ಕಾರ್ಕಳ : ಮಿಯ್ಯಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಜ್ಯಮಟ್ಟದ ಪುಷ್ಠಿ ಪ್ರಶಸ್ತಿಗೆ ಭಾಜನವಾಗಿದೆ. ಎಸ್‌ಡಿಎಂಸಿಗಳ ಸಾಧನೆಯನ್ನು ಪರಿಗಣಿಸಿ ರಾಜ್ಯ ಸರಕಾರವು ಪುಷ್ಠಿ ಕಾರ್ಯಕ್ರಮದಡಿ ಪ್ರಶಸ್ತಿ ನೀಡುತ್ತಿದ್ದು 2025ರ ಪ್ರಶಸ್ತಿಗೆ ಮಿಯ್ಯಾರು ಶಾಲೆ ಆಯ್ಕೆಯಾಗಿದೆ. ಮಾ. 26ರಂದು ಪ್ರಶಸ್ತಿ ಘೋಷಣೆಯಾಗಿದ್ದು ಶೀಘ್ರದಲ್ಲೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಉಡುಪಿ ಜಿಲ್ಲೆಯ 5 ಶಿಕ್ಷಣಾಧಿಕಾರಿಗಳ ವಲಯದಿಂದ 5 ಶಾಲೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
1 ಲಕ್ಷ ರೂ. ನಗದು
ಮಿಯ್ಯಾರು ಶಾಲೆ ಪುಷ್ಠಿ ಪ್ರಶಸ್ತಿಗೆ ಭಾಜನವಾದ ಹಿನ್ನೆಲೆಯಲ್ಲಿ ಈಗಾಗಲೇ 1 ಲಕ್ಷ ರೂ. ನಗದು ಶಾಲಾ ಎಸ್‌ಡಿಎಂಸಿಗೆ ಲಭಿಸಿದೆ. ಈ ಮೊತ್ತದಲ್ಲಿ ಶಾಲೆಗೆ ಸಿಸಿಟಿವಿ ಹಾಗೂ ಸ್ಮಾರ್ಟ್ ಟಿವಿ ಅಳವಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗೆ ?
ಮೊದಲ ಹಂತದಲ್ಲಿ ವಲಯ ಮಟ್ಟದ ಎಲ್ಲ ಕಿರಿಯ, ಹಿರಿಯ ಪ್ರಾಥಮಿಕ, ಹೈಸ್ಕೂಲ್ಗಳ ಇಲಾಖೆಯ ವಿದ್ಯಾವಾಹಿನಿ ಪೋರ್ಟಲ್ನಲ್ಲಿ ಅರ್ಜಿ ಪಡೆಯಲಾಗುತ್ತಿದೆ. ಬಳಿಕ ಆಯಾ ಕ್ಲಸ್ಟರ್ ಸಿಆರ್ಪಿಗಳು ಪರಶೀಲಿಸಿ ಮುಂದಿನ ಹಂತಕ್ಕೆ ವರದಿ ಸಲ್ಲಿಕೆ ಮಾಡುತ್ತಾರೆ. ಶಿಕ್ಷಣ ವಲಯದ ಹಂತದಿಂದ ತಾಲೂಕು ಮಟ್ಟಕ್ಕೆ ಕಿರಿಯ, ಹಿರಿಯ ಪ್ರಾಥಮಿಕ, ಹೈಸ್ಕೂಲ್ ಮಟ್ಟದ ಮೂರು ಶಾಲೆಗಳನ್ನು ಆಯ್ಕೆ ಮಾಡಲಾಗುವುದು. ಬಳಿಕ ತಾಲೂಕು ಮಟ್ಟದಲ್ಲಿ ಆಯ್ಕೆಯಾದ ಒಂಭತ್ತು ಶಾಲೆಗಳ ಸಮನ್ವಯಾಧಿಖಾರಿಗಳು, ಬಿಆರ್ಪಿ ಪರಿಶೀಲಿಸಿ ವರದಿ ನೀಡುತ್ತಾರೆ. ಶಿಕ್ಷಣಾಧಿಕಾರಿಗಳ ತಂಡ ಭೇಟಿ ನೀಡಿ ಮೂರು ಶಾಲೆಗಳನ್ನು ಜಿಲ್ಲಾಮಟ್ಟಕ್ಕೆ ಶಿಫಾರಸು ಮಾಡಿ, ಅನಂತರ ಜಿಲ್ಲಾ ಉಪ ನಿರ್ದೇಶಕರು, ಆಡಳಿತ ಮತ್ತು ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕರು, ಆಡಳಿತ ಮತ್ತು ಅಭಿವೃದ್ಧಿ ತಂಡದೊಂದಿಗೆ ಶಾಲೆಗೆ ಭೇಟಿ ನೀಡಿ ಅಂತಿಮ ಆಯ್ಕೆಯನ್ನು ರಾಜ್ಯಮಟ್ಟಕ್ಕೆ ಕಳುಹಿಸಿಕೊಡುತ್ತಾರೆ.

