು ಬಿಸಾಡುವುದು.
- ಸಮುದ್ರದ ದಡಕ್ಕೆ ಹೋಗಿ ಮರಳಿನ ಮೇಲೆ ಸೊಗಸಾದ ಚಿತ್ತಾರಗಳನ್ನು ಬರೆಯುವುದು ಮತ್ತು ಅಲೆಗಳಿಗೆ ಕಾದು ಕುಳಿತುಕೊಳ್ಳುವುದು.
- ದಿನಕ್ಕೊಂದು ಪುಟ ಆದರೂ ನಮ್ಮ ದಿನಚರಿಯನ್ನು ಬರೆಯುವುದು.
- ರಾತ್ರಿ ಮಲಗುವ ಮೊದಲು ಆ ದಿನದ ಅವಧಿಯಲ್ಲಿ ಹ್ಯಾಪಿನೆಸ್ ಕೊಟ್ಟಿರುವ ವ್ಯಕ್ತಿಗಳನ್ನು ಕೌಂಟ್ ಮಾಡಿ ಮನಸ್ಸಿನಲ್ಲಿಯೇ ಥ್ಯಾಂಕ್ಸ್ ಹೇಳುವುದು.
- ನಮ್ಮ ಭೂತಕಾಲದ ಬಗ್ಗೆ ಯಾವುದೇ ವಿಷಾದವನ್ನು ಇಟ್ಟುಕೊಳ್ಳದೇ ಇರುವುದು ಮತ್ತು ಭವಿಷ್ಯದ ಬಗ್ಗೆ ಹೆಚ್ಚು ಆತಂಕ ಮಾಡದೇ ಇರುವುದು.
- ಭತ್ತದ ಹಸಿರು ಗದ್ದೆಗಳ ನಡುವೆ ನಿಂತು ಅದರ ಬದುಗಳ ಮೇಲೆ ಖುಷಿಯಿಂದ ಜಿಗಿಯುತ್ತಾ ಹೋಗುವುದು.
- ತುಂಬಾ ಪಾಸಿಟಿವ್ ಎನರ್ಜಿ ಇರುವ ಒಂದು ಫಿಲ್ಮನ್ನು ಕಾಲೇಜು ವಿದ್ಯಾರ್ಥಿಗಳ ವಿಸಿಲ್ ಮತ್ತು ಕಾಮೆಂಟಗಳ ನಡುವೆ ಕೂತು ನೋಡುವುದು.
- ಯಾರನ್ನು ಕೂಡ ತಿದ್ದಲು ಹೋಗದೇ ಅವರು ಹೇಗೆ ಇರುತ್ತಾರೋ ಹಾಗೆಯೇ ಸ್ವೀಕರಿಸುವುದು.
- ನಾವು ಇಷ್ಟ ಪಡುವ ವ್ಯಕ್ತಿಗಳಿಗೆ ದಿನದ ಒಂದಿಷ್ಟು ಹೊತ್ತು ಮೀಸಲು ಇಡುವುದು.
- ಸಣ್ಣ ಮಕ್ಕಳನ್ನು ಮುಂದೆ ಕೂರಿಸಿ ಅವರಿಗೆ ಚಂದ ಚಂದದ ಕಾಲ್ಪನಿಕ ಕಥೆ ಹೇಳುವುದು. ಸಾಧ್ಯವಾದರೆ ನಮ್ಮ ಬಾಲ್ಯದ ಘಟನೆಗಳನ್ನು ನೆನಪು ಮಾಡಿಕೊಳ್ಳುವುದು.
- ಯಾವ ಇಗೋ ಕೂಡ ಇಟ್ಟುಕೊಳ್ಳದೆ ತನ್ನ ಮೇಲೆಯೇ ಜೋಕುಗಳನ್ನು ಪ್ರಯೋಗ ಮಾಡಿ ಗಟ್ಟಿಯಾಗಿ ನಗುವುದು.
- ತನಗೆ ಅದನ್ನು ಕೊಡು, ಇದನ್ನು ಕೊಡು ದೇವರೇ ಎಂದು ಬೇಡಿಕೊಳ್ಳದೆ ಇರುವುದು.
- ತಾನೊಂದು ಸೆಲೆಬ್ರಿಟಿ ಎಂಬ ಕಿರೀಟವನ್ನು ಕಳಚಿ ಎಲ್ಲರ ಜೊತೆಗೂ ಚಂದವಾಗಿ ಬೆರೆಯುವುದು.
- ಸಾಲವೆಂದು ಯಾರಿಗೂ ಹಣ ಕೊಡದೆ ಇರುವುದು. ಕೊಟ್ಟರೆ ಹಿಂದೆ ಕೇಳದೇ ಇರುವುದು.
