ಪರಿಸರ ಸಂರಕ್ಷಣೆ – ಕಾನೂನು ಮಾಹಿತಿ

ಭೂಮಿಯಲ್ಲಿ ವಾಸಿಸುವ ಪ್ರತಿಯೊಂದು ಜೀವಿಗಳಿಗೆ ಅದರಲ್ಲಿಯೂ ಮನುಷ್ಯರಿಗೆ ಆರೋಗ್ಯ ಮತ್ತು ನೆಮ್ಮದಿಯ ಜೀವನವನ್ನು ಸಾಗಿಸಲು ಶುದ್ಧವಾದ ನೀರು, ಗಾಳಿ, ಮಣ್ಣು ಹಾಗೂ ಕರ್ಕಶ ರಹಿತ ವಾತಾವರಣದ ಅಗತ್ಯವಿದೆ. ಪರಿಸರದ ಸುರಕ್ಷತೆ ಮತ್ತು ಉನ್ನತೀಕರಣ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಗಮನದಲ್ಲಿರಿಸಿ ಕೇಂದ್ರ ಸರಕಾರವು 23-05-1986 ರಂದು ಪರಿಸರ (ಸಂರಕ್ಷಣೆ) ಅಧಿನಿಯಮ, 1986 ಎಂಬ ಕಾನೂನನ್ನು ಜ್ಯಾರಿಗೆ ತಂದಿರುತ್ತದೆ. ಪರಿಸರದ ಸುರಕ್ಷತೆ ಮತ್ತು ಉನ್ನತೀಕರಣ, 1972 ರಲ್ಲಿ ನಡೆದ ಮಾನವ ಪರಿಸರದ ಕುರಿತಂತೆ ವಿಶ್ವ ಸಂಸ್ಥೆಯ ಸಮ್ಮೇಳನದಲ್ಲಿ ಭಾರತವು ಸಹಾ ಪ್ರತಿನಿಧಿಸಿದ್ದು ಈ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಅನುಷ್ಠಾನಗೊಳಿಸಲು ಮತ್ತು ಮಾನವ ಪರಿಸರದ ರಕ್ಷಣೆ ಮತ್ತು ಸುಧಾರಣೆಗೆ ಮನುಷ್ಯರು ಮತ್ತು ಇತರ ಎಲ್ಲಾ ಜೀವಿಗಳು ಈಗಿನ ಕೈಗಾರಿಕಾ ಯುಗದಲ್ಲಿ ಎದುರಿಸಬೇಕಾಗಬಹುದಾದ ಅಪಾಯವನ್ನು ತಡೆಗಟ್ಟಲು ಪರಿಸರ ಸಂರಕ್ಷಣೆ ಮತ್ತು ಸುಧಾರಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮತ್ತು ಈ ಉದ್ದೇಶಕ್ಕಾಗಿ ಪರಿಸರ ಸಂರಕ್ಷಣಾ ಕ್ರಮಗಳನ್ನು ಜಾರಿಗೆ ತರಲು ಕೇಂದ್ರ ಸರಕಾರಕ್ಕೆ ವಿಶೇಷ ಅಧಿಕಾರವನ್ನು ನೀಡುವ, ದೇಶದ ಪರಿಸರ ಶಾಸನಕ್ಕೆ ಹೆಚ್ಚಿನ ಸ್ಥಿರತೆ ಮತ್ತು ಸ್ಪಷ್ಟತೆಯನ್ನು ನೀಡುವುದಕ್ಕಾಗಿ ಸಮಗ್ರ ಚೌಕಟ್ಟನ್ನು ಸ್ಥಾಪಿಸುವ ಹಾಗೂ ಪರಿಸರ, ಆರೋಗ್ಯ ಮತ್ತು ಸುರಕ್ಷತೆಗೆ ಬೆದರಿಕೆ ಹಾಕುವ ವ್ಯಕ್ತಿಗಳನ್ನು ತಡೆಯುವ ಇತ್ಯಾದಿ ಉದ್ದೇಶದಿಂದ ಕೇಂದ್ರ ಸರಕಾರವು ಮೇಲ್ಕಾಣಿಸಿದ ಕಾನೂನನ್ನು ದೇಶಾದ್ಯಂತ ಜ್ಯಾರಿಗೆ ತಂದಿರುತ್ತದೆ.

