ಮಾನವ ಕಂಪ್ಯೂಟರ್ ಶಕುಂತಲಾ ದೇವಿ

ಶಾಲಾ ಶಿಕ್ಷಣವನ್ನು ಪಡೆಯದ ಆಕೆಯ ಮೇಧಾಶಕ್ತಿಗೆ ಜಗತ್ತೇ ಬೆರಗಾಗಿತ್ತು !

ಬೆಂಗಳೂರಿನ ಅತಿ ಸಾಮಾನ್ಯ ಕುಟುಂಬದ ಒರ್ವ ಹುಡುಗಿ ತನ್ನ ಅಸಾಮಾನ್ಯವಾದ ಗಣಿತ ಸಾಮರ್ಥ್ಯ ಹಾಗೂ ಜ್ಞಾಪಕ ಶಕ್ತಿಯ ಮೂಲಕ ವಿದೇಶಗಳ ಶಕ್ತಿಶಾಲಿ ಕಂಪ್ಯೂಟರ್‌ಗಳನ್ನು ಸೋಲಿಸಿದ್ದು ಅದ್ಭುತವಲ್ಲವೇ ? ಆಕೆ ಶಕುಂತಲಾ ದೇವಿ.

ಆಕೆ ಸಾಂಪ್ರದಾಯಿಕ ಶಿಕ್ಷಣ ಪಡೆಯಲೇ ಇಲ್ಲ
1929 ನವೆಂಬರ್ 4ರಂದು ಶಕುಂತಲಾ ಅವರು ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆ ಸರ್ಕಸ್ ಕಂಪೆನಿಯಲ್ಲಿ ಕ್ರೂರ ಪ್ರಾಣಿಗಳನ್ನು ಪಳಗಿಸುವ ಉದ್ಯೋಗದಲ್ಲಿದ್ದರು. ಮೂರು ವರ್ಷ ಪ್ರಾಯದಲ್ಲಿ ಮಗಳ ಅಸಾಮಾನ್ಯ ಗಣಿತ ಪ್ರತಿಭೆಯು ಅಪ್ಪನ ಗಮನಕ್ಕೆ ಬಂದಿತು. ಉದ್ದುದ್ದ ಸಂಖ್ಯೆಗಳ ಗುಣಾಕಾರ, ಭಾಗಾಕಾರಗಳನ್ನು ಆಕೆ ಪಟಪಟ ಮೈಂಡಲ್ಲಿ ಮಾಡಿ ಉತ್ತರ ಹೇಳುತ್ತಿದ್ದಳು. ಯಾವ ವರ್ಷದ ಯಾವ ದಿನಾಂಕ ಕೇಳಿದರೂ ಅದು ಯಾವ ವಾರ ಅಂತ ಥಟ್ಟನೆ ಹೇಳುತ್ತಿದ್ದಳು. ಅಪ್ಪ ತನ್ನ ಸರ್ಕಸ್ ಕೆಲಸ ಬಿಟ್ಟು ಮಗಳ ಪ್ರತಿಭೆಯನ್ನು ಬಳಸಿ ರೋಡ್ ಶೋಗಳನ್ನು ಮಾಡಲು ತೊಡಗಿದರು. 6ನೇ ವರ್ಷದಲ್ಲಿ ಮೈಸೂರು ವಿ.ವಿ.ಯಲ್ಲಿ ನೂರಾರು ವಿದ್ಯಾರ್ಥಿಗಳ ಮುಂದೆ ಅವಳ ಶೋ ಸೂಪರ್ ಹಿಟ್ ಆಯಿತು. 15ನೇ ವರ್ಷಕ್ಕೆ ಅವಳು ಲಂಡನ್ನಿಗೆ ಅಪ್ಪನ ಜೊತೆಗೆ ಹೋದಳು. ಮುಂದೆ ಐರೋಪ್ಯ ದೇಶಗಳು, ಅಮೇರಿಕಾ ಆಕೆಯ ಗಣಿತ ಪ್ರತಿಭೆಗೆ ದಂಗಾದವು.

