ಕಾರ್ಕಳದಲ್ಲಿ ಗುಡುಗು ಸಹಿತ ಗಾಳಿ ಮಳೆ

ಕಾರ್ಕಳ : ಕಾರ್ಕಳ ತಾಲೂಕಿನ ವಿವಿಧೆಡೆ ಮಾ. 25ರಂದು ಸಂಜೆ 4 ಗಂಟೆ ವೇಳೆಗೆ ಗುಡುಗು ಸಹಿತ ಗಾಳಿ ಮಳೆಯಾಗಿದೆ. ಆರಂಭದಲ್ಲಿ ಬೀಸಿದ ಬಿರುಗಾಳಿಗೆ ಮೈದಾನದಲ್ಲಿದ್ದ ಧೂಳು, ರಸ್ತೆ ಬದಿ ಅಗೆದ ಮಣ್ಣು, ಕಟ್ಟಡ ಕೆಲಸದ ಸ್ಥಳದಲ್ಲಿನ ಸೀಮೆಂಟ್‌ ಕಣಗಳು ಎಲ್ಲೆಡೆ ಗಾಳಿಯಲ್ಲಿ ಹಾರಿ ಆತಂಕ ಸೃಷ್ಟಿಸಿತು. ಇನ್ನು ವಿವಿಧೆಡೆ ಮರಗಳು ಧರೆಗುಳಿದಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ಮಳೆಯಿಂದಾಗಿ ಉರಿ ಬಿಸಿಲಿನಿಂದಾಗಿ ಒಣಗಿದ್ದ ಭೂಮಿ ತಂಪೇರಿದೆ.

ಗಾಳಿಗೆ ಹಾರಿದ ಶೀಟ್‌
ತಾಲೂಕು ಕೀಡಾಂಗಣದಲ್ಲಿ (ಮಂಗಳ ಸ್ಟೇಡಿಯಂ) ನಿರ್ಮಾಣ ಹಂತದಲ್ಲಿರುವ ಒಳಾಂಗಣ ಕ್ರೀಡಾಂಗಣದ ಮಹಡಿಗೆ ಅಳವಡಿಸಿದ್ದ ಶೀಟು ಹಾರಿ ಹೋಗಿದೆ. ಆನೆಕೆರೆ ರಸ್ತೆ ಸಮೀಪದ ಗೂಡಂಗಡಿಗಳಿಗೆ ಅಳವಡಿಸಿದ್ದ ಶೀಟುಗಳು ಗಾಳಿಯ ರಭಸಕ್ಕೆ ಹಾರಿ ರಸ್ತೆಯಲ್ಲೆಲ್ಲಾ ಹರಡಿತು.

ರಸ್ತೆ ಬ್ಲಾಕ್‌
ಕಾರ್ಕಳ ಪೇಟೆಯಿಂದ ಮಾರ್ಕೆಟ್‌ ರೋಡ್‌ ಆಗಿ ಬಂಡಿಮಠ ಸಂಪರ್ಕಿಸುವ ಪೆರ್ವಾಜೆ ರಸ್ತೆಯಲ್ಲಿ ಎಲ್‌ಐಸಿ ಕಚೇರಿ ಮುಂಭಾಗದಲ್ಲಿ ಬೃಹತ್‌ ಆಕಾರದ ಮರವೊಂದು ರಸ್ತೆಗೆ ಬಿದ್ದಿದ್ದು ರಸ್ತೆ ಬ್ಲಾಕ್‌ ಆಗಿದೆ. ಅಲ್ಲದೆ ಅಲ್ಲಿನ ಆವರಣ ಗೋಡೆ ಕುಸಿದಿದ್ದು, ವಿದ್ಯುತ್‌ ಕಂಬಗಳು ಹಾನಿಯಾಗಿದೆ.

ಕೋಟಿ ಚೆನ್ನಯ್ಯ ಥೀಮ್‌ ಪಾರ್ಕ್‌
ಗಾಳಿ ಮಳೆಯಿಂದಾಗಿ ಕೋಟಿ ಚೆನ್ನಯ್ಯ ಥೀಮ್‌ ಪಾರ್ಕ್‌ನ ಮುಂಭಾಗದ ರಸ್ತೆಯಲ್ಲಿ ವಿದ್ಯುತ್‌ ಕಂಬ ಮುರಿದು ಬಿದ್ದಿದೆ. ಇನ್ನು ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.

ಸ್ವರಾಜ್‌ ಮೈದಾನ ಬಳಿ ರಸ್ತೆ ಬದಿಯಲ್ಲಿದ್ದ ಹಲಸಿನ ಹಾಗೂ ಮಾವಿನ ಮರದ ಕೊಂಬೆಗಳು ಮುರಿದು ಬಿದ್ದಿದೆ. ಮಳೆ ಕಡಿಮೆಯಾಗುತ್ತಿದ್ದಂತೆ ಬಿದ್ದ ಹಲಸಿನ ಮರದಲ್ಲಿದ್ದ ಹಲಸಿನ ಕಾಯಿಯನ್ನು ಕೊಂಡೊಯ್ಯವಲ್ಲಿ ಸಾರ್ವಜನಿಕರು ಉತ್ಸುಕರಾಗಿದ್ದರು.

ಮುಡಾರು ಗ್ರಾಮದಲ್ಲಿ ಅಪಾರ
ಮುಡಾರು ಗ್ರಾಮದಲ್ಲಿ ಸುಮಾರು 7 ಸಾವಿರ ಕೋಳಿಗಳಿದ್ದ ಕೋಳಿ ಶೆಡ್‌ನ ಮೇಲ್ಛಾವಣಿ ಸಂಪೂರ್ಣವಾಗಿ ಜಖಂಗೊಂಡಿದೆ. ಎರಡೂವರೆ ಸಾವಿರ ಕೋಳಿ ಸಾವನಪ್ಪಿದೆ. ಗ್ರಾಮದ ವಿವಿಧೆಡೆ ಕೃಷಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.

ಕೆರ್ವಾಶೆ, ಶಿರ್ಲಾಲು, ತೆಳ್ಳಾರು, ಮುಂಡ್ಲಿ ಭಾಗದಲ್ಲಿ ಗುಡುಗಿನ ಆರ್ಭಟದೊಂದಿಗೆ ಭಾರಿ ಮಳೆಯಾಗಿದ್ದು, ರಬ್ಬರ್‌, ಅಡಿಕೆ ಮತ್ತು ಬಾಳೆ ಕೃಷಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಮಾಳ ಭಾಗದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಹೆಬ್ರಿ ತಾಲೂಕಿನ ವಿವಿಧೆಡೆಯೂ ಗಾಳಿ ಮಳೆಯಾಗಿದೆ.





























































































































error: Content is protected !!
Scroll to Top