ಕಾರ್ಕಳ : ತರುಣ ಭಾರತ ಚಾರಿಟೇಬಲ್ ಟ್ರಸ್ಟ್ ಹೆರ್ಮುಂಡೆ ಆಯೋಜನೆಯ ತುಳು ಲಿಪಿ ಆನ್ಲೈನ್ ಅಕ್ಷರಾಭ್ಯಾಸ ವರ್ಗದಲ್ಲಿ ಪಾಲ್ಗೊಂಡು ಸಾಧನೆ ಮಾಡಿದ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ ಮತ್ತು ಅಭಿನಂದನಾ ಕಾರ್ಯಕ್ರಮ ಮಾ. 23ರಂದು ಕಾರ್ಕಳ ಜೋಗಿನಕೆರೆ ಅಯ್ಯಪ್ಪ ಮಂದಿರದ ಸಭಾಂಗಣದಲ್ಲಿ ನಡೆಯಿತು.
ಯುವ ವಕೀಲ ಎಂ. ಕೆ. ವಿಪುಲ್ ತೇಜ್ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ತುಳುನಾಡು ಶ್ರೀಮಂತ ಪರಂಪರೆಯನ್ನು ಹೊಂದಿದ್ದು ತುಳು ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು. ತುಳು ಸಂಘಟಕ ವಿಶು ಶ್ರೀ ಕೇರ ತುಳು ಭಾಷೆಯ ಕುರಿತಾಗಿ ಮಾಹಿತಿ ಹಂಚಿಕೊಂಡರು.
ಕಾರ್ಕಳ ಬಂಡಿಮಠ ಶ್ರೀ ಕ್ಷೇತ್ರ ಜೋಗಿನಕೆರೆ ಅಯ್ಯಪ್ಪ ಮಂದಿರದ ಗುರುಸ್ವಾಮಿ ರಾಮಚಂದ್ರ ಆಚಾರ್ಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ಕಾರ್ಕಳ ಘಟಕದ ಅಧ್ಯಕ್ಷೆ ಮಮತಾ ಆರ್. ಅಂಚನ್, ತಾ. ಪಂ. ಮಾಜಿ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಪ್ರೊ. ಮಿತ್ರಪ್ರಭಾ ಹೆಗ್ಡೆ, ತರುಣ ಭಾರತ ಬಲೆ ತುಳು ಲಿಪಿ ಕಲ್ಪುಗ ಅಭ್ಯಾಸ ವರ್ಗದಲ್ಲಿ ಭಾಗವಹಿಸಿದ ಸದಸ್ಯರು, ಜೈ ತುಳುನಾಡು ಕಾರ್ಕಳ ಸಂಘಟನೆಯ ಸದಸ್ಯರು, ಜೋಗಿನಕೆರೆ ಅಯ್ಯಪ್ಪ ಮಂದಿರದ ಭಕ್ತರು ಮತ್ತು ತರುಣ ಭಾರತ ಚಾರಿಟೇಬಲ್ ಟ್ರಸ್ಟಿನ ಹಿತೈಷಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅಕ್ಷರ್ ಕುಮಾರ್ ಪ್ರಾರ್ಥಿಸಿದರು. ಅಶ್ವಿನಿ ಶೆಟ್ಟಿ ಸ್ವಾಗತಿಸಿ, ಸತೀಶ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೋನಿಕ ಭವಿತ್ ಕುಮಾರ್ ತುಳು ಲಿಪಿ ಅಕ್ಷರಾಭ್ಯಾಸ ಸಾಧಕರ ಅಭಿನಂದನಾ ಕಾರ್ಯಕ್ರಮ ನಿರ್ವಹಿಸಿದರು. ಪ್ರಜ್ವಲ್ ಕುಮಾರ್ ಜೈನ್ ಮುಂಡ್ಲಿ ಕಾರ್ಯಕ್ರಮ ನಿರೂಪಿಸಿದರು. ಉದಯ ಕುಲಾಲ್ ಬಜ್ಪೆ ವಂದಿಸಿದರು.































