201 ಅಂಕಿಗಳ ದೊಡ್ಡ ಸಂಖ್ಯೆಯ 23ನೇ ಘಾತ ಮೂಲವನ್ನು 50 ಸೆಕೆಂಡುಗಳ ಅಲ್ಪಾವಧಿಯಲ್ಲಿ ಆಕೆ ಘೋಷಿಸಿದಾಗ ಅದನ್ನು ತಾಳೆ ನೋಡಲು ಅಮೇರಿಕಾದ ಮಹಾ ವಿಜ್ಞಾನಿಗಳು, ಆಧುನಿಕ ಕಂಪ್ಯೂಟರ್ ಪ್ರೊಗ್ರಾಮ್ ರೂಪಿಸಬೇಕಾಯಿತು ಮತ್ತು ಆ ಉತ್ತರವು ಅತ್ಯಂತ ನಿಖರವಾಗಿತ್ತು. 61,629,875 ಇದರ ಘನಮೂಲವನ್ನು, 170,859,375 ಇದರ ಏಳನೆ ಘಾತಮೂಲವನ್ನು ಕೂಡ ಆಕೆ ಕೆಲವೇ ಸೆಕೆಂಡುಗಳಲ್ಲಿ ಘೋಷಿಸಿದಳು. ಆ ಉತ್ತರಗಳು ಆಕೆಗೆ ಹೇಗೆ ಹೊಳೆಯುತ್ತಿದ್ದವು ಅನ್ನುವುದು ಇಂದಿಗೂ ನಿಗೂಢವಾದ ಅಂಶ.

ಅವರ ಗಿನ್ನೆಸ್ ದಾಖಲೆಯ ಪ್ರದರ್ಶನ ನಡೆದದ್ದು ಲಂಡನ್ನಿನಲ್ಲಿ
ಅಂದು ಕಂಪ್ಯೂಟರ್ ರಾಂಡಮ್ ಆಗಿ ನೀಡಿದ 13 ಅಂಕೆಗಳ ಎರಡು ದೊಡ್ಡ ಸಂಖ್ಯೆಗಳ ಗುಣಾಕಾರವನ್ನು ಆಕೆ ಮೈಂಡಲ್ಲಿ ಮಾಡಿ 23 ಸೆಕೆಂಡಿನಲ್ಲಿ ಉತ್ತರವನ್ನು ಘೋಷಿಸಿದಾಗ ಬಿ.ಬಿ.ಸಿ.ಯ ಹಲವರು ಆಕೆಯ ಉತ್ತರ ತಪ್ಪಾಗಿರಬಹುದು ಎಂದರು. ಅಪ್ಪಟ ಭಾರತೀಯ ಪ್ರತಿಭೆಯನ್ನು ಅವಮಾನ ಮಾಡುವುದು ಅವರ ಉದ್ದೇಶ ಆಗಿರಬಹುದು. ಆದರೆ ಮುಂದೆ ಆಕೆಯ ಉತ್ತರ ಸರಿ ಎಂದು ಪ್ರೂವ್ ಆದಾಗ ಬಿ.ಬಿ.ಸಿ. ಆಕೆಯ ಕ್ಷಮೆ ಕೇಳಿತು ಮಾತ್ರವಲ್ಲ, ಗಿನ್ನೆಸ್ ಪುಸ್ತಕದ 1982ನೆಯ ಆವೃತ್ತಿಯಲ್ಲಿ ಶಕುಂತಲಾದೇವಿ ಅವರ ಹೆಸರು ದಾಖಲಾಯಿತು.