1901ರಲ್ಲಿ ಸ್ಥಾಪನೆಯಾದ ಮಿಯ್ಯಾರು ಪ್ರಾಥಮಿಕ ಶಾಲೆ ಕೆಲ ವರ್ಷಗಳ ಹಿಂದೆ ಉನ್ನತೀಕರಿಸಿದ ಶಾಲೆಯಾಗಿ ಮಾರ್ಪಾಡಯಿತು. ಪ್ರಸ್ತುತ ಶಾಲಾ ಎಸ್‌ಡಿಎಂಸಿ ವತಿಯಿಂದ ಎಲ್‌ಕೆಜಿ, ಯುಕೆಜಿ ತರಗತಿ ಆರಂಭವಾಗಿದೆ. ಸರಕಾರದ ಅನುಮತಿಯೊಂದಿಗೆ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿ ತೆರೆಯಲಾಗಿದೆ.
ಪ್ರಸ್ತುತ 8ರವರೆಗೆ ತರಗತಿಗಳಿದ್ದು, 135 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಸುಸಜ್ಜಿತ ಕಟ್ಟಡ, ಕ್ರೀಡಾಂಗಣ ಸೇರಿದಂತೆ ಮೂಲಭೂತ ಸೌಕರ್ಯಗಳಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ, ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣ ಇಲ್ಲಿದೆ.
ಎರಡು ಕೊಠಡಿ ಕೊಡುಗೆ
ಕ್ಯಾನ್‌ಫಿನ್ ಹೋಮ್ಸ್ ಲಿಮಿಟೆಡ್ ಸಂಸ್ಥೆಯ ಸಿಎಸ್‌ಆರ್ ನಿಧಿಯಿಂದ ಎರಡು ಕೊಠಡಿಗಳು ಮಂಜೂರಾಗಿದ್ದು ಎ. 9ರಂದು ಉದ್ಘಾಟನೆಗೊಳ್ಳಲಿದೆ. ನಿವೃತ್ತ ಲೆಕ್ಕಪರಿಶೋಧಕ ಕಾರ್ಕಳ ಕಮಲಾಕ್ಷ ಕಾಮತ್ ಅವರ ನೆರವಿನೊಂದಿಗೆ ವೇದಿಕೆ ನವೀಕರಣಗೊಂಡಿದೆ. ಊರವರ, ಹಳೆ ವಿದ್ಯಾರ್ಥಿಗಳ ಸಹಕಾರದೊಂದಿಗೆ ಶಾಲಾ ಅಭಿವೃದ್ಧಿ ಕಾರ್ಯಗಳು ಆಗುತ್ತಿದೆ.
ಮುಂದಿನ ದಿನಗಳಲ್ಲಿಯೂ ಹಳೆ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು, ಗ್ರಾಮಸ್ಥರೆಲ್ಲ ನಮ್ಮ ಶಾಲೆ ನಮ್ಮ ಹೆಮ್ಮೆ ಎಂಬ ಅಭಿಮಾನದಿಂದ ತೊಡಗಿಸಿಕೊಂಡಲ್ಲಿ ಮತ್ತಷ್ಟು ಉತ್ತಮ ಕಾರ್ಯಗಳು ಆಗಲಿದೆ.
ಎಂ. ಎಸ್. ಅಶೋಕ್
ಅಧ್ಯಕ್ಷರು, ಎಸ್‌ಡಿಎಂಸಿ
ಕ್ರಿಯಾಶೀಲ ಎಸ್‌ಡಿಎಂಸಿ ಹಾಗೂ ಶಿಕ್ಷಕ ವೃಂದದ ಪರಿಶ್ರಮ, ಜೊತೆಗೆ ಅಡುಗೆ ಸಿಬ್ಬಂದಿ ಕಾರ್ಯಕ್ಷಮತೆ, ಪೋಷಕರ ಪಾಲ್ಗೊಳ್ಳುವಿಕೆ, ಹಳೆ ವಿದ್ಯಾರ್ಥಿಗಳು, ಊರವರ ನೆರವಿನೊಂದಿಗೆ ಶಾಲೆ ಪ್ರಗತಿಯತ್ತ ಸಾಗುತ್ತಿದೆ. ನಮ್ಮ ಗ್ರಾಮದ ಮಕ್ಕಳನ್ನು ಪೇಟೆಯ ಶಾಲೆಗೆ ದಾಖಲಿಸದೇ ನಮ್ಮ ಶಾಲೆಗೆ ಸೇರಿಸಿ ಶಾಲೆಯನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನವಾಗಲಿ ಎಂಬ ಆಶಯ ನಮ್ಮದು.
ಸಂಜೀವ ದೇವಾಡಿಗ
ಮುಖ್ಯಶಿಕ್ಷಕರು






























