ಈ ಕಾನೂನಿನ ಪ್ರಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಸರ ಸಂರಕ್ಷಣೆ ಮತ್ತು ಸುಧಾರಣೆಗಾಗಿ ಅಂದರೆ ಪರಿಸರ ಮಾಲಿನ್ಯವನ್ನು ತಡೆಗಟ್ಟುವ, ನಿಯಂತ್ರಿಸುವ ಮತ್ತು ಉಪಶಮನಗೊಳಿಸುವ ಉದ್ಧೇಶಕ್ಕಾಗಿ ವಿವಿಧ ಕ್ರಮವನ್ನು ಕೈಗೊಳ್ಳುವ ಕಾನೂನು ಬದ್ಧ ಅಧಿಕಾರವನ್ನು ಹೊಂದಿರುತ್ತದೆ. ಈ ಅಧಿನಿಯಮದ ಪ್ರಕಾರ ಸರಕಾರವು ವಿವಿಧ ಪ್ರಾಧಿಕಾರಗಳನ್ನು ನೇಮಿಸಿದ್ದು ಇದರ ಅಧಿಕಾರಿಗಳ ಮೂಲಕ ಪರಿಸರದ ಮಾಲಿನ್ಯವನ್ನು ತಡೆಗಟ್ಟಲು, ನಿಯಂತ್ರಿಸಲು, ಉಪಶಮನಗೊಳಿಸಲು ದೇಶಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜ್ಯಾರಿಗೊಳಿಸಿ ಪರಿಸರದ ವಾತಾವರಣದ ಗುಣಮಟ್ಟವನ್ನು ಹೆಚ್ಚಿಸಲು ಅಥವಾ ನಿಯಂತ್ರಿಸಲು, ಕೈಗಾರಿಕೆ ಅಥವಾ ಪರಿಸರವನ್ನು ಹಾಳು ಮಾಡುವ ಇತರ ಯಾವುದೇ ಅಪಾಯಕಾರಿ ಚಟುವಟಿಕೆಗಳನ್ನು ನಿಯಂತ್ರಿಸಲು, ಕೆಲವು ನಿರ್ದಿಷ್ಟ ಪ್ರದೇಶಗಳನ್ನು ಕೈಗಾರಿಕಾ ಯುಕ್ತ ಪ್ರದೇಶಗಳನ್ನಾಗಿ ಘೋಷಿಸಿ ಅಲ್ಲಿ ಯಾವುದೇ ಕೈಗಾರಿಕೆ ಅಥವಾ ಸಂಬಂಧಪಟ್ಟ ಕಾರ್ಯಚಟುವಟಿಕೆಗಳನ್ನು ನಿರ್ಬಂಧಿಸಲು, ಪರಿಸರ ಮಾಲಿನ್ಯ ಉಂಟಾಗಬಹುದಾದ ಅಥವಾ ಕೆಲವು ವಲಯಗಳಲ್ಲಿ ಸತತವಾಗಿ ಉಂಟಾಗುವ ಅಪಘಾತಗಳನ್ನು ತಡೆಗಟ್ಟಲು ಮತ್ತಿತರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು, ಅಪಾಯಕಾರಿ ವಸ್ತುಗಳ ನಿರ್ವಹಣೆಗೆ ಸಂಬಂಧಪಟ್ಟ ಪ್ರಕ್ರಿಯೆಗಳಿಗೆ ಸಂಬಂಧಪಟ್ಟಂತೆ ಸಂರಕ್ಷಣಾ ಕ್ರಮಗಳನ್ನು ವಿಧಿಸಲು, ಪರಿಸರ ಮಾಲಿನ್ಯವನ್ನು ಉಂಟುಮಾಡುವ ತಯಾರಿಕಾ ಕಾರ್ಯವಿಧಾನಗಳನ್ನು, ಸಾಮಗ್ರಿಗಳನ್ನು ಮತ್ತು ವಸ್ತುಗಳನ್ನು ಪರಿಶೀಲಿಸಿ ಈ ಕುರಿತ ಸಮಸ್ಯೆಗಳನ್ನು ನಿವಾರಿಸಲು ಸೂಕ್ತ ತನಿಖೆ ಮತ್ತು ಸಂಶೋಧನೆಗಳನ್ನು ನಡೆಸಲು, ಮತ್ತು ಪರಿಸರ ಮಾಲಿನ್ಯವನ್ನು ತಡೆಗಟ್ಟುವ, ನಿಯಂತ್ರಿಸುವ ಮತ್ತು ಉಪಶಮನಗೊಳಿಸುವ ಉದ್ದೇಶಕ್ಕಾಗಿ ಅವಶ್ಯಕವೆಂದು ಕಂಡುಬರುವ ಯಾವುದೇ ಸೂಕ್ತ ಕ್ರಮವನ್ನು ಕೈಗೊಂಡು ಈ ಕುರಿತು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಅಥವಾ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಆದೇಶ ಅಥವಾ ನಿರ್ದೇಶನವನ್ನು ನೀಡಲು, ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಪ್ರಸಾರ ಮಾಡಲು, ಮತ್ತು ಈ ಉದ್ದೇಶಕ್ಕಾಗಿ ಅವಶ್ಯಕವೆಂದು ಎಂದು ಭಾವಿಸುವ ಯಾವುದೇ ಸೂಕ್ತ ಕ್ರಮವನ್ನು ಕೈಗೊಳ್ಳಲು ಸರಕಾರ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತದೆ. ಯಾವುದೇ ವಸತಿ ಪ್ರದೇಶಗಳಲ್ಲಿ ಪರಿಸರ ಮಾಲಿನ್ಯಕ್ಕೆ ಧಕ್ಕೆ ಅಥವಾ ಅಪಾಯ ಉಂಟು ಮಾಡುವ ರೀತಿಯಲ್ಲಿ ನಡೆಸುತ್ತಿರುವ ಉದ್ದಿಮೆ, ಕಾರ್ಖಾನೆ ಮತ್ತಿತರ ಅಪಾಯಕಾರಿ ಮತ್ತು ಉಪದ್ರಕಾರಿ ಕಾರ್ಯ ಚಟುವಟಿಕೆಗಳ ವಿರುದ್ಧ ಮೇಲ್ಕಾಣಿಸಿದ ಅಧಿನಿಯಮದ ಪ್ರಕಾರ ನಿಯೋಜಿಸಲ್ಪಟ್ಟಿರುವ ಪರಿಸರ ಸಂರಕ್ಷಣಾ ಮಂಡಳಿ ಅಥವಾ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಬಾಧಿತ ವ್ಯಕ್ತಿಗಳು ವೈಯಕ್ತಿಕವಾಗಿ ಅಥವಾ ಯಾವುದೇ ನೊಂದಾಯಿತ ಸಂಘ ಸಂಸ್ಥೆಗಳ ಮೂಲಕ ದೂರನ್ನು ನೀಡಿದಲ್ಲಿ ಸಂಬಂಧಪಟ್ಟ ಪರಿಶೀಲನೆ ನಡೆಸಿ ಅವಶ್ಯಕವೆಂದು ಕಂಡುಬಂದಲ್ಲಿ ಅಂತಹ ಅಪಾಯಕಾರಿ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸಲು ಅಥವಾ ಸಂಪೂರ್ಣವಾಗಿ ತಡೆಗಟ್ಟಲು ಮತ್ತು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಸಂಪೂರ್ಣ ಅಧಿಕಾರವನ್ನು ಸದರಿ ಪ್ರಾಧಿಕಾರದ ಅಧಿಕಾರಿಗಳು ಹೊಂದಿರುತ್ತಾರೆ.





























































































































error: Content is protected !!
Scroll to Top