ಆ ರೀತಿಯ ಅಸಾಧಾರಣವಾದ ಗಣಿತ ಪ್ರತಿಭೆಯು ನನಗೆ ದೇವರು ಕೊಟ್ಟ ವರ ಎಂದು ಅವರು ಹೇಳುತ್ತಿದ್ದರು. ಆಕೆಗೆ ಯಾವ ಸಾಂಪ್ರದಾಯಿಕ ಶಿಕ್ಷಣ ಕೂಡ ಇರಲಿಲ್ಲ. ಆದರೆ ಆಕೆಯ ಮಾತುಗಳನ್ನು ಕೇಳಿದವರು, ಗಣಿತದ ಸ್ಟೇಜ್ ಶೋಗಳನ್ನು ನೋಡಿದವರು, ಆಕೆ ಬರೆದ ಪುಸ್ತಕಗಳನ್ನು ಓದಿದವರು ನಿಬ್ಬೆರಗಾಗಿ ಬಿಡುತ್ತಿದ್ದರು. ಆಕೆ ಸಾವಿರಾರು ಸ್ಟೇಜ್ ಶೋಗಳನ್ನು ನೀಡಿದ್ದರು. ಎಲ್ಲಿಯೂ ಆಕೆಯು ಉತ್ತರ ಕೊಡದೆ ಹೋದದ್ದು, ಕೊಟ್ಟ ಉತ್ತರ ತಪ್ಪಾದದ್ದು, ಆಕೆ ಉತ್ತರ ಕೊಡಲು ನಿಧಾನ ಮಾಡಿದ್ದು, ಬರೆದು ಉತ್ತರವನ್ನು ಪಡೆದದ್ದು ಇಲ್ಲವೇ ಇಲ್ಲ ಅಂದರೆ ಶಕುಂತಲಾದೇವಿಯ ಅಗಾಧ ಪ್ರತಿಭೆ ನಮಗೆ ಅರಿವಾಗಬಹುದು.

ಪ್ರತಿಭೆಯಷ್ಟೇ ನಿಗೂಢ ಅವರ ಬದುಕು
ಆಕೆಯ ಗಣಿತ ಪ್ರತಿಭೆಯಷ್ಟೇ ಆಕೆಯ ಬದುಕು ಕೂಡ ಅತ್ಯಂತ ನಿಗೂಢವಾಗಿತ್ತು. ಪಾರಿತೋಷ್ ಬ್ಯಾನರ್ಜಿ ಎಂಬ ಐ.ಎ.ಎಸ್. ಅಧಿಕಾರಿಯನ್ನು ಮದುವೆಯಾದ ಅವರು ಕೆಲವೇ ವರ್ಷಗಳಲ್ಲಿ ವಿಚ್ಛೇದನ ಪಡೆದರು. World of Homosexuals ಎಂಬ ಪುಸ್ತಕ ಬರೆದು ಕೆಲವರ ಕೆಂಗಣ್ಣಿಗೆ ಗುರಿಯಾದರು! Fun with numbers ಮತ್ತು Astrology for you ಅವರ ಇನ್ನೆರಡು ಜನಪ್ರಿಯ ಪುಸ್ತಕಗಳು. ಆಕೆ ಜ್ಯೋತಿರ್ವಿಜ್ಞಾನದ ನೆರವು ಪಡೆದು ಜ್ಯೋತಿಷ್ಯ ಹೇಳಿದ ಸಂಗತಿಗಳು ನೂರಕ್ಕೆ ನೂರು ನಿಜವಾಗಿವೆ. ಒಮ್ಮೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋತದ್ದೂ ಉಂಟು. ನಾನು ಆಕೆಯ ಒಂದು ಸ್ಟೇಜ್ ಶೋ ಬೆಂಗಳೂರಿನಲ್ಲಿ ನೋಡಿ ಬೆರಗಾಗಿದ್ದೆ. ಆಕೆಯ ಅಗಾಧವಾದ ಆತ್ಮವಿಶ್ವಾಸ, ನಿಖರವಾದ ಮಾತು, ನೇರವಾದ ನಿಲುವು ಇವೆಲ್ಲವೂ ನನಗೆ ಇಂದಿಗೂ ಬೆರಗುಗಳಲ್ಲಿ ಬೆರಗು ಆಗಿದೆ.

ಶಕುಂತಲಾ ದೇವಿ 2013ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು. ಗೂಗಲ್ ಸಂಸ್ಥೆಯು ಡೂಡಲ್ ರೂಪಿಸುವುದರ ಮೂಲಕ ಆಕೆಯನ್ನು ಸ್ಮರಿಸಿತು. ಆಕೆಯ ಜೀವನಾಧಾರಿತ ಹಿಂದಿ ಸಿನಿಮಾ ತೆರೆಗೆ ಬಂದಿದ್ದು ಖ್ಯಾತ ನಟಿ ವಿದ್ಯಾ ಬಾಲನ್ ಅವರು ಶಕುಂತಲಾ ದೇವಿ ಪಾತ್ರ ವಹಿಸಿದ್ದು ಆ ಸಿನೆಮಾ ಕೂಡ ಹಿಟ್ ಆಗಿತ್ತು.





























































































































error: Content is protected !!
Scroll to Top