- ಜೀವನದ ಸಣ್ಣ ಸಣ್ಣ ಸಾಧನೆಗಳನ್ನು ಸೆಲೆಬ್ರೇಟ್ ಮಾಡುವುದು. ಉದಾಹರಣೆಗೆ ಹೊಸ ಗೆಳೆಯ/ ಗೆಳತಿಯ ಸಂಪಾದನೆ ಮಾಡಿದ್ದು, ಮೊದಲ ಬಾರಿ ಬೈಕ್ ಓಡಿಸಿದ್ದು, ಎಷ್ಟೋ ವರ್ಷಗಳ ಅನಂತರ ಸಿಕ್ಕಿದ ವ್ಯಕ್ತಿಯ ಗುರುತು ಹಿಡಿದು ಮಾತಾಡಿಸಿದ್ದು…
- ಯಾರ ಜೊತೆಗೂ ಸ್ಪರ್ಧೆ ಮಾಡದೇ ಇರುವುದು. ಸ್ವತಃ ನಿಮ್ಮೊಂದಿಗೆ ಕೂಡ.
- ತಾನು ಮಾಡಿದ್ದು ಎಲ್ಲವೂ ಸರಿ ಇದೆ. ಬೇರೆಯವರು ಮಾಡಿದ್ದು ಸರಿಯಲ್ಲ ಎಂಬ ಭ್ರಮೆಗಳಿಂದ ತಕ್ಷಣವೇ ಹೊರಬರುವುದು.
- ಹೆಂಡತಿ ಅಥವಾ ಗಂಡ ಹೇಳಿದ್ದನ್ನು ಪೂರ್ತಿಯಾಗಿ ನಂಬುವುದು ಅಥವಾ ನಂಬಿದ ಹಾಗೆ ಅಭಿನಯ ಆದರೂ ಮಾಡುವುದು.
- ಎಲ್ಲರ ಟೀಕೆ, ಕಾಮೆಂಟ್ಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವುದು ಮತ್ತು ಯಾರ ಜೊತೆಗೂ ವಾದವನ್ನು ಮಾಡದಿರುವುದು.
- ಯಾವುದೇ ಸಂಬಂಧ ಕಳೆದುಕೊಳ್ಳುವ ಮೊದಲು ನೂರು ಬಾರಿ ಯೋಚನೆ ಮಾಡುವುದು. ಕಳಚಿಕೊಂಡ ಅನಂತರ ಅವುಗಳ ಬಗ್ಗೆ ಒಂದಿನಿತೂ ಯೋಚನೆ ಮಾಡದೆ ಇರುವುದು.
- ಯಾರ ಬಗ್ಗೆಯೂ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳದೇ ಇರುವುದು.
- ಮುಜುಗರ ಪಟ್ಟುಕೊಳ್ಳದೆ ರಸ್ತೆಬದಿಯ ಪಾನಿಪುರಿ ಸ್ಟಾಲಿನಲ್ಲಿ ಪಾನಿಪುರಿ ತೆಗೆದುಕೊಂಡು ಚಪ್ಪರಿಸಿ ಚಪ್ಪರಿಸಿ ತಿನ್ನುವುದು.
- ದಿನಕ್ಕೆ ಹದಿನೈದು ನಿಮಿಷ ಬಿಡುವು ಮಾಡಿಕೊಂಡು ಅಮ್ಮನ ಮಡಿಲಲ್ಲಿ ಮಗುವಾಗಿ ಮಲಗಿ ಬಿಡುವುದು.
- ಬಟ್ಟೆ ಅಂಗಡಿಯಲ್ಲಿ ಸೀರೆ ಇತ್ಯಾದಿಯನ್ನು ಆಯ್ಕೆ ಮಾಡಲು ಹೋದಾಗ ಆ ಕೆಲಸವನ್ನು ಹೆಂಡತಿಗೇ ಬಿಟ್ಟು ಪಕ್ಕದಲ್ಲಿ ಎಟಿಎಂ ಯಂತ್ರದ ಹಾಗೆ ನಿಂತು ಬಿಡುವುದು.
- ಪ್ರೀತಿಪಾತ್ರರು ವಾದಕ್ಕೆ ಇಳಿದಾಗ ಆದಷ್ಟು ಬೇಗನೇ ಸೋತು ಬಿಡುವುದು.
ಇವುಗಳು ನನ್ನ ಕೆಲವು ಸಲಹೆಗಳು ಮಾತ್ರ. ಜೀವನದ ಸಣ್ಣ ಸಣ್ಣ ಸಂಗತಿಗಳಲ್ಲಿ ಹ್ಯಾಪಿನೆಸ್ ಹುಡುಕುವುದು ನನಗೆ ಅಭ್ಯಾಸ ಆಗಿದೆ. ನಿಮಗೆ ತುಂಬಾ ಹ್ಯಾಪಿನೆಸ್ ದೊರೆಯಲಿ ಎನ್ನುವುದೇ ನನ್ನ ಪ್ರಾರ್ಥನೆ.









































